ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಖ್ಯಾತ ಕಂಪನಿ ಜನರಲ್ ಎಲೆಕ್ಟ್ರಿಕ್ ಹಾಗೂ ಭಾರತದ ಸರಕಾರಿ ಸ್ವಾಮ್ಯದ ಸಂಸ್ಥೆ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. (ಎಚ್ಎಎಲ್) ನಡುವೆ ನಡೆದ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ .
ಈ ಒಪ್ಪಂದದ ಅನ್ವಯ ಭಾರತೀಯ ವಾಯುಪಡೆಗೆ ಬೇಕಾದ ಯುದ್ಧ ವಿಮಾನಗಳ ಎಂಜಿನ್ಗಳನ್ನು ಜನರಲ್ ಎಲೆಕ್ಷ್ಟ್ರಿಕ್ ತಯಾರಿಸಲಿದೆ ಎಂದು ಅಮೆರಿಕದ ಕಂಪನಿ ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜನರಲ್ ಎಲೆಕ್ಟ್ರಿಕ್ ಕಂಪನಿಯ ಪ್ರಕಾರ, ಈ ಒಪ್ಪಂದವು ಭಾರತದಲ್ಲಿ ಜನರಲ್ ಎಲೆಕ್ಟ್ರಿಕ್ ಏರೋಸ್ಪೇಸ್ನ ಎಫ್414 ಎಂಜಿನ್ಗಳ ಜಂಟಿ ಉತ್ಪಾದನೆಯನ್ನು ಒಳಗೊಂಡಿದೆ.
ಭಾರತದ ಎಸಿಎ ತೇಜಸ್ ಎಂಕೆ2 ಯುದ್ಧ ವಿಮಾನಗಳಲ್ಲಿ ಎಫ್414-ಐಎನ್ಎಸ್6 ಇಂಜಿನ್ಗಳನ್ನು ಬಳಸಲಾಗುತ್ತದೆ. ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಏರೋನಾಟಿಕಲ್ ಡೆವಲಪ್ವೆುಂಟ್ ಏಜೆನ್ಸಿ (ಎಡಿಎ) ಈ ಇಂಜಿನ್ಗಳನ್ನು ಆಯ್ಕೆ ಮಾಡಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ಈ ಹಿಂದೆ ಎರಡನೇ ತಲೆಮಾರಿನ ಲಘು ಯುದ್ಧ ವಿಮಾನಗಳಿಗೆ ಜನರಲ್ ಎಲೆಕ್ಟ್ರಿಕ್ ಏರೋಸ್ಪೇಸ್ನ ಎಫ್414 ಎಂಜಿನ್ ಅನ್ನು ಬಳಸಲು ಯೋಜಿಸಿರುವುದಾಗಿ ಹೇಳಿತ್ತು. ಹಾಗೂ ಎಂಜಿನ್ಗಳ ದೇಶೀಯ ಉತ್ಪಾದನೆಯ ಕುರಿತು ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿತ್ತು. ಈಗ ಜನರಲ್ ಎಲೆಕ್ಟ್ರಿಕ್ ಹಾಗೂ ಭಾರತದ ಎಚ್ಎಎಲ್ ನಡುವೆ ಮಹತ್ವದ ಒಪ್ಪಂದ ಏರ್ಪಟ್ಟಿದೆ.
ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳಿಗೆ ಶಕ್ತಿ ತುಂಬುವ ಜೆಟ್ ಇಂಜಿನ್ಗಳನ್ನು ಭಾರತದಲ್ಲೇ ಉತ್ಪಾದಿಸಲು ಜನರಲ್ ಎಲೆಕ್ಟ್ರಿಕ್ ಮುಂದಾಗಿದೆ. ಇದಕ್ಕೆ ಅವಕಾಶ ನೀಡುವ ಒಪ್ಪಂದಕ್ಕೆ ಸಹಿ ಹಾಕಲು ಅಮೆರಿಕದ ಜೋ ಬೈಡನ್ ಸರಕಾರವು ಸಿದ್ಧವಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯ್ಟರ್ಸ್ ಮೇ ತಿಂಗಳಿನಲ್ಲಿಯೇ ವರದಿ ಮಾಡಿತ್ತು.
ಇದೀಗ ಈ ನಿಟ್ಟಿನಲ್ಲಿ ಉಭಯ ಕಂಪನಿಗಳಾದ ಜನರಲ್ ಎಲೆಕ್ಟ್ರಿಕ್ ಹಾಗೂ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. ನಡುವೆ ಒಪ್ಪಂದ ನಡೆದಿದೆ. ಇದರ ಪ್ರಕಾರ ಬೆಂಗಳೂರು ಮೂಲದ ಎಚ್ಎಚ್ಎಲ್ನ ಸಹಯೋಗದೊಂದಿಗೆ ಭಾರತದಲ್ಲೇ ಜನರಲ್ ಎಲೆಕ್ಟ್ರಿಕ್ ಯುದ್ಧ ವಿಮಾನಗಳ ಎಂಜಿನ್ ತಯಾರಿಸಲಿದೆ. ಇದನ್ನು ಭಾರತದ ವಾಯು ಸೇನೆಯ ಯುದ್ಧ ವಿಮಾನಗಳಲ್ಲಿ ಬಳಸಲಾಗುತ್ತದೆ.
ಎಫ್414 ಎಂಜಿನ್ಗಳ ವೈಶಿಷ್ಟ್ಯವೇನು?
ಜನರಲ್ ಎಲೆಕ್ಟ್ರಿಕ್ ಏರೋಸ್ಪೇಸ್ ಪ್ರಕಾರ, ಟಬೋಫ್ಯಾನ್ ಎಂಜಿನ್, ಮಿಲಿಟರಿ ವಿಮಾನ ಇಂಜಿನ್ಗಳ ಭಾಗವಾಗಿದೆ. ಅಮೆರಿಕ ನೌಕಾಪಡೆಯು 30 ವರ್ಷಗಳಿಗೂ ಹೆಚ್ಚು ಕಾಲ ಇದನ್ನು ಬಳಸುತ್ತಿದೆ. 1,600ಕ್ಕಿಂತ ಹೆಚ್ಚು ಎಫ್ 414 ಇಂಜಿನ್ಗಳನ್ನು ವಿತರಿಸಲಾಗಿದೆ. 50 ಲಕ್ಷಕ್ಕೂ ಅಧಿಕ ಇಂಜಿನ್ ಇದು ವಿವಿಧ ಕಾರ್ಯಾಚರಣೆಗಳಲ್ಲಿ ಉತ್ತಮ ಸಹಕಾರವನ್ನು ನೀಡಿದೆ. ಈ ಇಂಜಿನ್ಗಳು ಫುಲ್ ಅಥಾರಿಟಿ ಡಿಜಿಟಲ್ ಎಲೆಕ್ಟ್ರಾನಿಕ್ ಕಂಟ್ರೋಲ್ (ಎಫ್ಎಡಿಇಸಿ) ರೀತಿಯ ಸುಧಾರಿತ ತಂತ್ರಜ್ಞಾನವನ್ನು ಹೊಂದಿವೆ. ಈ ಇಂಜಿನ್ ಅನ್ನು ಡಿಜಿಟಲ್ ವ್ಯವಸ್ಥೆ ಮೂಲಕ ನಿಯಂತ್ರಿಸಬಹುದಾಗಿದೆ. ಸುಧಾರಿತ ವಸ್ತುಗಳು ಮತ್ತು ಕೂಲಿಂಗ್ ತಂತ್ರಜ್ಞಾನಗಳ ಬಳಕೆಯಿಂದ ಇಂಜಿನ್ ಕಾರ್ಯಕ್ಷಮತೆ ಸುಧಾರಿಸಿದೆ. ಅಲ್ಲದೆ, ಬಾಳಿಕೆ ಕೂಡ ಹೆಚ್ಚಾಗಿದೆ.