ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಗಿನ್ನಿಸ್ ದಾಖಲೆ ಪುಟ ಸೇರಿದೆ.
ಯೋಗದಿನಾಚರಣೆಯಲ್ಲಿ ನ್ಯೂಯಾರ್ಕ್ ಮೇಯರ್, ವಿಶ್ವಸಂಸ್ಥೆ ಅಧಿಕಾರಿಗಳು, 180 ರಾಷ್ಟ್ರದ ಗಣ್ಯರು, ಅನಿವಾಸಿ ಭಾರತೀಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ವಿವಿಧ ದೇಶಗಳ ಜನರು ಒಂದೇ ಸಮಯದಲ್ಲಿ ಒಂದೇ ಕಡೆ ಒಟ್ಟಾಗಿ ಯೋಗ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ.
ಗಿನ್ನೆಸ್ ವಿಶ್ವ ದಾಖಲೆಯ ಅಧಿಕಾರಿ ಮೈಕೆಲ್ ಎಂಪ್ರಿಕ್ ಅವರು ಬುಧವಾರ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಲಾನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಸಿಸಾಬಾ ಕೊರೊಸಿ ಮತ್ತು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ವಿಶ್ವಸಂಸ್ಥೆಯಲ್ಲಿ ಮೊಳಗಿದ ಓಂಕಾರ:
ವಿಶ್ವಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಯೋಗಾಭ್ಯಾಸದ ಜೊತೆಗೆ ಓಂಕಾರವೂ ಮೊಳಗಿದೆ. ಹಲವು ವಿಶೇಷತೆಗಳು ಈ ಬಾರಿಯ ಯೋಗದಿನಾಚರಣೆಯಲ್ಲಿತ್ತು. ಯೋಗಾಭ್ಯಾಸಕ್ಕೂ ಮೊದಲು ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ಯೋಗ ಎಲ್ಲರಿಗೂ ಮುಕ್ತವಾಗಿದೆ. ಯೋಗ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ನೀಡುತ್ತದೆ. ಇಷ್ಟೇ ಅಲ್ಲ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಯೋಗ ಪ್ರಸ್ತಾಪ ಮುಂದಿಟ್ಟಾಗ ಇಡೀ ವಿಶ್ವವೇ ಜೊತೆಯಾಗಿ ಭಾರತವನ್ನು ಬೆಂಬಲಿಸಿದೆ. 2015ರಲ್ಲಿ ಯೋಗದಿನಾಚರಣೆ ಪ್ರಯುಕ್ತ ಸ್ಮಾರಕ ನಿರ್ಮಾಣ ಮಾಡಿದೆ. ಇದೀಗ ವಿಶ್ವಸಂಸ್ಥೆ 9ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆ ಎಲ್ಲಾ ವ್ಯವಸ್ಥೆ ಮಾಡಿರುವುದು ಸಂತಸ ತಂದಿದೆ ಎಂದು ಮೋದಿ ಹೇಳಿದ್ದಾರೆ.
ಉತ್ತಮ ಆರೋಗ್ಯ, ಪರಿಸರ ಪೂರಕ ವಾತಾವರಣ ನಿರ್ಮಾಣ ಮಾಡುವುದೇ ಭಾರತದ ಗುರಿ. ಯೋಗ ಭಾರತದಿಂದ ಬಂದಿದೆ. ಇದು ಅತ್ಯಂತ ಪುರಾತನ ಸಂಪ್ರದಾಯ. ನಮ್ಮ ಪ್ರಾಚೀನ ಸಂಪ್ರದಾಯ, ಜೀವಂತ ಉದಾಹರಣೆಯಾಗಿದೆ. ಯೋಗಕ್ಕೆ ಯಾವುದೇ ಹಕ್ಕುಸ್ವಾಮ್ಯವಿಲ್ಲ, ಯಾವುದೇ ಚಾರ್ಜ್ ಇಲ್ಲ. ಯೋಗವನ್ನು ಎಲ್ಲರೂ ಅಳವಡಿಸಬಹುದು ಎಂದು ಮೋದಿ ಹೇಳಿದ್ದಾರೆ.