ಅನ್ನ ಭಾಗ್ಯ ಜಾರಿ ಕುರಿತು ರಾಜ್ಯದಲ್ಲಿಅಕ್ಕಿ ರಾಜಕೀಯ ಜೋರಾಗಿಯೇ ನಡೆದಿತ್ತು. ಸಿಎಂ ಸಿದ್ದರಾಮಯ್ಯ ಅಕ್ಕಿಯ ವಿಚಾರವಾಗಿ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಮಾಡಿ ಅವರ ಜೊತೆ ಮಾತುಕತೆಯನ್ನು ನಡೆಸಿದ ಬೆನ್ನಲ್ಲೇ ಅನ್ನ ಭಾಗ್ಯ ಯೋಜನೆ, ಆಗಸ್ಟ್ 1ರಿಂದ ಜಾರಿಯಾಗಲಿದೆ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರವು ಹಿಂದೆ ಅನ್ನಭಾಗ್ಯ ಯೋಜನೆಯು ಜು. 1ರಿಂದ ಜಾರಿಗೊಳಿಸುವುದಾಗಿ ಹೇಳಿತ್ತು. ಆದರೆ, ಕೇಂದ್ರದಿಂದ ಆಹಾರ ಭದ್ರತೆ ಕಾಯ್ದೆಯಡಿ ಸರಬರಾಜು ಆಗುತ್ತಿದ್ದ ಅಕ್ಕಿಯನ್ನು ನಿಲ್ಲಿಸಿದ ಕಾರಣ ಅನ್ನಭಾಗ್ಯ ಜಾರಿ ವಿಳಂಬವಾಗಿದೆ ಎಂದು ಹೇಳಿದರು.
ಅನ್ಯ ರಾಜ್ಯಗಳಿಂದ ಅಕ್ಕಿ ಪಡೆಯಲು ಪ್ರಯತ್ನಿಸಲಾಗುತ್ತಿದೆ ಈಗಾಗಲೇ ಛತ್ತೀಸ್ ಗಢ ಹಾಗೂ ಪಂಜಾಬ್ ರಾಜ್ಯಗಳು ಅಕ್ಕಿ ಕೊಡುವುದಾಗಿ ಒಪ್ಪಿವೆ. ಛತ್ತೀಸ್ ಗಢದಿಂದ 1.4 ಮೆಟ್ರಿಕ್ ಟನ್ ಅಕ್ಕಿ ತರಿಸಿಕೊಳ್ಳುವ ಬಗ್ಗೆ ಮಾತುಕತೆಗಳು ನಡೆದಿವೆ ಎಂದು ಆಹಾರ ಸಚಿವರು ತಿಳಿಸಿದರು.
ಅನ್ನ ಭಾಗ್ಯ ಯೋಜನೆ ಜಾರಿಯಲ್ಲಿ ಅನೇಕ ತೊಡಕುಗಳು ಉಂಟಾಗಿವೆ. ಅಕ್ಕಿ ಕೊಡುವುದಾಗಿ ಎಫ್ಸಿಐ ಹೇಳಿ ಈಗ ಹಿಂದೆ ಸರಿದಿದೆ. ಇದರಿಂದ ನಾವು ಬೇರೆ ರಾಜ್ಯಗಳತ್ತ ಮುಖ ಮಾಡಬೇಕಿದೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಸ್ಟಾಕ್ ಇಲ್ಲ. ಇನ್ನೂ ಕೆಲವು ರಾಜ್ಯಗಳಲ್ಲಿ ನಮ್ಮ ಅಗತ್ಯಕ್ಕೆ ತಕ್ಕಂತೆ ಅಕ್ಕಿ ಸಿಗುತ್ತಿಲ್ಲ ಎಂದು ವಿವರಿಸಿದರು.
ಸದ್ಯಕ್ಕೆ ಛತ್ತೀಸ್ ಗಡ ರಾಜ್ಯದ ಜೊತೆಗೆ ಮಾತುಕತೆ ನಡೆಯುತ್ತಿದೆ. ಆದರೆ ಶಾಶ್ವತವಾಗಿ ಅಕ್ಕಿಯನ್ನು ಸರಬರಾಜು ಮಾಡುವಂಥ ಮೂಲವನ್ನು ಸರ್ಕಾರ ಹುಡುಕುತ್ತಿದೆ. ಸದ್ಯಕ್ಕೆ ಸರ್ಕಾರ ತನ್ನದೇ ಆದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದೆ. ಆದರಿಂದ ಅನ್ನ ಭಾಗ್ಯ ಯೋಜನೆ ಜಾರಿಗೆ ಕೊಂಚ ಸಮಯ ಬೇಕು ಎಂದು ಸಚಿವರು ತಿಳಿಸಿದರು.
ಛತ್ತೀಸ್ಗಡ 1.5 ಲಕ್ಷ ಟನ್ ಅಕ್ಕಿ , ತೆಲಂಗಾಣ ಗೋಧಿ ಹಾಗೂ ಪಂಜಾಬ್ ಅಕ್ಕಿಯನ್ನು ನೀಡಲು ಒಪ್ಪಿಗೆಯನ್ನು ಕೊಟ್ಟಿದೆ ಆದರೆ, ಈ ರಾಜ್ಯಗಳಿಂದ ಸಾಗಾಟಕ್ಕೆ ಸಾರಿಗೆ ವೆಚ್ಚ ಜಾಸ್ತಿ ಆಗಲಿದೆ ಎಂದು ಸಚಿವರು ಹೇಳಿದರು.
ಸಿದ್ದರಾಮಯ್ಯನವರು ಕೇಂದ್ರ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅಕ್ಕಿ ವಿತರಣೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಇನ್ನು ಕೇಂದ್ರದಿಂದ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ, ಅದೂ ಸಹ ಯೋಜನೆಯನ್ನು ಮೊದಲೇ ತಿಳಿಸಿದ ದಿನಾಂಕದಂದು ಶುರು ಮಾಡದೇ ಇರಲು ಕಾರಣವಾಗಿದೆ ಎಂದು ಹೇಳಿದರು.