ಬಾಯಾರಿಕೆ ಆದಾಗ ನೀರು ಕುಡಿಯುತ್ತೇವೆ. ಅದು ಹೇಗೆ ಎಲ್ಲಿ ಎಂದು ಕೆಲವೊಮ್ಮೆ ನಾವು ನೋಡುವುದಿಲ್ಲ. ಪ್ರತಿದಿನ ನಾವು ಕನಿಷ್ಠ 2 ರಿಂದ 3 ಲೀಟರ್ ನೀರನ್ನು ಕುಡಿಯಲೆಬೇಕು. ಆದರೆ ನಿಂತುಕೊಂಡು ನೀರು ಕುಡಿಯುವುದು ಸರಿಯಲ್ಲ. ಅಲ್ಲದೆ ನಿಂತು ಹೆಚ್ಚು ನೀರು ಕುಡಿಯಲು ಸಾಧ್ಯವಾಗುವುದಿಲ್ಲ. ಇದರಿಂದ ದೇಹವು ನಿರ್ಜಲೀಕರಣಗೊಳ್ಳಬಹುದು. ಜೊತೆಗೆ ವಿವಿಧ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ.
ಜೀವ ಸಂಕುಲದ ಸಂಜೀವಿನಿ ನೀರು. ನೀರು ಬಾಯಾರಿಕೆಯನ್ನು ನೀಗಿಸುವುದರ ಜೊತೆಗೆ ದೇಹಕ್ಕೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತವೆ. ಆದರೆ ನೀರನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸದಿದ್ದರೆ ಅಪಾಯ ಮಾತ್ರ ತಪ್ಪಿದ್ದಲ್ಲ. ಎಷ್ಟು ಜಾಸ್ತಿ ಕುಡಿಯುತ್ತೇವೋ ಅಷ್ಟು ಒಳ್ಳೆಯದು. ಅದರಲ್ಲಿಯೂ ನಿಂತುಕೊಂಡು ನೀರು ಕುಡಿಯುವುದರಿಂದ ನಾನಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ನೀರು ಕುಡಿದ ನಂತರ ದೇಹ ಶುದ್ಧಿಕರಣಗೊಳ್ಳಲು ಪ್ರಾರಂಭವಾಗುತ್ತದೆ. ಅದರಲ್ಲಿಯೂ ನಿಂತುಕೊಂಡು ನೀರು ಕುಡಿಯುವುದರಿಂದ ದೇಹದೊಳಗಿನ ಪೊರೆಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಶುದ್ಧೀಕರಣಕ್ಕೆ ಅಡಚಣೆ ಉಂಟಾಗುತ್ತದೆ. ನಿಂತುಕೊಂಡು ನೀರು ಕುಡಿಯುವುದರಿಂದ ನೇರವಾಗಿ ಹೊಟ್ಟೆಗೆ ತೊಂದರೆಯಾಗುತ್ತದೆ. ಕೆಳ ಹೊಟ್ಟೆ ನೋವು ಸೇರಿದಂತೆ ಹಲವಾರು ಸಮಸ್ಯೆಗಳು ಬರಬಹುದು.
ನಿಂತಲ್ಲೇ ನೀರು ಕುಡಿಯುವುದು ಸಂಧಿವಾತಕ್ಕೆ ಕಾರಣವಾಗಬಹುದು. ಏಕೆಂದರೆ ನಿಂತುಕೊಂಡು ನೀರು ಕುಡಿದರೆ ದೇಹದ ನೀರಿನ ಸಮತೋಲನವನ್ನು ಹಾಳು ಮಾಡುತ್ತದೆ ಮತ್ತು ದೀರ್ಘಕಾಲ ಹೀಗೆ ಮಾಡಿದರೆ ಸಂಧಿವಾತದ ಸಮಸ್ಯೆ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ.
ಮೂತ್ರಪಿಂಡಗಳು ಕಾರ್ಯನಿರ್ವಹಿಸಲು ನೀರು ಸಹಾಯ ಮಾಡುತ್ತದೆ. ಆದರೆ ನಿಂತುಕೊಂಡು ನೀರು ಕುಡಿಯುವುದರಿಂದ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಏಕೆಂದರೆ ನೀರು ನೇರವಾಗಿ ಮೂತ್ರಪಿಂಡಗಳಿಗೆ ಹೋಗುವುದಿಲ್ಲ.
ನಿಂತು ನೀರು ಕುಡಿಯುವುದರಿಂದ ನಮ್ಮ ಎದೆಯ ಸ್ನಾಯುಗಳ ಮೇಲೆ ಒತ್ತಡ ಬೀಳುತ್ತದೆ. ಪರಿಣಾಮವಾಗಿ, ನಮ್ಮ ಹೃದಯದ ಮೇಲೆ ಒತ್ತಡವೂ ಉಂಟಾಗಿ ಎದೆಯ ಸ್ನಾಯುಗಳ ಮೇಲಿನ ಈ ಒತ್ತಡವು ಡಿಸ್ಫೇಜಿಯಾದಿಂದ ಉಸಿರುಗಟ್ಟುವಿಕೆಗೆ ಕಾರಣವಾಗಬಹುದು.
ನೀರು ಕುಡಿಯಲು ಸರಿಯಾದ ಮಾರ್ಗವೆಂದರೆ ಕುಳಿತುಕೊಂಡು ಸ್ವಲ್ಪ ಸ್ವಲ್ಪವೆ ಗುಟುಕು ಗುಟುಕು ಮಾಡಿ ನೀರು ಕುಡಿಯುವುದು ಒಳ್ಳೆಯದು. ಮುಖ ಕೆಳಗೆ ಅಥವಾ ನೇರ ಮಾಡಿ ನೀರನ್ನು ಕುಡಿಯಿರಿ. ರಸ್ತೆಯಲ್ಲಿ ಕುಳಿತು ನೀರು ಕುಡಿಯಲು ಸಾಧ್ಯವಾಗದಿದ್ದರೆ, ಬಾಯಾರಿಕೆ ನೀಗಿಸುವ ಸಲುವಾಗಿ ಸ್ವಲ್ಪ ನೀರು ಕುಡಿಯಿರಿ. ನಿಮಗೆ ಸಾಧ್ಯವಾದರೆ ನಂತರ ಕುಳಿತುಕೊಂಡು ಕುಡಿಯುವುದು ತುಂಬಾ ಉತ್ತಮ.