ಬೆoಗಳೂರು: ರಾಜ್ಯ ದಲ್ಲಿ ವಿವಿಧ ವಿದ್ಯುತ್ ಸರಬರಾಜು ಕಂಪೆನಿಗಳು ವಿದ್ಯುತ್ ಬಳಕೆ ಪ್ರಮಾಣವನ್ನು ಲೆಕ್ಕ ಹಾಕುವಾಗ ನಾಲ್ಕು ಸ್ಲಾಬ್ ಗಳ ಬದಲಿಗೆ ಎರಡು ಸ್ಲಾಬ್ ಗಳಿಗೆ ಪರಿಷ್ಕರಿಸಿರುವುದರಿಂದ ಮತ್ತು ಪ್ರತೀ ಯುನಿಟ್ ಗೆ ವಿದ್ಯುತ್ ದರವನ್ನು ೭೦ ಪೈಸೆ ಹೆಚ್ಚಿಸಿದ್ದುದರಿಂದ ಜನತೆ ವಿದ್ಯುತ್ ಬಿಲ್ ಕಟ್ಟಲಾಗದೇ ಶಾಪ ಹಾಕುತ್ತಿದ್ದಾರೆ.
ಎಲ್ಲರಿಗೂ ಉಚಿತ ೨೦೦ ಯೂನಿಟ್ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ವಿದ್ಯುತ್ ದರ ಏರಿಕೆಗೆ ಹಿಂದಿನ ಬಿಜೆಪಿ ಕಾರಣ ಎಂದು ಹೇಳಿ ಕೈ ತೊಳೆದುಕೊಂಡಿದೆ. ಆದರೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವಲ್ಲಿ ಮಾತ್ರ ಕೂಡಲೇ ಕ್ರಮ ತೆಗೆದುಕೊಂಡಿದೆ.
ಈ ನಡುವೆ ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡಲು ಹಾಲು ಒಕ್ಕೂಟಗಳು ಮುಂದಾಗಿವೆ. ಹಾಲು ಉತ್ಪಾದನೆಯ ವೆಚ್ಚ ಹೆಚ್ಚಾಗಿರುವುದರಿಂದ ಮತ್ತು ಹಾಲು ಸಂಗ್ರಹ, ಸಂಸ್ಕರಣೆಯ ವೆಚ್ಚವೂ ಏರಿಕೆ ಆಗಿರುವ ಕಾರಣ ನೀಡಿರುವ ಹಾಲು ಒಕ್ಕೂಟಗಳು ದರ ಏರಿಕೆಗೆ ಸರ್ಕಾರಕ್ಕೆ ಬಿಗಿಪಟ್ಟು ಹಾಕಿವೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಒಟ್ಟು 14 ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಹಾಲಿನ ದರ ಏರಿಸಲು ಸರ್ಕಾರದ ಮೇಲಿನ ಒತ್ತಡ ಹಾಕುತ್ತಿವೆ. ಈ ವಾರ ಇದೇ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿರುವ ಒಕ್ಕೂಟಗಳ ನಿಯೋಗ ತಮ್ಮ ಬೇಡಿಕೆಯನ್ನು ಮುಂದಿಡಲಿದೆ.
೧೪ ಹಾಲು ಒಕ್ಕೂಟಗಳೂ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಏರಿಕೆಗೆ ಮನವಿ ಮಾಡಿಕೊಂಡಿವೆ. ಆದರೆ ಕೆಎಂಎಫ್ ರಾಜ್ಯ ಸರ್ಕಾರವು ಮೂರು ರೂಪಾಯಿ ದರ ಏರಿಕೆಗೆ ಮನವಿ ಮಾಡಿಕೊಂಡಿದೆ. ಈ ಮೂರು ರೂಪಾಯಿಗಳಲ್ಲಿ ರೈತರಿಗೆ ಪ್ರತೀ ಲೀಟರ್ ಗೆ ಒಂದು ರೂಪಾಯಿ ಹೆಚ್ಚಿಗೆ ಬೆಲೆ ನೀಡಿ ಖರೀದಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಸಿಲಿಂಡರ್, ವಿದ್ಯುತ್ ಬಿಲ್ ದರವೂ ದುಬಾರಿಯಾಗಿದೆ. ಹಾಲಿನ ದರ ಏರಿಕೆಯ ಕುರಿತು ಶೀಘ್ರದಲ್ಲೇ ಕೆಎಂಎಫ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಲಿದ್ದಾರೆ. ಹಾಲಿನ ದರ ಏರಿಕೆ ಸಂಬಂಧ ಸಾಧಕ-ಬಾಧಕಗಳನ್ನು ಚರ್ಚಿಸಲು ಸಿಎಂ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಮುಖ್ಯ ಮಂತ್ರಿಗಳು ಹಸಿರು ನಿಶಾನೆ ತೋರಿದರೆ ಲೀಟರ್ ಹಾಲಿಗೆ ಮೂರು ರೂಪಾಯಿ ದರ ಹೆಚ್ಚಳ ಆಗಲಿದೆ.
ಈ ಹಿಂದೆ ಗುಜರಾತ್ ಮೂಲದ ಅಮುಲ್ ಸಂಸ್ಥೆ ತನ್ನ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಲು ಕೆಲವು ಕನ್ನಡ ಪರ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದವು. ಇದೀಗ ಕೇರಳ ರಾಜ್ಯ ಸರ್ಕಾರವು ನಂದಿನಿ ಹಾಲಿನ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದೆ. ಉತೃಷ್ಟ ಗುಣ ಮಟ್ಟ ಹಾಗೂ ಕಡಿಮೆ ದರದ ಕಾರಣದಿಂದ ನಂದಿನಿ ಹಾಲು ದೇಶಾದ್ಯಂತ ಉತ್ತಮ ಮಾರುಕಟ್ಟೆ ಹೊಂದಿದೆ. ಇತ್ತೀಚೆಗೆ ಕೇರಳದ ಮಲಪ್ಪುರಂ ಜಿಲ್ಲೆಯ ಮಂಚೇರಿ ಹಾಗೂ ತಿರೂರ್, ಎರ್ನಾಕುಲಂ ಜಿಲ್ಲೆಯ ಕೊಚ್ಚಿ ಹಾಗೂ ಪತ್ತನಂತಿಟ್ಟ ಜಿಲ್ಲೆಯ ಪಂಡಲಂನಲ್ಲಿ ನಂದಿನಿ ತನ್ನ ಮಾರಾಟ ಮಳಿಗೆಗಳನ್ನು ತೆರೆದಿತ್ತು. ಇದಲ್ಲದೆ ಕೇರಳದ ಪ್ರಮುಖ ನಗರಗಳ ಸೂಪರ್ ಮಾರ್ಕೆಟ್ಗಳಲ್ಲಿ ನಂದಿನಿ ಉತ್ಪನ್ನಗಳು ಮಾರಾಟವಾಗುತ್ತಿವೆ. ಆದರೆ ಸರ್ಕಾರದ ಅನುಮತಿ ಪಡೆಯದೆ ತನ್ನ ರಾಜ್ಯದಲ್ಲಿ ನಾಲ್ಕು ಮಾರಾಟ ಮಳಿಗೆಗಳನ್ನು ತೆರೆದಿರುವುದಕ್ಕೆ ಕೇರಳ ಸರ್ಕಾರ ಹಾಗೂ ಕೇರಳ ಹಾಲು ಮಾರಾಟ ಒಕ್ಕೂಟ (ಮಿಲ್ಮಾ) ಆಕ್ರೋಶ ವ್ಯಕ್ತಪಡಿಸಿವೆ. ಈ ಸಂಬಂಧ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ ದೂರು ನೀಡಲೂ ನಿರ್ಧರಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಪಶುಸಂಗೋಪನಾ ಸಚಿವೆ ಜೆ.ಚಿಂಚುರಾಣಿ, ಒಂದು ರಾಜ್ಯದಲ್ಲಿ ವ್ಯವಹಾರ ನಡೆಸಲು ಪ್ರವೇಶ ಬಯಸುತ್ತೀರಿ ಎಂದಾದರೆ ಅಲ್ಲಿನ ಸರ್ಕಾರಗಳಿಂದ ಅನುಮತಿಯನ್ನು ಪಡೆಯಲೇಬೇಕಾಗುತ್ತದೆ. ಆದರೆ ಕೆಎಂಎಫ್ನ ‘ನಂದಿನಿ’ ಬ್ರ್ಯಾಂಡ್ ಆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿದೆ. ‘ಮಿಲ್ಮಾ’ ದೇಶದಲ್ಲೇ ಅತ್ಯುತ್ತಮ ಗುಣಮಟ್ಟದ ಹಾಲು ಪೂರೈಸುತ್ತದೆ. ನಂದಿನಿ ಏನೂ ಅಷ್ಟು ಉತ್ತಮ ಗುಣಮಟ್ಟದ್ದಲ್ಲ. ಅದರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ಕೇರಳದಲ್ಲಿ ಯಾರೂ ನಂದಿನಿಯನ್ನು ಖರೀದಿಸಬಾರದು ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮಾತನಾಡಿರುವ ಮಿಲ್ಮಾದ ಮಲಬಾರ್ ವಲಯ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ. ಎಸ್. ಮಣಿ, ದೀರ್ಘಾವಧಿಯಿಂದ ಪಾಲಿಸಿಕೊಂಡು ಬಂದಿರುವ ಅಭ್ಯಾಸ ಹಾಗೂ ಸಂಪ್ರದಾಯಗಳನ್ನು ಉಲ್ಲಂಘನೆ ಮಾಡುವುದು ಯಾವುದೇ ಹಾಲು ಒಕ್ಕೂಟಕ್ಕೆ ನೈತಿಕವಾಗಿ ಸರಿಯಾದುದಲ್ಲ. ಕೇರಳದಲ್ಲಿ ಮಳಿಗೆ ಸ್ಥಾಪಿಸುವ ಮುನ್ನವೇ ವಿರೋಧಿಸಿ ಕೆಎಂಎಫ್ಗೆ ಪತ್ರ ಬರೆದಿದ್ದೆ. ಅವರು ಅದನ್ನು ಉಪೇಕ್ಷಿಸಿದ್ದರು ಎಂದು ಹೇಳಿದ್ದಾರೆ. ಮಿಲ್ಮಾ ಹಾಲು ನಂದಿನಿಗಿಂತ ೭ ರೂಪಾಯಿ ದುಬಾರಿ ಆಗಿದ್ದು ಮಿಲ್ಮಾ ಹಾಲಿನ ಮಾರುಕಟ್ಟೆಯನ್ನು ನಂದಿನಿ ಪಡೆಯಲಿದೆ ಎಂಬುದು ಕೇರಳ ರಾಜ್ಯ ಸರ್ಕಾರದ ಪ್ರತಿರೋಧಕ್ಕೆ ಕಾರಣವಾಗಿದೆ.
ಹಬ್ಬದ ಸಂದರ್ಭದಲ್ಲಿ ಹಾಗೂ ಕೇರಳದಲ್ಲಿ ಹಾಲು ಉತ್ಪಾದನೆ ಕಡಿಮೆಯಾದಾಗ ನಂದಿನಿ ಮತ್ತು ತಮಿಳುನಾಡಿನ ಅವಿನ್ ಹಾಲು ಕೇರಳಕ್ಕೆ ಸರಬರಾಜು ಆಗುತ್ತದೆ.