ಲವ್ ಮಾಕ್ಟೇಲ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಡಾರ್ಲಿಂಗ್ ಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿತ್ತಾರೆ. ಇದೀಗ ರಚಿತಾ ರಾಮ್ ಜತೆಗೆ ನಟಿಸಿರುವ ಬಹುನಿರೀಕ್ಷಿತ ’ಲವ್ ಮೀ ಆರ್ ಹೇಟ್ ಮೀ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಮೊದಲ ಬಾರಿಗೆ ತೆರೆಮೇಲೆ ಡಾರ್ಲಿಂಗ್ ಕೃಷ್ಣ ಮತ್ತು ರಚಿತಾ ರಾಮ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿ ಇವರಿಬ್ಬರನ್ನು ಜೋಡಿಯಾಗಿ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ .
”ಲವ್ ಮೀ ಆರ್ ಹೇಟ್ ಮೀ’ ಸೆಪ್ಟೆಂಬರ್ 29 ರಂದು ಬಿಡುಗಡೆಯಾಗಲಿದ್ದು, ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಸದ್ಯ ಹಾಡುಗಳ ಚಿತ್ರೀಕರಣವನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ ಎಂದು ಚಿತ್ರತಂಡ ಹೇಳಿದೆ.
’ಕಾಳಿದಾಸ ಕನ್ನಡ ಮೇಷ್ಟ್ರು’, ‘ನನ್ನ ಪ್ರಕಾರ’ ಮುಂತಾದ ನೂರಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿದ ದೀಪಕ್ ಗಂಗಾಧರ್ ಅವರು ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ‘ಲವ್ ಮೀ ಆರ್ ಹೇಟ್ ಮೀ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ದೀಪಕ್ ಗಂಗಾಧರ್ ಮೂವೀಸ್ ಲಾಂಛನದಲ್ಲಿ ದೀಪಕ ಗಂಗಾಧರ್ ಅವರ ಜೊತೆಗೆ ಸುನೀಲ್ ಬಿ ಎನ್, ಮದನ್ ಗಂಗಾಧರ್, ಚಂದನ್ ಜೆ ಹಾಗೂ ನಾಗರಾಜ್ ಗೌಡ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು, ಶ್ರೀನಿಧರ್ ಸಂಭ್ರಮ್ – ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಮುರಳಿ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್, ರಘು ನಡವಳ್ಳಿ ಹಾಗೂ ರಘು ಸಂಭಾಷಣೆ ಬರೆದಿದ್ದಾರೆ.
ರೂಪೇಶ್ ಶೆಟ್ಟಿ, ನಂದಿನಿ, ರಾಕೇಶ್ ಪೂಜಾರಿ, ದೀಪಿಕಾ, ಪ್ರವೀಣ್, ಸುಂದರ್ ವೀಣಾ, ರಮೇಶ್ ಭಟ್ ಮುಂತಾದವರು ಲವ್ ಮೀ ಆರ್ ಹೇಟ್ ಮೀ ಚಿತ್ರದಲ್ಲಿ ನಟಿಸಿದ್ದಾರೆ. ಅತ್ತ ಡಾರ್ಲಿಂಗ್ ಕೃಷ್ಣ ನಟನೆಯ ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ಶೂಟಿಂಗ್ ಕೂಡ ಮುಗಿದಿದ್ದು, ಬಿಡುಗಡೆಗೆ ಸಿದ್ದವಾಗಿದೆ.