ತುಳು ಸಿರಿ ಕಾವ್ಯವನ್ನು ತುಳುನಾಡಿನ ಬೆಳಕು ಎಂದು ಕರೆದಿದ್ದ ತುಳು ಜನಪದ ಮಹಾಕವಿ ಮಾಚಾರು ಗೋಪಾಲ ನಾಯಿಕ ಇಹಲೋಕವನ್ನು ತ್ಯಜಿಸಿದ್ದಾರೆ. ಎಂಬತ್ತೈದರ ಹರೆಯದ ಗೋಪಾಲ ನಾಯಿಕ ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮಾಚಾರಿನವರು.
ಸಿರಿ ಸಂಧಿಯನ್ನು 15,683 ಸಾಲುಗಳಲ್ಲಿ ಕಟ್ಟಿಕೊಟ್ಟ ಮಹಾಗಾಯಕ ಇವರು. ತುಳುವಿನ ಮೂಲ ಪಠ್ಯ ಮತ್ತು ಅದರ ಅನುವಾದಗೊಂಡ ಇಂಗ್ಲೀಷ್ ಪಠ್ಯಗಳು ಗೋಪಾಲ ನಾಯಿಕ ಇವರ ಹೆಸರಿನಲ್ಲೆ ಪ್ರಕಟಗೊಂಡಿವೆ. ಇವರು ಕೇವಲ ಸಿರಿ ಸಂಧಿ ,ಮಾತ್ರವಲ್ಲದೇ ಪಾಡ್ದನ, ಕತೆ ಮತ್ತು ಕವಿತೆಗಳ ಭಂಡಾರವನ್ನು ಹೊಂದಿದ್ದರು. ಸಿರಿ ಕಾವ್ಯದ ಸಂಗ್ರಹ ಮತ್ತು ಅಧ್ಯಯನ ತಂಡದ ಮುಖ್ಯ ಸದಸ್ಯರಾಗಿ ಜನಪದ ಮಹಾಕಾವ್ಯಗಳ ನಿರ್ಮಾಣ ಮತ್ತು ಮರುಕಟ್ಟುವಿಕೆಗೆ ಸಂಬಂಧಿಸಿದಂತೆ ಸ್ವಂತ ಸಿದ್ಧಾಂತವನ್ನು ಮಂಡಿಸಿದ್ದರು. ಸಿರಿ ಜಾತ್ರೆ ನಡೆಯುವ ಸಂದರ್ಭದಲ್ಲಿ ಸಿರಿ ಕಕಾವ್ಯಗಳನ್ನು ಹಾಡುತ್ತಾರೆ. ಆ ಹಾಡುಗಳು ಇಂದಿಗೂ ಪ್ರಸ್ತುತವಾಗಿದೆ ಆದರಿಂದ ಇಂತಹ ಸಿರಿ ಕಾವ್ಯವನ್ನು ನಾಯಿಕ ಅವರು ತುಳುನಾಡಿನ ಬೆಳಕು ಎಂದು ಕರೆದು ಸಿರಿ ಆಚರಣೆಗಳ ಪರಂಪರೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಸಿರಿ ಜಾತ್ರೆಯಲ್ಲಿ ಕುಮಾರನಾಗಿ ಸುಮಾರು ಐವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ನೂರಾರು ಸಿರಿ ಮಹಿಳೆಯರ ತಂಡದ ನಾಯಕರಾಗಿದ್ದರು. ಕೌಟುಂಬಿಕ ಸಮಸ್ಯೆಗಳಿಗೆ ಮಾರ್ಗದರ್ಶಕರಾಗಿ ಸಲಹೆಗಳನ್ನು ನೀಡುತ್ತಿದ್ದರು.
ಜಾಗತಿಕ ಜಾನಪದ ವಿದ್ವಾಂಸ ಫಿನ್ಲೆಂಡ್ನ ಲೌರಿ ಹೋಂಕೊ ಅವರು ಫಿನ್ನಿಷ್ ಇಂಡಿಯಾ ಜಾನಪದ ದಾಖಲಾತಿ ಮಾಡುವ ಯೋಜನೆಯನ್ನು ರೂಪಿಸಿದರು. ಅಧ್ಯಯನದ ಸಲುವಾಗಿ ಎರಡು ಮುಖ್ಯ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದರು. ಮೊದಲನೆಯದು ಫಿನ್ನಿಷ್ ಇಂಡಿಯನ್ ಮೌಖಿಕ ಜಾನಪದ ಅಧ್ಯಯನ ಹಾಗೂ ಕ್ಷೇತ್ರಕಾರ್ಯ ತರಬೇತು ಕಾರ್ಯಾಗಾರ(1989) .ಈ ಕಾರ್ಯಾಗಾರವು ಧರ್ಮಸ್ಥಳದಲ್ಲಿ ನಡೆಯಿತು. ಕಾರ್ಯಗಾರಕ್ಕೆ ಮತ್ತು ಸಿರಿಕಾವ್ಯ ಸಂಗ್ರಹ ಯೋಜನೆಗೆ ಧರ್ಮಸ್ಥಳದ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಿರಂತರವಾಗಿ ಸಹಾಯ ಸಹಕಾರವನ್ನು ನೀಡಿದ್ದರು .
ಎರಡನೆಯದು ಸಿರಿ ಮಹಾಕಾವ್ಯದ ಪಠ್ಯೀಕರಣ ಯೋಜನೆ ( 1990). ಜಗತ್ತಿನ ಜನಪದ ಮಹಾಕಾವ್ಯಗಳ ಸಂಗ್ರಹ, ಸಂಪಾದನೆ ಮತ್ತು ಪಠ್ಯೀಕರಣದ ಬೃಹತ್ ಯೋಜನೆಯ ಭಾಗವಾಗಿ ಸಿರಿ ಕಾವ್ಯದ ಸಂಗ್ರಹ , ಸಂಪಾದನೆ ಮತ್ತು ಪ್ರಕಟನೆಯ ಕೆಲಸವು ಗೋಪಾಲ ನಾಯಿಕರ ಸಹಭಾಗಿತ್ವದಲ್ಲಿ ನಡೆಯಿತು.
ಗೋಪಾಲ ನಾಯಿಕ ಮಹಾಕಾವ್ಯಗಳ ಭಂಡಾರ :
ಜನಪದ ಪುರಾಣಗಳು ಮತ್ತು ಪರಂಪರೆಯ ಕುರಿತಂತೆ ಗೋಪಾಲ ನಾಯಿಕ ಅವರಿಗೆ ಅಪಾರವಾದ ತಿಳುವಳಿಕೆಯನ್ನು ಹೊಂದಿದ್ದರು. ಸಿರಿ ಕಾವ್ಯದ ಕತೆಯ ನಡಿಗೆ, ಕತೆಯನ್ನು ಘಟಕಗಳನ್ನಾಗಿ ವಿಂಗಡಿಸಿ ಮರುಕಟ್ಟುವ ಕಲೆ, ವರ್ಣನೆಗಳನ್ನು ಪರಂಪರೆಯಿಂದ ಆಯ್ದು ಅಳವಡಿಸುವ ಬಗೆ, ವರ್ಣನೆಗಳನ್ನು ವಿಸ್ತರಿಸುವ ಅಥವಾ ಕುಗ್ಗಿಸುವ ಪದವಿನ್ಯಾಸ, ಸಿದ್ಧಸೂತ್ರಗಳನ್ನು ಸರಿಯಾದ ಜಾಗದಲ್ಲಿ ಸೇರಿಸುವ ಶಕ್ತಿ ಇವುಗಳ ವಿಷಯದಲ್ಲಿ ಗೋಪಾಲ ನಾಯಿಕರ ಜ್ಞಾನ ಅಪ್ರತಿಮವಾದುದು.
ಸಂದರ್ಭ ಸನ್ನಿವೇಶಗಳನ್ನು ನೋಡಿಕೊಂಡು ಸಿರಿಕಾವ್ಯವನ್ನು ಅಂದಗೆಡದಂತೆ ಅವರು ಹಿಗ್ಗಿಸಬಲ್ಲರು , ಕುಗ್ಗಿಸಬಲ್ಲರು. . ಸಿರಿ ಸಂಧಿಯ ಪೂರ್ಣ ಪಠ್ಯವನ್ನು ಹಾಡಿಮುಗಿಸಲು ಅವರು ತೆಗೆದುಕೊಂಡ ದಿನಗಳು ಒಂಬತ್ತು ! ಅಂದಾಜು ಅವಧಿ ಇಪ್ಪತ್ತೈದು ಗಂಟೆ.
ಸಿರಿ ಕಾವ್ಯ ಅಲ್ಲದೆ ಕೋಟಿ ಚೆನ್ನಯ ಬೈದ್ಯೆರೆ ಸಂಧಿ ( 7,000 ಸಾಲುಗಳು), ಏಕಸಾಲ್ಯೆರೆ ಸಂಧಿ( 1,800 ಸಾಲುಗಳು), ಮೈಸಂದಾಯ ಸಂಧಿ ( 1,150 ಸಾಲುಗಳು), ಈಶ್ವರ ಸಂಧಿ ( 2,080 ಸಾಲುಗಳು), ಕೋಡ್ದಬ್ಬು ಸಂಧಿ ( 3,000 ಸಾಲುಗಳು) ಯಂತಹ ಜನಪದ ಕಾವ್ಯಗಳನ್ನು ಹಾಡಿದರು.
ಇಷ್ಟುಮಾತ್ರ ವಲ್ಲದೇ ಅವರು ಜನಪದ ವೈದ್ಯ, ಜನಪದ ಕುಣಿತಗಳ ನಾಯಕ. ಬೇಸಾಯದ ಬಗೆಗಿನ ಅವರಿಗೆ ವಿಶೇಷ ಅನುಭವ ಇದೆ. ಇವರಲ್ಲಿ ಕೆಲಸದ ಹಾಡುಗಳ ಕಣಜವು ಇದೆ. ಬೇಸಾಯದ ಗದ್ದೆಯಲ್ಲಿ ಕಬಿತೆಗಳನ್ನು ಮುಖ್ಯ ಗಾಯಕರಾಗಿ ಹಾಡುತ್ತಾರೆ. ಅವರು ಹಾಡುವ ಎಲ್ಲ ಸಂಧಿಗಳ ಸಾಲುಗಳನ್ನು ಒಟ್ಟು ಸೇರಿಸಿದರೆ 30,000 ಹೆಚ್ಚಿದೆ ಇಂತಹ ಅಪಾರ ಜ್ಞಾನವನ್ನು ಹೊಂದಿರುವ ಗೋಪಾಲ ನಾಯಿಕ ಅವರ ಮಹಾನ್ ಗಾಯಕನೆ ಸರಿ.
ಗೋಪಾಲ ನಾಯಿಕ ಅವರ ಸಿರಿಸಂಧಿ ಈವರೆಗೆ ಪ್ರಕಟವಾಗಿರುವ ಸಿರಿ ಕಾವ್ಯಗಳಲ್ಲಿಯೇ ಹೆಚ್ಚು ದೀರ್ಘವಾಗಿದೆ. ಇದರಲ್ಲಿ ಮೂರು ತಲೆಮಾರುಗಳ ಕತೆಯನ್ನು ಹೆಣೆದಿದ್ದಾರೆ. ತುಳುವಿನ ಜನಪದ ಮಹಾಕಾವ್ಯಗಳ ನಿರ್ಮಾಣದ ಪ್ರತಿಭೆ ಅವರಲ್ಲಿದೆ. ಬಿರ್ಮುಪಾಲವ, ಸಿರಿ, ಕುಮಾರ, ಸೊನ್ನೆ, ಅಬ್ಬಯ -ದಾರಯ, ಕಾಂತುಪೂಂಜ, ದುರ್ಗಲ್ಲ ಪೆರ್ಗಡೆ, ಕೊಡ್ಸರಾಳ್ವ ಹೀಗೆ ಅನೇಕ ಪಾತ್ರಗಳ ಗುಣ ಸ್ವಭಾವಗಳನ್ನು ಕಟ್ಟಿಕೊಟ್ಟಿದ್ದಾರೆ.
ಸಿರಿಯ ಮೂಲಕ ಪುರುಷ ಆಡಳಿತದಿಂದ ಬರುವ ಸಮಸ್ಯೆಗಳಿಂದ ಬಿಡುಗಡೆ ಹೊಂದಲು ಹೋರಾಡುವ ತುಳು ಮಹಿಳೆಯರ ಕಷ್ಟ ತುಮುಲಗಳನ್ನು ಚಿತ್ರಿಸಿದ್ದಾರೆ. ಅವರ ಸಿರಿಕಾವ್ಯ ಸಾಮಾಜಿಕ ಹೋರಾಟದ ಕಥನವಾಗಿದೆ. ದೈವಿಕವಾಗಿ ಹುಟ್ಟಿದ ಸಿರಿಯು ನಡೆಸುವ ಪ್ರತಿಭಟನೆಗಳ ಮೂಲಕ ಅವಳ ಸತ್ವಪರೀಕ್ಷೆ ನಡೆಯುತ್ತದೆ. ಮಹಿಳೆಯರ ದುಃಖ ಮತ್ತು ಕಷ್ಟಗಳ ಕತೆಯು ಸಂಧಿ ಮತ್ತು ಜಾತ್ರೆ, ಅಂದರೆ ಪುರಾಣ ದ ಸಹಯೋಗದಲ್ಲಿ ವಾಸ್ವವ ಜಗತ್ತಿನಲ್ಲಿ ಪ್ರಕಟವಾಗುವುದು ಇವರ ಕಾವ್ಯದ ವೈಶಿಷ್ಟ್ಯವಾಗಿದೆ.
ಗೋಪಲ ನಾಯಿಕ ಅವರಿಗೆ ಸಂದ ಗೌರವ ಪ್ರಶಸ್ತಿಗಳು:
ಗೋಪಾಲ ನಾಯಿಕ ಅವರ ಕಾವ್ಯಶಕ್ತಿಯನ್ನು ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಅವರಿಗೆ ಸಂದಿವೆ.
ಸಿರಿ ಕಾವ್ಯದ ಎರಡು ಸಂಪುಟಗಳ ಬಿಡುಗಡೆಯ ಸಂದರ್ಭದಲ್ಲಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ವತಿಯಿಂದ ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಿದ್ದರು. ಅದೇ ಸಮಾರಂಭದಲ್ಲಿ ಮಣಿಪಾಲ ಅಕಾಡೆಮಿಯ ವತಿಯಿಂದ ಆರ್ ಆರ್ ಸಿ ಮತ್ತು ಗೋವಿಂದ ಪೈ ಸಂಶೋಧನಾ ಕೇಂದ್ರದ ಪ್ರೊ. ಕು.ಶಿ.ಹರಿದಾಸ ಭಟ್ಟರು ಕೃಷ್ಣ ಪ್ರತಿಮೆ ನೀಡಿ ಸನ್ಮಾನ ಮಾಡಿದ್ದರು. ಅನೇಕ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿವೆ. ಸಿರಿ ಯೋಜನೆಗೆ ಸಂದೇಶ ಪ್ರಶಸ್ತಿ ಬರಲು ಮೂಲ ಕಾರಣಿಕರ್ತರಾಗಿದ್ದಾರೆ