ಲಕ್ನೋ: ಉತ್ತರ ಪ್ರದೇಶದ ಮುಜಾಫರ್ನಗರ ಪಟ್ಟಣದಲ್ಲಿ ಮದ್ಯದಂಗಡಿಯಿಂದ ಬಿಯರ್ ಖರೀದಿಸಿದ್ದಕ್ಕಾಗಿ ಇಬ್ಬರು ಮುಸ್ಲಿಂ ಮಹಿಳೆಯರ ತಲೆ ಕಡಿಯುವ ಬೆದರಿಕೆ ಹಾಕಿದ ಮೂವರು ಯುವಕರನ್ನು ಬಂಧಿಸಲಾಗಿದೆ.
ಅದೇ ಸಮುದಾಯಕ್ಕೆ ಸೇರಿದ ಆರೋಪಿ ಯುವಕರು, ಈ ಇಬ್ಬರು ಮಹಿಳೆಯರನ್ನು ಹಿಂಬಾಲಿಸಿಕೊಂಡು ಬಿಯರ್ ಅಂಗಡಿಯವರೆಗೂ ಬಂದರು. ಆ ಇಬ್ಬರು ಮಹಿಳೆಯರು ಬಿಯರ್ ಬಾಟಲ್ ಗಳನ್ನು ಖರೀದಿಸಿದ ನಂತರ ಅವರನ್ನು ಅಡ್ಡಗಟ್ಟಿದ್ದಾರೆ.
ಯುವಕರು ಮಹಿಳೆಯರಿಗೆ “ತಲೆ ಕಡಿಯುವ ಬೆದರಿಕೆ ಹಾಕುತ್ತಿರುವುದನ್ನು ತೋರಿಸುವ ವೀಡಿಯೊ ಮಂಗಳವಾರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆದ ನಂತರ ವಿಷಯ ಬೆಳಕಿಗೆ ಬಂದಿದೆ.
ವೀಡಿಯೋ ಕ್ಲಿಪ್ ನಲ್ಲಿ ಇಸ್ಲಾಂನಲ್ಲಿ ಮದ್ಯ ಸೇವಿಸುವುದು ಹರಾಮ್ (ಪಾಪ) ಎಂದು ಯುವಕರು ಮಹಿಳೆಯರಿಗೆ ಹೇಳುವುದನ್ನು ಕೇಳಬಹುದು. “ಯುವಕನೊಬ್ಬ ‘ನಾನು ಈ ಹಿಂದೆಯೂ ಜೈಲಿಗೆ ಹೋಗಿದ್ದೆ….. ನಿನ್ನ ಶಿರಚ್ಛೇದ ಮಾಡಲು ನಾನು ಹಿಂಜರಿಯುವುದಿಲ್ಲ,” ಎಂದು ಬೆದರಿಕೆ ಒಡ್ಡಿದ್ದಾನೆ. ಇಬ್ಬರೂ ಯುವತಿಯರು ಸಬೂಬು ಹೇಳಿ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸುತ್ತಿರುವಾಗಲೂ ಯುವಕನೊಬ್ಬ ಬೆದರಿಕೆ ಒಡ್ಡುತ್ತಿರುವುದು ವಿಡಿಯೋದಲ್ಲಿ ಕೇಳಿಬರುತ್ತಿದೆ.
”ಇನ್ನು ಮುಂದೆ ಮದ್ಯ ಸೇವಿಸುವುದಿಲ್ಲ….. ತಪ್ಪಾಯಿತು,” ಎಂದು ಯುವತಿಯೊಬ್ಬಳು ಯುವಕರಿಗೆ ಹೇಳುತ್ತಿರುವುದು ಕೇಳಿಬರುತ್ತಿದೆ. ಈ ವಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ಮುಜಾಫರ್ನಗರದ ನಿವಾಸಿಗಳಾದ ಸಾಜಿದ್, ಆದಿಲ್ ಮತ್ತು ಶಾನವಾಜ್ ಎಂಬ ಮೂವರು ಯುವಕರನ್ನು ಬಂಧಿಸಿದ್ದಾರೆ.
ಈ ಹಿಂದೆ ಆದಿಲ್ ಮತ್ತು ಶಹನವಾಜ್ ವಿರುದ್ಧ ಅತ್ಯಾಚಾರ, ಸುಲಿಗೆ ಮತ್ತು ಇತರ ಅಪರಾಧಗಳ ಆರೋಪದ ಮೇಲೆ ಪ್ರಕರಣ ದಾಖಲಿಸಿ ಜೈಲು ಸೇರಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮುಜಾಫರ್ನಗರದಲ್ಲಿ ತಿಳಿಸಿದ್ದಾರೆ. “ನಾವು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಮತ್ತು ಈ ವಿಷಯದಲ್ಲಿ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ,” ಎಂದು ಅಧಿಕಾರಿ ಹೇಳಿದರು.