ದಕ್ಷಿಣ ಭಾರತದ ಚಿತ್ರರಂಗದಲ್ಲಿ ಖಳನಾಯಕ ಮಿಂಚಿದ್ದ ನಟ ಕಜಾನ್ ಖಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಲಯಾಳಂ ಚಿತ್ರರಂಗದ ಖ್ಯಾತ ಪ್ರೊಡಕ್ಷನ್ ಕಂಟ್ರೋಲರ್ ಮತ್ತು ನಿರ್ಮಾಪಕ ಎನ್. ಎಂ ಬಾದುಷಾ ಅವರು ಕಜಾನ್ ಖಾನ್ ನಿಧನದ ಸುದ್ದಿಯನ್ನುಅಧಿಕೃತವಾಗಿ ಖಚಿತಪಡಿಸಿದ್ದಾರೆ.
ಸುಮಾರು 50 ಸಿನಿಮಾಗಳಲ್ಲಿ ನಟಿಸಿರೋ ಈ ಅದ್ಭುತ ನಟನ ದಿಢೀರ್ ನಿಧನಕ್ಕೆ ಮಲಯಾಳಂ, ತಮಿಳು ಹಾಗೂ ಕನ್ನಡ ಚಿತ್ರಪ್ರೇಮಿಗಳಿಗೆ ನೋವುಂಟು ಮಾಡಿದೆ.
ಕಜಾನ್ಖಾನ್ ಸಿನಿಮಾ ಪಯಣ:
1992 ರಲ್ಲಿ ʼಸೆಂತಮಿಜ್ ಪಾಟ್ಟುʼ ಸಿನಿಮಾದಲ್ಲಿ ಭೂಪತಿಯಾಗಿ ಕಜಾನ್ಖಾನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಅವರು ಮಾಲಿವುಡ್, ಸ್ಯಾಂಡಲ್ ವುಡ್, ತಮಿಳು ಚಿತ್ರರಂಗದಲ್ಲಿ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ.
ಖಳನಟನಾಗಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಅವರು ಮಮ್ಮುಟ್ಟಿಯವರ “ದಿ ಕಿಂಗ್” ಚಿತ್ರದಲ್ಲಿ ವಿಕ್ರಮ್ ಘೋರ್ಪಡೆ ಎಂಬ ಪಾತ್ರದಿಂದ ನೆಗೆಟಿವ್ ರೋಲ್ ನಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡರು.
“ಕಲೈಜ್ಞಾನ್”, “ಸೇತುಪತಿ IPS”, “ಡ್ಯುಯೆಟ್”, “ಮುರೈ ಮಾಮನ್”, “ಆನಾಜಗನ್ “, “ಕರುಪ್ಪು ನಿಲ” ಮುಂತಾದ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂಗ್ಲಿಷ್ ಭಾಷೆಯ ಸಿನಿಮಾ ‘ಆರ್ಟ್ ಆಫ್ ಫೈಟಿಂಗ್ 2’ದಲ್ಲೂ ಕಾಣಿಸಿಕೊಂಡಿದ್ದಾರೆ. ಕಜಾನ್ ಖಾನ್ ‘ಗಂಧರ್ವಂ’, ‘ಸಿಐಡಿ ಮೂಸ’,’ದಿ ಕಿಂಗ್’,’ವರ್ಣಪಕಿಟ್ಟು’,’ಡ್ರೀಮ್ಸ್’,’ದಿ ಡಾನ್’,’ಮಾಯಾಮೋಹಿನಿ’,’ರಾಜಾಧಿರಾಜ’ ಹೀಗೆ ಹಲವು ಮಲಯಾಳಂ ಸಿನಿಮಾಗಳಿಂದ ಕಜಾನ್ಖಾನ್ ಖ್ಯಾತಿಯನ್ನು ಪಡೆದುಕೊಂಡಿದ್ದರು.
ಸ್ಯಾಂಡಲ್ವುಡ್ನಲ್ಲಿ ಮಿಂಚಿದ್ದ ಕಜಾನ್ಖಾನ್:
ಕನ್ನಡ ಸಿನಿಪ್ರೇಮಿಗಳಿಗೂ ಕಜಾನ್ ಖಾನ್ ಖಳನಾಯಕನಾಗಿ ಚಿರಪರಿಚಿತ. ’ಹಬ್ಬ’, ‘ನಾಗದೇವತೆ’, ‘ಚೆಲುವ’ದಂತಹ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸು ಗೆದ್ದಿದ್ದರು.