ಬಾಗಲಕೋಟೆ: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಬಹು ನಿರೀಕ್ಷಿತ ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಿಲ್ಲೆಯಲ್ಲಿ ಜಾರಿಗೊಳ್ಳಲಿದೆ. ಭಾನುವಾರ ಮಧ್ಯಾಹ್ನದಿಂದ ಕೋಟೆನಾಡಲ್ಲಿ ವಿದ್ಯುಕ್ತವಾಗಿ ಅನುಷ್ಠಾನಗೊಂಡಿದೆ.
ಬಸ್ ನಿರ್ವಾಹಕರಿಗೆ ತರಬೇತಿ, ಮಾಹಿತಿ ಜೊತೆಗೆ ಟಿಕೆಟ್ ನೀಡುವ ಯಂತ್ರಗಳಲ್ಲಿ ಉಚಿತ ಟಿಕೆಟ್ ತಂತ್ರಾಶ ಅಳವಡಿಸಲಾಗಿದೆ. ಸರ್ಕಾರ ರೂಪಿಸಿದ ನಿಯಮಾವಳಿ ಅನ್ವಯ ರಾಜ್ಯದಲ್ಲಿ ಓಡಾಡುವ ಸಾಮಾನ್ಯ ಬಸ್ಗಳಲ್ಲಿ ಮಹಿಳೆಯರು ಇನ್ನು ಮುಂದೆ ಉಚಿತವಾಗಿ ಪ್ರಯಾಣ ಮಾಡಲಿದ್ದಾರೆ. ಮಹಿಳೆಯರಲ್ಲಿ ಸಂಭ್ರಮ ಮನೆ ಮಾಡಿತ್ತು.
ನಿತ್ಯವು 35 ರಿಂದ 38 ಲಕ್ಷ ರೂ. ನಷ್ಟ?
ಉಚಿತ ಬಸ್ ಪ್ರಯಾಣಕ್ಕೆ ಸರ್ಕಾರ ಅನುಷ್ಠಾನಕ್ಕೆ ಮುಂದಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತನ್ನದೆಯಾದ ಲೆಕ್ಕಚಾರ ಹಾಕಿದೆ. ಮುಖ್ಯವಾಗಿ ಕಳೆದ ತಿಂಗಳು ಮೇ ತಿಂಗಳಲ್ಲಿ ರಜಾ ದಿನಗಳು, ಮದುವೆ, ಉಪನಯನ ಸೇರಿದಂತೆ ಶುಭ ಸಮಾರಂಭ ಹಾಗೂ ಪ್ರವಾಸ ಅಂತೆಲ್ಲ ಮಹಿಳೆಯರ ಪ್ರಯಾಣ ಮಾಡಿದ್ದಾರೆ. ಇದರಿಂದ ಬಾಗಲಕೋಟೆ ಜಿಲ್ಲೆಯ ಸಾರಿಗೆ ಬಸ್ಗಳಿಂದ 12 ಕೋಟಿ ರೂ. ವಹಿವಾಟು ನಡೆದು ಸಂಸ್ಥೆಗೆ ಗಳಿಕೆಯಾಗಿತ್ತು. ಜೂನ್ನಿಂದ ಸಾಮಾನ್ಯ ದಿನಗಳಲ್ಲಿ ಮಹಿಳೆಯರ ಪ್ರಯಾಣ ಕಡಿಮೆಯಾಗಿದ್ದರು ಸಹ ನಿತ್ಯವು 35 ರಿಂದ 38 ಲಕ್ಷ ರೂ. ಲಕ್ಷ ಸಾರಿಗೆ ಸಂಸ್ಥೆಗೆ ಹೊರಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಯೋಜನೆ ಜಾರಿಯಾದ ಒಂದು ತಿಂಗಳ ಬಳಿಕ ನಿಖರ ಅಂಕಿ ಅಂಶಗಳು ಹೊರ ಬೀಳಲಿದೆ. ಇದನ್ನು ಸರ್ಕಾರಕ್ಕೆ ವರದಿ ಸಲ್ಲಿಸಿ ಅಲ್ಲಿಂದ ಸಂಸ್ಥೆಗೆ ಹಣ ಪಾವತಿಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಒಟ್ಟು 651 ಬಸ್ಗಳ ಕಾರ್ಯಾಚರಣೆ:
ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ, ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ, ಬೀಳಗಿ, ಬಾದಾಮಿ, ಗುಳೇದಗುಡ್ಡ, ಹುನಗುಂದ, ಇಳಕಲ್ಲ ಸೇರಿದಂತೆ ಜಿಲ್ಲೆಯ ಎಲ್ಲ ಭಾಗದಿಂದ 651 ಬಸ್ಗಳು ವಿವಿಧ ಷಡ್ಯೂಲ್ಗಳಲ್ಲಿ ಸಂಚಾರ ಮಾಡುತ್ತವೆ. ಈ ಪೈಕಿ 143 ಬಸ್ಗಳು ಅಂತರ ರಾಜ್ಯ ಬಸ್ಗಳು ಪ್ರಯಾಣ ಮಾಡುತ್ತೇವೆ. ಸರ್ಕಾರ ನಿರ್ದೇಶನದಂತೆ ರಾಜ್ಯ ಗಡಿ ವರೆಗೆ ಹಾಗೂ ಗಡಿ ದಾಟಿ 20 ಕಿ.ಮೀ ವರೆಗೆ ರಾಜ್ಯದ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಅವಕಾಶವಿದೆ. ಜಿಲ್ಲೆಯಿಂದ ಮಹಾರಾಷ್ಟç, ಆಂಧ್ರಪ್ರದೇಶ, ಗೋವಾ, ಕೇರಳಕ್ಕೆ ಸಂಚರಿಸುವ ಸಾಮಾನ್ಯ ಬಸ್ಗಳಿಗೂ ಇದು ಅನ್ವಯವಾಗಲಿದೆ. ರಾಜ್ಯದ ಗಡಿದಾಟಿ 20 ಕಿ.ಮೀ ಹೋದರೆ ಅದಕ್ಕೆ ಶುಲ್ಕ ಪಾವತಿಸಬೇಕು. 651 ಬಸ್ಗಳ ಪೈಕಿ 500 ಕ್ಕೂ ಹೆಚ್ಚು ಬಸ್ಗಳು ರಾಜ್ಯ ಹಾಗೂ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುತ್ತೇವೆ. ಇನ್ನು ರಾಜ್ಯದ ಮಹಿಳೆ ಎನ್ನುವುದಕ್ಕೆ ದಾಖಲಾತಿ ಪ್ರದರ್ಶನ ಮಾಡುವುದು ಕಡ್ಡಾಯ. ಎಸಿ, ರಾಜಹಂಸ ಸೇರಿದಂತೆ ಸಾರಿಗೆ ಸಂಸ್ಥೆಯ ವಿಶೇಷ ಬಸ್ಗಳಲ್ಲಿ ಈ ಸೌಲಭ್ಯ ಇರುವದಿಲ್ಲ.
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಭಾನುವಾರ ಮಧ್ಯಾಹ್ನದಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳಲಿದೆ. ಅಗತ್ಯ ಸಿದ್ಧತೆ ಪೂರ್ಣಗೊಂಡಿದೆ. ಸರ್ಕಾರ ನಿರ್ದೇಶನದಂತೆ ನಿಯಮಾವಳಿ ಪಾಲನೆ ಮಾಡಲಾಗುವುದು. ಈಗಾಗಲೇ ನಿರ್ವಾಹಕರಿಗೆ ಮಾಹಿತಿ, ತರಬೇತಿ ನೀಡಲಾಗಿದೆ. ಶೇ.50 ಸೀಟು ಪುರಷರಿಗೆ ಮೀಸಲಿಡಲಾಗುವುದು ಎಂದು ಬಾಗಲಕೋಟೆ ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ.ಮೇತ್ರಿ ಹೇಳಿದರು.
ಉಚಿತವಾಗಿ ಬಸ್ ಪ್ರಯಾಣಕ್ಕೆ ಅವಕಾಶ ನೀಡಿರುವುದು ಮಹಿಳೆಯರಿಗೆ ಅನುಕೂಲ. ಅವಶ್ಯ, ಅಗತ್ಯ ತಕ್ಕಂತೆ ಮಾತ್ರ ಜವಾಬ್ದಾರಿಯುತ ನಾಗರಿಕರಾದ ನಾವು ಬಳಕೆ ಮಾಡಿಕೊಳ್ಳಬೇಕು. ಉಚಿತ ಎಂದಾಕ್ಷಣ ಬೇಕಾಬಿಟ್ಟಿಯಾಗಿ ಬಳಕೆ ಮಾಡಬಾರದು. ಸಾರಿಗೆ ಸಂಸ್ಥೆಗಳ ಬಸ್ಗಳು ಸಾರ್ವಜನಿಕರ ಬಸ್ಗಳು. ಅವರೇ ಅದರ ಮಾಲೀಕರು ಎನ್ನುವ ಪರಿಕಲ್ಪನೆ ಇರಬೇಕು. ಬಸ್ಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಮಂಜುಳಾ ಪಾಟೀಲ ಹೇಳಿದರು.
ಮೂರು ಗ್ರಾಮಕ್ಕೆ ಇಲ್ಲ ಬಸ್ ಸಂಚಾರ..
ಬಾದಾಮಿ ತಾಲೂಕಿನ ಬೆಟ್ಟದ ಮೇಲೆ ಇರುವ ಅನಂತಗಿರಿ, ಮುಧೋಳ ತಾಲೂಕಿನ ಕನಕಗಿರಿ, ಹುನಗುಂದ ತಾಲೂಕಿನ ಒಡೆಯರ ಗೋನಾಳಗೆ ಬಸ್ ತೆರಳುವದಿಲ್ಲ. ಬೆಟ್ಟದ ಮೇಲೆ ಇರುವ ಕಾರಣಕ್ಕೆ ಅನಂತಗಿರಿಗೆ ಬಸ್ ಸೌಲಭ್ಯ ಗಗನ ಕುಸುಮವಾಗಿದ್ದರೇ, ಇನ್ನೂಳಿದ ಎರಡು ಗ್ರಾಮಗಳಿಗೆ ರಸ್ತೆ ಇಲ್ಲದ ಕಾರಣ ಬಸ್ಗಳ ಸಂಚಾರ ಇಲ್ಲ.
ಜಿಲ್ಲೆಯಲ್ಲಿ ಪ್ರತಿನಿತ್ಯ 2 ಲಕ್ಷ ಕ್ಕೂ ಹೆಚ್ಚು ಪ್ರಯಾಣಿಕರು ಸರ್ಕಾರಿ ಬಸ್ಗಳಲ್ಲಿ ಸಂಚಾರ ಮಾಡುತ್ತಾರೆ. ಈ ಪೈಕಿ 1 ಲಕ್ಷ ಪ್ರಯಾಣಿಕರು ಮಹಿಳೆಯರೆ ಎನ್ನುವುದು ವಿಶೇಷ. ನಿತ್ಯವು 80 ಲಕ್ಷ ರೂ. ಸಂಸ್ಥೆಗೆ ಆದಾಯವಿತ್ತು. ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಸಂಚಾರ ಅವಕಾಶ ಹಿನ್ನಲೆಯಲ್ಲಿ 40 ಲಕ್ಷ ರೂ. ಆದಾಯಕ್ಕೆ ಖೋತಾ ಬೀಳಲಿದೆ ಎಂದು ಅಂದಾಜಿಸಲಾಗಿದೆ.