ಭೋಪಾಲ್: ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಹಿಂದೂ ಕುಟುಂಬವೊಂದು ತಮ್ಮ 22 ವರ್ಷದ ಮಗಳು ಅನಾಮಿಕಾ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಅಯಾಜ್ ಎಂಬ ಯುವಕನನ್ನು ಮದುವೆಯಾದ ಕಾರಣಕ್ಕಾಗಿ ಆಕೆಯನ್ನು ತಿರಸ್ಕರಿಸಿದೆ. ಇಸ್ಲಾಂಗೆ ಮತಾಂತರಗೊಂಡ ನಂತರ ಯುವತಿಗೆ ಫಾತಿಮಾ ಎಂದು ನಾಮಕರಣ ಮಾಡಲಾಗಿದೆ.
ಮಾದ್ಯಮ ವರದಿಗಳ ಪ್ರಕಾರ, ತಮ್ಮ ಮಗಳು ತಮ್ಮ ಪಾಲಿಗೆ ಸತ್ತಿದ್ದಾಳೆ ಎಂದು ಘೋಷಿಸಲು ಕುಟುಂಬವು ಹಿಂದೂ ಸಂಪ್ರದಾಯಗಳ ಪ್ರಕಾರ ಅಧಿಕೃತ ತಿಥಿ ಕರ್ಮಾಂತರ ಸಮಾರಂಭವನ್ನೂ ಆಯೋಜಿಸಿತ್ತು. ತಮ್ಮ ಮಗಳು ಲವ್ ಜಿಹಾದ್ಗೆ ಬಲಿಯಾಗಿದ್ದಾಳೆ ಮತ್ತು ಸಮಾಜದಲ್ಲಿ ತಮ್ಮ ಕುಟುಂಬಕ್ಕೆ ಮಾನಹಾನಿ ಮಾಡಿದ್ದಾಳೆ, ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
“ನಾವು ಅವಳ ಕನ್ಯಾದಾನ ಮಾಡುವ ಕನಸು ಹೊಂದಿದ್ದೆವು ಆದರೆ ಈಗ ನಾವು ಪಿಂಡ ದಾನವನ್ನು ಮಾಡಿದ್ದೇವೆ ಎಂದು ಹುಡುಗಿಯ ಸಹೋದರ ಹೇಳಿದರು.
ಘಟನೆಯ ವಿಡೀಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ತಮ್ಮ ಮಗಳು ಮೃತಳಾಗಿದ್ದಾಳೆ ಎಂದು ಘೋಷಿಸಿದ ಹುಡುಗಿಯ ಕುಟುಂಬ ಸದಸ್ಯರು ಹಿಂದೂ ಸಂಪ್ರದಾಯದ ಪ್ರಕಾರ ಅಧಿಕೃತ ಸಮಾರಂಭವನ್ನು ಆಯೋಜಿಸಿದ್ದಾರೆ. ಹುಡುಗಿಯ ತಂದೆಯು ‘ಶೋಕ ಸಂದೇಶ’ವನ್ನು ಸಹ ಮುದ್ರಿಸಿದ್ದೂ , ಅದರಲ್ಲಿ ಅವರು ತಮ್ಮ ಮಗಳನ್ನು ‘ಕುಪುತ್ರಿ’ ಎಂದು ನಮೂದಿಸಿದ್ದಾರೆ
ಈ ವರ್ಷದ ಏಪ್ರಿಲ್ 2 ರಂದು ಯುವತಿ ತಮಗಾಗಿ ಕೊನೆಯುಸಿರೆಳೆದಿದ್ದಾಳೆ ಎಂದು ಕುಟುಂಬದವರು ಉಲ್ಲೇಖಿಸಿರುವ ತಿಥಿ ಕಾರ್ಡು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ತಮ್ಮ ಮಗಳಿಗೆ ನರಕದಲ್ಲಿ ಸ್ಥಾನ ಸಿಗಲಿ ಎಂದು ಮನೆಯವರು ಪ್ರಾರ್ಥಿಸಿದ್ದಾರೆ.
“ನಾವು ಅವಳನ್ನು ಸುಮಾರು 22 ವರ್ಷಗಳ ಕಾಲ ಎಲ್ಲಾ ಪ್ರೀತಿ ಮತ್ತು ಕಾಳಜಿಯಿಂದ ಬೆಳೆಸಿದ್ದೇವೆ ಮತ್ತು ಈ ರೀತಿಯಾಗಿ ಅವಳು ಸಮಾಜದಲ್ಲಿ ನಮಗೆ ಮಾನಹಾನಿ ಮಾಡಿದ್ದಾಳೆ” ಎಂದು ಕುಟುಂಬ ಸದಸ್ಯರು ಹೇಳಿದರು. ಈ ವರ್ಷದ ಜೂನ್ ಮೊದಲ ವಾರದಲ್ಲಿ ಉಜ್ಮಾ ಫಾತಿಮಾ ಅಲಿಯಾಸ್ ಅನಾಮಿಕಾಳ ವಿವಾಹದ ಮದುವೆಯ ಕಾರ್ಡ್ ಅಯಾಜ್ನೊಂದಿಗೆ ಅಂತರ್ಜಾಲದಲ್ಲಿ ವೈರಲ್ ಆಗಿತ್ತು ಎಂಬುದು ಗಮನಾರ್ಹ.
ಕಾರ್ಡ್ ವೈರಲ್ ಆದ ನಂತರ ಹುಡುಗಿಯ ತಾಯಿಯು ಮಾಧ್ಯಮಗಳೊಂದಿಗೆ ಮಾತನಾಡಿ ಇದೊಂದು ‘ಲವ್ ಜಿಹಾದ್’ ಎಂದು ಆರೋಪಿಸಿ ಪೋಲಿಸರಿಗೆ ದೂರನ್ನೂ ನೀಡಿದ್ದರು. ತನ್ನ ಮಗಳನ್ನು ಮರಳಿ ಪಡೆಯುವಂತೆ ಪೊಲೀಸರಿಗೆ ಒತ್ತಾಯಿಸಿದ್ದರು. ಆದರೆ, ಮಧ್ಯಪ್ರದೇಶ ಪೊಲೀಸರು ಬಾಲಕಿಯ ತಾಯಿಯ ಆರೋಪವನ್ನು ತಳ್ಳಿಹಾಕಿದ್ದು ಇದು ಎರಡು ವಯಸ್ಕರ ನಡುವಿನ ಒಮ್ಮತದ ಸಂಬಂಧ ಎಂದು ಹೇಳಿದ್ದಾರೆ.
ಯುವಕನ ಕುಟುಂಬಸ್ಥರು ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ ಯುವತಿಯ ಹಳೆ ಹೆಸರನ್ನು ಬ್ರಾಕೆಟ್ ನಲ್ಲಿ ನಮೂದಿಸಿದ್ದರು. ಈ ವಿವಾಹ ಜೂನ್ ಏಳನೇ ತಾರೀಖಿನಂದು ನಡೆಸಿದೆ ಎಂದು ತಿಳಿದು ಬಂದಿದೆ.