ದೇಶದ ಬಹುತೇಕ ಅಡುಗೆ ಮನೆಗಳಲ್ಲಿ ಕಡಲೆ ಕಾಯಿ ಎಣ್ಣೆಯ ಜಾಗವನ್ನು ಈಗ ಸೂರ್ಯಕಾಂತಿ ಎಣ್ಣೆ ಆವರಿಸಿದೆ. ಇತ್ತೀಚಿನ ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆ ಗಗನಕ್ಕೆ ಏರಿದೆ. ಸೂರ್ಯಕಾಂತಿ ಬೆಳೆ ಲಾಭದಾಯಕ ಕೃಷಿಯಾಗಿ ರೂಪುಗೊಂಡಿದೆ. ನಮ್ಮ ಕರ್ನಾಟಕ ಅತಿ ಹೆಚ್ಚು ಸೂರ್ಯಕಾಂತಿ ಬೆಳೆಯುವ ರಾಜ್ಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಹಸಿರು ದಂಟು, ಹಸಿರು ಎಲೆ, ಹಳದಿ ಹೂವು ಹಾಗೂ ಕಪ್ಪು ಕಾಳುಗಳನ್ನು ಒಳಗೊಂಡು ಆಕರ್ಷಿಣೀಯವಾಗಿರುವ ಸೂರ್ಯಕಾಂತಿ, ಸೂರ್ಯ ಸಾಗುವ ದಿಕ್ಕಿಗೆ ಮುಖ ಮಾಡುವ ಕಾರಣ ಇದಕ್ಕೆ ಸೂರ್ಯಕಾಂತಿ ಎಂಬ ಹೆಸರು ಬಂದಿದೆ. ಇಂತಹ ಸುಂದರವಾದ ಹೂವಿನ ಬೆಳೆಗೆ ಕೀಟ ಬಾಧೆಯು ತಪ್ಪಿದ್ದಲ್ಲ. ಸೂರ್ಯಕಾಂತಿ ಬೆಳೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗಗಳು ಮತ್ತು ಅವುಗಳನ್ನು ನಿವಾರಿಸುವ ವಿಧಾನಗಳ ಕುರಿತು ತಿಳಿಯೋಣ.
ಸೂರ್ಯಕಾಂತಿ ಬೆಳೆಯಲ್ಲಿ ಕಾಣಿಸಿಕೊಳ್ಳುವ ರೋಗಗಳು :
ಎಲೆ ಚುಕ್ಕಿ ರೋಗ:
ಸಾಮಾನ್ಯವಾಗಿ ಸೂರ್ಯಕಾಂತಿ ಗಿಡದ ಎಲೆಯ ಕೆಳ ಭಾಗದಿಂದ ಈ ರೋಗ ಆರಂಭಗೊಂಡು, ಎಲೆಗಳ ಮೇಲೆ ಹಳದಿ ಉಂಗುರದಿಂದ ಸುತ್ತುವರಿದ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಚುಕ್ಕೆಗಳು ಒಂದಕ್ಕೊಂದು ಕೂಡಿ ದೊಡ್ಡ ಮಚ್ಚೆಗಳಂತಾಗುತ್ತವೆ. ನಂತರ ಕಾಂಡ ಹಾಗೂ ಎಲೆಗಳ ಮೇಲೆ ಚುಕ್ಕಿ ಕಾಣಿಸಿಕೊಂಡು ಆ ಭಾಗಗಳೆಲ್ಲ ಒಣಗಿ ಹೋಗುತ್ತವೆ.
ಎಲೆ ಚುಕ್ಕಿ ರೋಗ ನಿಯಂತ್ರಿಸಲು ಬಿತ್ತನೆ ವೇಳೆ 1 ಕಿ.ಗ್ರಾಂ ಬೀಜಕ್ಕೆ 2 ಗ್ರಾಂ ಕಾರ್ಬೊಕ್ಸೀನ್ 75 ಡಬ್ಲೂಪಿ ಅಥವಾ 2 ಗ್ರಾಂ ಕ್ಯಾಪ್ಟನ್ 80ಡಬ್ಲೂಪಿ ಅಥವಾ 2ಗ್ರಾಂ ಮ್ಯಾಂಕೋಜೆಬ್ 75ಡಬ್ಲೂಯಪಿ ಬಳಸಬೇಕು. 2ಗ್ರಾಂ ಜೈನೆಬ್ 80ಡಬ್ಲೂಪಿ ಅಥವಾ 2ಗ್ರಾಂ ಮ್ಯಾಂಕೊಜೆಬ್ ಅಥವಾ 1 ಮಿ.ಲೀ ಹೆಕ್ಸಾಕೋನೋಜೋಲ್ ಶಿಲೀಂಧ್ರ ನಾಶಕ ಔಷಧವನ್ನು ಡಬ್ಲೂಪಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೆ ಈ ರೋಗವು ನಿಯಂತ್ರಣಕ್ಕೆ ಬರುತ್ತದೆ.
ತುಕ್ಕುರೋಗ:
ಎಲೆಗಳ ಕೆಳಭಾಗದಲ್ಲಿ ಕಬ್ಬಿಣದ ತುಕ್ಕು ಬಣ್ಣದ ಚುಕ್ಕೆಗಳ ರೂಪದಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡು ನಂತರ ಎಲೆ ಹಾಗೂ ಕಾಂಡಗಳ ಬಹು ಭಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಸೊಂಕು ಉಂಟಾದ ಎಲೆ, ದೇಟು, ಹೂ ಕಾಂಡದ ಭಾಗಗಳು ಒಣಗಿ ಹೋಗುತ್ತವೆ.
ತುಕ್ಕುರೋಗ ನಿಯಂತ್ರಿಸಲು 2 ಗ್ರಾಂ. ಜೈನೆಬ್ ಅಥವಾ 2 ಗ್ರಾಂ. ಮ್ಯಾಂಕೋಜೆಬ್ ಅಥವಾ 1 ಮಿ.ಲೀ ಹೆಕ್ಸಾಕೋನೋಜೋಲ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಣೆ ಮಾಡಬೇಕು.
ಕೆದಿಗೆ ರೊಗ:
ಗಿಡದ ಎಲೆಗಳ ಕೆಳಭಾಗದಲ್ಲಿ ಹತ್ತಿಯಂತೆ ಬಿಳಿ ಶಿಲೀಂಧ್ರದ ಬೆಳವಣಿಗೆ ಕಂಡುಬಂದು ಗಿಡದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಎಲೆಯ ನರಗಳು ತಿಳಿ ಹಳದಿ ವರ್ಣಕ್ಕೆ ತಿರುಗಿ ಗಿಡಗಳು ಗಿಡ್ಡವಾಗಿ ಇಳುವರಿ ಕಡಿಮೆಯಾಗುತ್ತದೆ.
ಬಿತ್ತನೆಗೆ ಮುನ್ನ ಪ್ರತಿ ಕಿ.ಗ್ರಾಂ ಬೀಜಕ್ಕೆ ನೀರಿನಲ್ಲಿ ಕರಗುವ 6 ಗ್ರಾಂ ಶೇ.8ರ ಮೆಟಲಾಕ್ಸಿಲ್ ಪುಡಿಯನ್ನು ಮಿಶ್ರಣ ಮಾಡಬೇಕು. ಅಥವಾ 3 ಗ್ರಾಂ ಮೆಟಲಾಕ್ಸಿಲ್ (4%)+ ಮೆಂಕೋಜೆಬ್ (64%) 68ಡಬ್ಲ್ಯೂಪಿ 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಿದರೆ ಈ ರೋಗವನ್ನು ನಿಯಂತ್ರಿಸಬಹುದು.
ಬೂದಿರೋಗ:
ಗಿಡದ ಎಲೆಗಳ ಮೇಲ್ಭಾಗದಲ್ಲಿ ಬಿಳಿ ಅಥವಾ ಬೂದು ಬಣ್ಣದ ಕಲೆಗಳು ಕಾಣಿಸಿಕೊಂಡು, ನಂತರ ಈ ಲಕ್ಷಣಗಳು ತೆನೆಗಳ ಮೇಲೆ ಗೋಚರಿಸಿ ಬೆಳೆಗೆ ಹಾನಿ ಉಂಟುಮಾಡುತ್ತವೆ. ಈ ಲಕ್ಷಣಗಳು ಎಲೆ ಕಾಂಡ ಮತ್ತು ತೆನೆಯ ಮೇಲೆ ಹರಡಿ ಪೂರ್ತಿ ಸಸ್ಯವನ್ನು ಬೂದು ಬಣ್ಣ ಆವರಿಸುತ್ತದೆ.
ಪ್ರತಿ ಲೀಟರ್ ನೀರಿಗೆ 1 ಮಿ.ಲೀ ಡೈಫೆನಾಕೋನಾಜೋಲ್ ಅಥವಾ 0.5 ಗ್ರಾಂ. ಮೈಕ್ಲೋಬ್ಲುಟಾನಿಲ ಬೆರೆಸಿ ಬೆಳೆಗೆ ಸಿಂಪಡಿಸಿದರೆ ಈ ರೋಗ ನಿಯಂತ್ರಣಕ್ಕೆ ಬರುತ್ತದೆ.
ನಂಜಾಣು ರೋಗ:
ಎಲೆಗಳ ಅಂಚಿನಿಂದ ಒಣಗುವಿಕೆ ಪ್ರಾರಂಭವಾಗಿ ಕಾಂಡದ ಮೂಲಕ ಬೆಳೆಯುವ ಚಿಗುರಿಗೆ ವ್ಯಾಪಿಸಿ, ಗಿಡಗಳ ಬೆಳವಣಿಗೆ ನಿಂತು ಹೋಗುತ್ತದೆ. ಗಿಡಗಳು ಕಾಳು ಕಟ್ಟುವುದಿಲ್ಲ.
ಇದರ ನಿಯಂತ್ರಣಕ್ಕೆ ಪ್ರತಿ ಕಿ.ಗ್ರಾಂ ಬೀಜಕ್ಕೆ 5 ಗ್ರಾಂ ಇಮಿಡಾಕ್ಲೋಪ್ರಿಡ್ ಕೀಟನಾಶಕ ಬೆರೆಸಬೇಕು. ಹೊಲದ ಸುತ್ತಲೂ 3-4 ಸಾಲು ಎತ್ತರಕ್ಕೆ ಬೆಳೆಯುವ ಜೋಳ ಅಥವಾ ಮೆಕ್ಕೆಜೋಳ ಅಥವಾ ಸಜ್ಜೆಯನ್ನು ಹದಿನೈದು ದಿನಗಳ ಮುಂಚಿತವಾಗಿ ಬಿತ್ತಬೇಕು. ಸೂರ್ಯಕಾಂತಿ ಬಿತ್ತಿದ ಮೂವತ್ತು ದಿನಗಳ ನಂತರ 0.25 ಮಿ.ಲೀ ಇಮಿಡಾಕ್ಲೋಪ್ರಿಡ್ ಕೀಟನಾಶಕವನ್ನು ಅಥವಾ 1.5 ಮಿ.ಲೀ ಆಕ್ಸಿ ಡೆಮೆಟಾನ ಮಿಥೈಲ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೆ ಈ ರೋಗ ಹತೋಟಿಗೆ ಬರುತ್ತದೆ.