ಭಾರತದ ವಾಹನ ಮಾರುಕಟ್ಟೆ ಪ್ರವೇಶಿಸುವ ಟೆಸ್ಲಾ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ಈ ಸಂಬಂಧ ಹಲವು ವರ್ಷಗಳಿಂದ ಭಾರತ ಸರ್ಕಾರ ಹಾಗೂ ಟೆಸ್ಲಾ ಸಂಸ್ಥೆ ನಡುವಿನ ಹಗ್ಗಜಗ್ಗಾಟ ಕೊನೆಗೊಂಡಿದೆ. ಕೊನೆಗೂ ಕೇಂದ್ರ ಸರ್ಕಾರದ ಬೇಡಿಕೆಗೆ ಮಣಿದಿರುವ ಟೆಸ್ಲಾ, ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟಗಾರರ ಕೇಂದ್ರ ಸ್ಥಾಪಿಸಲು ಒಪ್ಪಿಗೆ ನೀಡಿದೆ.
ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ವಾಹಗಳ ಬಿಡಿ ಭಾಗಗಳ ಜೋಡಣೆ ಘಟಕದ ಹೊರತಾಗಿ ಮಾರಾಟಗಾರರ ಕೇಂದ್ರ ತೆರೆಯಲು ಒಪ್ಪಿಗೆ ಸೂಚಿಸಿದೆ. ಈ ಹಿಂದೆ ಕೇಂದ್ರ ಸರ್ಕಾರ ಭಾರತದಲ್ಲಿ ಎಲೆಕ್ಟ್ರಿಕ್ ವಾಹಗಳ ಬಿಡಿ ಭಾಗಗಳ ಜೋಡಣೆ ಘಟಕ ಸ್ಥಾಪಿಸಿ, ಆ ನಂತರ ಮಾರಾಟಗಾರರ ಬೇಸ್ ಸ್ಥಾಪಿಸುವಂತೆ ಟೆಸ್ಲಾಕ್ಕೆ ಮನವಿ ಮಾಡಿತ್ತು. ಪ್ರಸ್ತುತ ಬಹುತೇಕ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಚೀನಾದಲ್ಲಿ ನಡೆಯುತ್ತಿದ್ದು, ಉತ್ಪಾದನೆ ಪ್ರಕ್ರಿಯೆ ಹಾಗೂ ಪೂರೈಕೆ ಸರಪಳಿಯನ್ನು ಪ್ರತ್ಯೇಕಿಸಲು ಕಂಪನಿ ಇಷ್ಟವಿಲ್ಲ. ಹೀಗಾಗಿ ಭಾರತದಲ್ಲಿ ಮಾರಾಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಇನ್ನೂ ವಿಳಂಬ ಮಾಡೋದಿಲ್ಲ ಎಂದು ಟೆಸ್ಲಾ ಸೂಚಿಸಿದೆ.
ಭಾರತದಲ್ಲಿನ ಯೋಜನೆಗಳನ್ನು ವಿವರಿಸುವ ಹಾಗೂ ಎಲೆಕ್ಟ್ರಿಕ್ ವಾಹನಗಳ ದೇಶೀಯ ಉತ್ಪಾದನೆ ಪ್ರಾರಂಭಿಸಲು ಅಗತ್ಯವಾದ ಸ್ಥಳೀಯ ಪೂರೈಕೆ ಸರಪಳಿಯನ್ನು ರೂಪಿಸುವ ನೀಲಿ ನಕಾಶೆ ನೀಡುವಂತೆ ಕೇಂದ್ರ ಸರ್ಕಾರ ಕಳೆದ ತಿಂಗಳು ಟೆಸ್ಲಾಗೆ ಕಂಪನಿಗೆ ಕೇಳಿಕೊಂಡಿತ್ತು.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಸಂಬಂಧಿಸಿ ಟೆಸ್ಲಾ ನೀಡುವ ನೀಲಿ ನಕಾಶೆಯನ್ನು ಕೇಂದ್ರ ಸರ್ಕಾರ ಅಧ್ಯಯನ ನಡೆಸಿ, ಆ ಬಳಿಕ ಕಂಪನಿಗೆ ಎಷ್ಟು ಸುಂಕ ವಿನಾಯಿತಿ ನೀಡಬಹುದು ಎಂಬುದನ್ನು ನಿರ್ಧರಿಸುತ್ತದೆ. ಮುಂದಿನ ಮೂರರಿಂದ ಆರು ತಿಂಗಳ ಅವಧಿಯಲ್ಲಿ ಈ ಸಂಬಂಧ ಭಾರತಕ್ಕೆ ವಿವರವಾದ ಪ್ರಸ್ತಾವನೆಯನ್ನು ಟೆಸ್ಲಾ ನೀಡಲಿದೆ.
ಟೆಸ್ಲಾ ತನ್ನ ಎಲೆಕ್ಟ್ರಿಕ್ ವಾಹನಗಳ ದೇಶೀಯ ಜೋಡಣೆ ಘಟಕ ಸ್ಥಾಪಿಸಿದರೆ ಆಮದು ಮಾಡಿಕೊಳ್ಳುವ ಬಿಡಿ ಭಾಗಗಳಿಗೆ ಆಮದು ರಿಯಾಯಿತಿ ನೀಡಲಾಗುವುದು ಎಂದು ಈ ವರ್ಷದ ಮೇ ಮಧ್ಯಭಾಗದಲ್ಲಿ ಭಾರತಕ್ಕೆ ಭೇಟಿ ನೀಡಿರುವ ಟೆಸ್ಲಾ ತಂಡಕ್ಕೆ ಸರ್ಕಾರ ಸೂಚನೆ ನೀಡಿತ್ತು.
ಅಮೆರಿಕದ ಪ್ರಮುಖ ಎಲೆಕ್ಟ್ರಿಕ್ ಕಾರು ಉತ್ಪಾದಕ ಕಂಪನಿ ಟೆಸ್ಲಾ ಇಂಕ್ ತುಂಬಾ ಸಮಯದಿಂದ ಭಾರತಕ್ಕೆ ಆಗಮಿಸಲು ಪ್ರಯತ್ನ ನಡೆಸುತ್ತ ಬಂದಿದೆ. ಕಳೆದ ವರ್ಷ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೆ ಅಧ್ಯಯನ ತಂಡವನ್ನು ಟೆಸ್ಲಾ ಕಳುಹಿಸಿತ್ತು. ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಶೋರೂಮ್ಗಳು ಮತ್ತು ಸೇವಾ ಕೇಂದ್ರಗಳನ್ನು ತೆರೆಯಲು ಸ್ಥಳ ಪರಿಶೀಲನೆ ಕೂಡ ಮಾಡಲಾಗಿತ್ತು. ಚೀನಾದಲ್ಲಿ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲ್ಪಟ್ಟ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಯೋಜನೆ ಇದು ಹೊಂದಿತ್ತು. ಇದಕ್ಕಾಗಿ ಆಮದು ಸುಂಕದಲ್ಲಿ ಕಡಿತ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಆದರೆ, ಟೆಸ್ಲಾದ ಈ ಬೇಡಿಕೆಗೆ ಪ್ರತಿಯಾಗಿ ಭಾರತ ಸರ್ಕಾರ, ಸ್ಥಳೀಯವಾಗಿ ಉತ್ಪಾದನೆ ಮಾಡುವಂತೆ ಷರತ್ತು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಟೆಸ್ಲಾ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಯೋಜನೆಯನ್ನು ಅಲ್ಲಿಗೆ ಸ್ಥಗಿತಗೊಳಿಸಲಾಗಿತ್ತು.