ಜೂನ್ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಸಹಿ ಸುದ್ದಿ ಸಿಕ್ಕಿದೆ. 19ಕೆ.ಜಿ ಎಲ್ ಪಿಜಿ ಸಿಲಿಂಡರ್ ಬೆಲೆ 83.5 ರೂ. ನಷ್ಟು ಇಳಿಕೆಯಾಗಿದೆ.
ಸರ್ಕಾರಿ ತೈಲ ಕಂಪನಿಗಳು ಬಿಡುಗಡೆ ಮಾಡಿದ ಬೆಲೆಯ ಪ್ರಕಾರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂ. ನಷ್ಟು ಇಳಿಕೆಯಾಗಿದ್ದು, ಈ ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಈಗ 19 ಕೆಜಿ ಎಲ್ ಪಿಜಿ ಸಿಲಿಂಡರ್ ಗೆ ಈಗ 1,773 ರೂ. ಆಗಿದೆ. ಈ ಹಿಂದೆ ಸಿಲಿಂಡರ್ ಬೆಲೆ 1,856.5 ರೂ. ಇತ್ತು. ಇನ್ನು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
–
ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸ್ಟ್ಯಾನ್ ಫೋರ್ಡ್ ವಿವಿಯಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.
ನಾನು ಸಂಸದ ಸ್ಥಾನದಿಂದ ಅನರ್ಹವಾಗಿದ್ದರಿಂದ ನನಗೆ ಜನರ ಸೇವೆ ಮಾಡಲು ದೊಡ್ಡ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ. ರಾಜಕೀಯ ಪ್ರವೇಶ ಮಾಡಿದಾಗ ಸಂಸದ ಸ್ಥಾನದಿಂದ ಅನರ್ಹಗೊಳ್ಳುತ್ತೇನೆ ಎಂದು ಊಹಿಸಿರಲಿಲ್ಲ. ಆದರೆ ಈಗ ಇದರಿಂದ ದೇಶದ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಹೊಸ ಅವಕಾಶ ತೊಡಗಿಸಿಕೊಳ್ಳಲು ಅನುಕೂಲವಾಗುತ್ತಿದೆ ಎಂದರು.
ಈ ವೇಳೆ ಭಾರತದಲ್ಲಿ ಪ್ರತಿಪಕ್ಷಗಳ ತೊಂದರೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳುವ ತೀರ್ಮಾನ ಮಾಡಿತ್ತು ಎಂದಿದ್ದಾರೆ.
–
ತಮಿಳುನಾಡಿನ ನಮ್ಮ ಸೋದರರ ಮೇಲೆ ದ್ವೇಷವಾಗಲಿ, ಕೋಪವಾಗಲಿ ಇಲ್ಲ. ಅವರು ನಮ್ಮ ಅಣ್ಣತಮ್ಮಂದಿರಂತೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೇಕೆದಾಟು ಯೋಜನೆ ಕುರಿತು ಟ್ವೀಟ್ ಮಾಡಿದ ಅವರು, ಮೇಕೆದಾಟು ಯೋಜನೆಗೆ ಹಿಂದಿನ ಸರ್ಕಾರ ಒಂದು ಸಾವಿರ ಕೋಟಿ ರೂ. ಘೋಷಿಸಿದೆ ಆದರೆ ಖರ್ಚು ಮಾಡಿಲ್ಲ. ಯೋಜನೆಯನ್ನು ಸಾಕಾರಗೊಳಿಸಲು ಆ ಹಣ ಬಳಕೆಯಾಗಲಿದೆ. ತಮಿಳುನಾಡಿನ ನಮ್ಮ ಸಹೋದರರ ಮೇಲೆ ಕೋಪವಾಗಲೀ, ದ್ವೇಷವಾಗಲೀ ಇಲ್ಲ. ಅವರೂ ನಮ್ಮ ಅಣ್ಣತಮ್ಮಂದಿರಂತೆ ಎಂದಿದ್ದಾರೆ.
ಕರ್ನಾಟದಲ್ಲಿ ನೆಲೆಸಿರುವ ತಮಿಳಿಗರು ಹಾಗೂ ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರು ಕಾವೇರಿ ನೀರು ಕುಡಿಯುತ್ತಿದ್ದಾರೆ. ಕೋರ್ಟು, ಕಚೇರಿ ಅಲೆದದ್ದು ಸಾಕು. ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೂ ಅನುಕೂಲವಾಗಲಿದೆ. ಕಾವೇರಿ ಪಾತ್ರದಲ್ಲಿರುವ ರೈತರಿಗೆ ನೀರಾವರಿ ಹಾಗೂ ಶ್ರೀಸಾಮಾನ್ಯರಿಗೆ ಕುಡಿಯುವ ನೀರು ಎರಡೂ ಲಭಿಸಲಿದೆ ಎಂದರು.
ನಾನು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಅಕ್ಕಪಕ್ಕದ ರಾಜ್ಯದವರು ಅಣ್ಣ ತಮ್ಮಂದಿರಂತೆ ಬದುಕೋಣ. ನಿಮ್ಮಲ್ಲಿ ಹೃದಯ ಶ್ರೀಮಂತಿಕೆ ಇದೆ, ನಮ್ಮಲ್ಲೂ ಹೃದಯ ಶ್ರೀಮಂತಿಕೆ ಇದೆ. ಒಬ್ಬರಿಗೊಬ್ಬರು ಸಹಕರಿಸುತ್ತಾ ಜೊತೆಯಾಗಿ ಸಾಗೋಣ ಎಂದು ತಿಳಿಸಿದ್ದಾರೆ.
–
ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಜೂನ್ 6 ರ ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 6 ರವರೆಗೆ ಬೆಂಗಳೂರಿನಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಜೋರಾದ ಗಾಳಿಯೊಂದಿಗೆ ಒಂದು ಅಥವಾ ಎರಡು ಬಾರಿ ಗುಡುಗು ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.
ಜೂನ್ 1 ರಿಂದ ಜೂನ್ 6 ರ ನಡುವೆ ದಕ್ಷಿಣ ಒಳ ಕರ್ನಾಟಕ, ಉತ್ತರ ಒಳ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಭಾಗಗಳಲ್ಲಿ ಮಳೆಯ ಎಚ್ಚರಿಕೆಯನ್ನು ಸಹ ನೀಡಲಾಗಿದೆ.
–
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ರಾಜ್ಯದ ಪ್ರತಿ ಮನೆಗೂ 100 ಯೂನಿಟ್ ಗಳ ಉಚಿತ ವಿದ್ಯುತ್ ಅನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮಾಸಿಕ 100 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರಿಗೆ ಬಿಲ್ ಇರುವುದಿಲ್ಲ. ಅದಕ್ಕಿಂತಲೂ ಹೆಚ್ಚು ಬಳಕೆ ಮಾಡುವ ಕುಟುಂಬಗಳಿಗೆ ಮೊದಲ 100 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.