ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ, ಎಸ್ಡಿಎಂ ಕಾಲೇಜಿನ ಹಳೇ ವಿದ್ಯಾರ್ಥಿನಿ ಸಾಲಿಯತ್(24) ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪಡಂಗಡಿ ಪೊಯ್ಯೇಗುಡ್ಡೆ ನಿವಾಸಿಯಾಗಿದ್ದ ಸಾಲಿಯತ್ ಒಂದು ವರ್ಷದ ಹಿಂದೆ ವಿವಾಹವಾಗಿ ಚಿಕ್ಕಮಗಳೂರಿನ ಪತಿ ಮನೆಯಲ್ಲಿ ವಾಸವಿದ್ದರು. ಹೃದಯ ನೋವು ಕಾಣಿಸಿಕೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಬುಧವಾರ ಸಾಲಿಯತ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ:
ಪಡಂಗಡಿಯಲ್ಲಿ ಪ್ರಾಥಮಿಕ, ಎಸ್.ಡಿ.ಎಂ. ಅನುದಾನಿತ ಪ್ರೌಢ ಶಾಲೆ ಉಜಿರೆಯಲ್ಲಿ 9 ತರಗತಿ, ಮುಂಡಾಜೆಯಲ್ಲಿ 10 ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿ, ಉಜಿರೆ ಎಸ್.ಡಿ.ಎಂ.ನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆಯುತ್ತಿರುವಾಗ ಕ್ರೀಡಾ ಕ್ಷೇತ್ರದಲ್ಲಿ ಅತ್ಯಧಿಕ ಸಾಧನೆಯನ್ನು ಮಾಡಿದ್ದರು.
ರಾಷ್ಟ್ರಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಷನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ, ಜ್ಯೂನಿಯರ್ ನ್ಯಾಷನಲ್ ನಲ್ಲಿ ತೃತೀಯ ಸ್ಥಾನ ಗಳಿಸಿರುವುದು ಇವರ ಸಾಧನೆಯ ಹಾದಿಯಾಗಿದೆ. ಇವರ ಸಾಧನೆಯನ್ನು ಮೆಚ್ಚಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಪ್ರಶಂಸಿದ್ದರು.