ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸï ಪಕ್ಷ ಅಧಿಕಾರ ಗದ್ದುಗೆ ಹಿಡಿಯುತ್ತಿದ್ದಂತೆ ಎಲ್ಲೆಡೆ ಪಕ್ಷ ಕೊಟ್ಟಿದ್ದ ಗ್ಯಾರಂಟಿ ಯೋಜನೆಗಳನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಜನ ಹಾಗೂ ವಿಪಕ್ಷ ಮುಖಂಡರು ಒತ್ತಡ ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಸರ್ಕಾರಕ್ಕೆ ನೇಕಾರರ ಸವಾಲ್ ಎದುರಾಗಿದೆ.
ಚುನಾವಣೆ ಪೂರ್ವ ಹಾಗೂ ಚುನಾವಣೆ ಪ್ರಚಾರದ ವೇಳೆ ನೇಕಾರ ಸಮುದಾಯ ಹೆಚ್ಚಿಗೆ ಇರುವ ಪ್ರದೇಶಗಳಲ್ಲಿ ಸಿದ್ದರಾಮಯ್ಯ ಅವರು ಪಕ್ಷ ಅಧಿಕಾರಕ್ಕೆ ಬಂದರೆ ವಿದ್ಯುತ್ ಚಾಲಿತ ಮಗ್ಗಗಳಿಗೆ ಉಚಿತ ವಿದ್ಯುತ್ ಕೊಡುವ ಅಭಯ ನೀಡಿದ್ದರು. ಹಾಗೆಯೇ ರೈತರಿಗೆ ಸಾಲ ಕೊಡುವ ಮಾದರಿಯಲ್ಲಿ ನೇಕಾರರಿಗೆ 3 ಲಕ್ಷ ರೂ. ವರೆಗೂ ಬಡ್ಡಿರಹಿತ ಸಾಲ ಕೊಡುವುದಾಗಿ ಭರವಸೆ ನೀಡಿದ್ದರು.
ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದಲ್ಲದೇ ಭರವಸೆ ನೀಡಿದ್ದ ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ಇದೀಗ ನೇಕಾರರು ಕೊಟ್ಟ ಭರವಸೆ ಈಡೇರಿಸುವಂತೆ ಆಗ್ರಹಿಸುತ್ತಿದ್ದಾರೆ.
ಮುಖ್ಯವಾಗಿ ಕನಿಷ್ಠ 10 ಎಚ್ಪಿ ವರೆಗೂ ವಿದ್ಯುತ್ ಚಾಲಿತ ಮಗ್ಗಗಳಿಗೆ ಉಚಿತ ವಿದ್ಯುತ್ ಹಾಗೂ ನೇಕಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ, ಬಳಿಕ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಸರ್ಕಾರಕ್ಕೆ ಒತ್ತಾಯ ಮಾಡಿದೆ.
ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಿದ್ದಾಗಲೂ ಅವರನ್ನು ಭೇಟಿ ಮಾಡಿದಾಗ, ಈ ಸರ್ಕಾರ ಬಿಡಿ, ನಾವು ಅಧಿಕಾರಕ್ಕೆ ಬಂದ ಮೇಲೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಅದರಂತೆ ಈಗ ಅವರ ನಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯ ಅಧ್ಯಕ್ಷ ಶಿವಲಿಂಗ ಟರಕಿ ಹೇಳುತ್ತಾರೆ.
1.25 ಪೈಸೆಗೆ ಇಳಿಸಿದ್ದ ಸಿದ್ದರಾಮಯ್ಯ:
ವಿದ್ಯುತ್ ಚಾಲಿತ ಮಗ್ಗಗಳಿಗೆ ಈ ಹಿಂದೆ ಒಂದು ಯುನಿಟ್ಗೆ 4.25 ರೂ. ಇತ್ತು. ಸಿದ್ದರಾಮಯ್ಯ ಅವರು ಮೊದಲ ಸಲ ಸಿಎಂ ಆಗಿದ್ದಾಗ ನೇಕಾರರ ಒತ್ತಾಯಕ್ಕೆ ಮಣಿದು ಅದನ್ನು 1.25 ರೂ.ಗೆ ಇಳಿಸಿದ್ದರು. ಆ ನಂತರದಲ್ಲಿ ಕಚ್ಚಾವಸ್ತುಗಳ ಬೆಲೆ ಗಗನಮುಖಿ ಆಗಿದ್ದು, ಕರೊನಾ ಹೊಡೆತ, ಬೇಡಿಕೆ ಕುಸಿತದಿಂದ ನೇಕಾರರ ಉಚಿತ ವಿದ್ಯುತ್ಗೆ ಬೇಡಿಕೆ ಇಟ್ಟಿದ್ದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ಎಂದು ಪ್ರಜಾಧ್ವನಿ ಸಮಾವೇಶ ಹಾಗೂ ಚುನಾವಣೆ ಪ್ರಚಾರದ ವೇಳೆ ಮೇ 2 ರಂದು ಬಾಗಲಕೋಟೆ ನಗರದಲ್ಲಿ ಸಿದ್ದರಾಮಯ್ಯ ಅವರೇ ಘೋಷಣೆ ಮಾಡಿದ್ದು, ಇದೀಗ ನೇಕಾರರ ನುಡಿದಂತೆ ನಡೆಯಿರಿ ಎಂದು ಆಗ್ರಹಿಸುತ್ತಿದ್ದಾರೆ.