ಭಾರತ ಉಪಖಂಡದಲ್ಲೆ ಮೊಟ್ಟ ಮೊದಲ ಬಾರಿಗೆ ಮಾನವ ಜೀವಿಸಿದ್ದರ ಬಗ್ಗೆ ಆಧಾರ ಕೊಡುವ ಭೀಮ್ ಬೇಟ್ಕಾ ಕಲ್ಲಿನ ಆಶ್ರಯಗಳು ಪೇಲಿಯೊಲಿಥಿಕ್ ಅಥವಾ ಪೂರ್ವ ಶಿಲಾಯುಗಕ್ಕೆ ಸಂಬಂಧಿಸಿದ ತಾಣವಾಗಿದೆ. ಈ ವಿಸ್ಮಯಭರಿತ ಕುತೂಹಲಕಾರಿ ತಾಣವಿರುವುದು ಮಧ್ಯ ಪ್ರದೇಶದ ರಾಯ್ಸನ್ ಜಿಲ್ಲೆಯಲ್ಲಿ. ನಾವು ಪದವಿ ಅಂತಿಮ ವರ್ಷದಲ್ಲಿದ್ದಾಗ ನಮ್ಮ ಕಾಲೇಜಿನ ಇತಿಹಾಸ ವಿಭಾಗದಿಂದ ನಾವು ಇಲ್ಲಿ ಪ್ರವಾಸ ಕೈಗೊಂಡಿದ್ದೆವು.
ಶಿಲಾಯುಗಕ್ಕೆ ಸಂಬಂಧಿಸಿದ ಶಿಲಾವರ್ಣಚಿತ್ರಗಳನ್ನು ಸಹ ಇಲ್ಲಿವೆ. ಇವು ಸುಮಾರು 30000 ವರ್ಷಗಳಷ್ಟು ಪುರಾತನವಾಗಿವೆ. ಅಲ್ಲದೆ ಇಲ್ಲಿ ಕಂಡುಬರುವ ಗುಹೆಗಳು ನೃತ್ಯದ ಪ್ರಪ್ರಥಮ ಸಾಕ್ಷ್ಯಗಳನ್ನು ಒದಗಿಸುತ್ತವೆ. ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಭೀಮ್ ಬೇಟ್ಕಾದ ಹೆಸರನ್ನು 2003 ರಲ್ಲಿ ಸೇರ್ಪಡೆ ಮಾಡಲಾಯಿತು. ಇತಿಹಾಸ ಪ್ರೀಯ ಪ್ರವಾಸಿಗರಿಗೆ ಪುರಾತತ್ವ ತಜ್ಞರಿಗೆ ಇದೊಂದು ನೆಚ್ಚಿನ ಪ್ರವಾಸಿ ಪ್ರದೇಶವಾಗಿದೆ.
ಈ ಸ್ಥಳವು ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ. ಭೋಪಾಲ್ನಿಂದ ಆಗ್ನೇಯಕ್ಕೆ 45 ಕಿಲೋಮೀಟರ್ ದೂರದ ಸಾಗಿದರೆ ಹಲವಾರು ಗುಹೆಗಳು ಇಲ್ಲಿ ಕಾಣಸಿಗುತ್ತವೆ. ಇಲ್ಲಿನ ಐತಿಹಾಸಿಕ ಮಹತ್ವಕ್ಕೆ ಯೆನೆಸ್ಕೋ ಕೂಡಾ ಮನ್ನಣೆ ನೀಡಿದೆ. ಹೀಗಾಗಿ, ಈ ತಾಣಕ್ಕೆ ವಿಶ್ವ ಪಾರಂಪರಿಕಾ ತಾಣ ಎಂಬ ಮಾನ್ಯತೆಯನ್ನೂ ನೀಡಿದೆ. ಇಲ್ಲಿ ಏಳು ಬೆಟ್ಟಗಳಿವೆ. ಸುಮಾರು 10 ಕಿಲೋಮೀಟರ್ ಚಾಚಿರುವ ಈ ಪ್ರದೇಶದಲ್ಲಿ 750ಕ್ಕೂ ಅಧಿಕ ಗುಹೆಗಳಿವೆ. ಆದರೆ, ಸದ್ಯ ಜನರಿಗೆ ಪ್ರವೇಶ ಇರುವುದು ಕೆಲವೇ ಕೆಲವು ಗುಹೆಗಳಿಗೆ ಮಾತ್ರ.
ಈ ತಾಣದ ಹೆಸರು ಮಹಾಭಾರತದ ಪೌರಾಣಿಕ ಪಾತ್ರವಾದ ಪಾಂಡವರಲ್ಲಿ ಒಬ್ಬನಾದ ಭೀಮನೊಂದಿಗೆ ನಂಟನ್ನು ಹೊಂದಿದೆ. ಭೀಮ್ ಬೇಟ್ಕಾ ಎಂಬ ಹೆಸರು ಭೀಮ್ ಬೈಟ್ಕಾ ಎಂಬ ಶಬ್ದದಿಂದ ವ್ಯುತ್ಪತ್ತಿಯಾಗಿದ್ದು ಇದರ ಅರ್ಥ ಭೀಮನು ಕೂರುವ ಸ್ಥಳ ಎಂದಾಗುತ್ತದೆ. ರಾಯ್ಸನ್ ಜಿಲ್ಲೆಯಲ್ಲಿರುವ ಈ ತಾಣವು ರಾಜಧಾನಿ ಭೋಪಾಲ್ ನಗರದ ದಕ್ಷಿಣಕ್ಕೆ 45 ಕಿ.ಮೀಗಳ ದೂರದಲ್ಲಿದೆ. ಇದರ ಸುತ್ತಮುತ್ತಲಿನ ಪ್ರದೇಶವು ದಟ್ಟವಾದ ಸಸ್ಯ ಸಂಪತ್ತಿನಿಂದ ಆವರಿಸಿದೆ. ಇಲ್ಲಿರುವ ಕಲ್ಲಿನ ಆಸರೆಗಳು (ಶೆಲ್ಟರ್ಸ್) ಹಾಗು ಗುಹೆಗಳಲ್ಲಿ ಸಾಕಷ್ಟು ಶಿಲಾಯುಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳನ್ನು ಕಾಣಬಹುದಾಗಿದೆ. ಕೆಲವು ವರ್ಣಚಿತ್ರಗಳು 30000 ವರ್ಷಗಳಷ್ಟು ಪುರಾತನವಾಗಿದ್ದರೆ ಇನ್ನೂ ಕೆಲವು ಜಾಮಿತಿಯ ಆಕೃತಿಗಳು ಮಧ್ಯಯುಗದಲ್ಲಿ ರಚಿತವಾಗಿರುವುದಾಗಿವೆ
ಮೊದಲನೇಯ ವರ್ಗದ ಪೂರ್ವ ಶಿಲಾಯುಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳಲ್ಲಿ ಹಸಿರು ಹಾಗು ಕಡು ಕೆಂಪು ಬಣ್ಣವನ್ನು ಬಳಸಿ ಹುಲಿ, ಬೈಸನ್, ಘೇಂಡಾಮೃಗಗಳಂತಹ ಪ್ರಾಣಿಗಳನ್ನು ದೊಡ್ಡ ಆಕಾರದಲ್ಲಿ ಬಿಡಿಸಲಾಗಿದೆ. ಎರಡನೇಯ ವರ್ಗದ ಪೂರ್ವಶಿಲಾಯುಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳು ಚಿಕ್ಕ ಗಾತ್ರದ ಕಲಾಕೃತಿಗಳನ್ನು ಒಳಗೊಂಡಿದ್ದು, ಮನುಷ್ಯರ, ಪ್ರಾಣಿಗಳ, ಉಪಕರಣಗಳು, ಬೇಟೆಯಾಡುವ, ಸನ್ನಿವೇಶಗಳನ್ನು ಒಳಗೊಂಡಿವೆ. ಹೀಗೆ ಪೂರ್ವ ಶಿಲಾಯುಗದಿಂದ ಪ್ರಾರಂಭವಾಗಿ ಮಧ್ಯ ಯುಗದವರೆಗೆ ಒಟ್ಟು ಏಳು ವರ್ಗಗಳಲ್ಲಿ ಚಿತ್ರಗಳನ್ನು ಕಾಣಬಹುದು.
ಭೀಮೇಟ್ಕಾದ ರಾಕ್ ಶೆಲ್ಟರ್ಸ್
ಭೀಮೇಟ್ಕಾದ ರಾಕ್ ಶೆಲ್ಟರ್ಗಳು ಮಧ್ಯ ಭಾರತದ ಪ್ರಸ್ಥಭೂಮಿಯ ದಕ್ಷಿಣದ ಅಂಚಿನಲ್ಲಿರುವ ವಿಂಧ್ಯಾ ಪರ್ವತಗಳ ತಪ್ಪಲಿನಲ್ಲಿವೆ. ತುಲನಾತ್ಮಕವಾಗಿ ದಟ್ಟವಾದ ಅರಣ್ಯದ ಮೇಲೆ ಬೃಹತ್ ಮರಳುಗಲ್ಲಿನ ಹೊರಹರಿವಿನೊಳಗೆ, ನೈಸರ್ಗಿಕ ಬಂಡೆಗಳ ಆಶ್ರಯಗಳ ಐದು ಸಮೂಹಗಳು, ಮಧ್ಯಶಿಲಾಯುಗದ ಅವಧಿಯಿಂದ ಐತಿಹಾಸಿಕ ಅವಧಿಯವರೆಗೆ ಕಂಡುಬರುವ ವರ್ಣಚಿತ್ರಗಳನ್ನು ಪ್ರದರ್ಶಿಸುತ್ತವೆ. ಸೈಟ್ನ ಪಕ್ಕದಲ್ಲಿರುವ ಇಪ್ಪತ್ತೊಂದು ಹಳ್ಳಿಗಳ ನಿವಾಸಿಗಳ ಸಾಂಸ್ಕೃತಿಕ ಸಂಪ್ರದಾಯಗಳು ರಾಕ್ ವರ್ಣಚಿತ್ರಗಳಲ್ಲಿ ಪ್ರತಿನಿಧಿಸುವವರಿಗೆ ಬಲವಾದ ಹೋಲಿಕೆಯನ್ನು ಹೊಂದಿವೆ.
ಮಂಗನಿಂದ ಮಾನವ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಹೀಗೆ ಮಂಗನಿಂದ ಆದಿಮಾನವನಾಗಿ ವಿಕಾಸಗೊಂಡು ಬಳಿಕ ಹಲವಾರು ಯುಗಗಳನ್ನು ದಾಟಿ ಈಗ ಆಧುನಿಕ ಯುಗದಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ. ಆದರೆ, ಮಾನವನ ಈ ಪರಿವರ್ತನೆಗೆ ಲಕ್ಷಾಂತರ ವರ್ಷಗಳು ಹಿಡಿದಿದೆ.
ಪುರಾತನ ಕಾಲದ ಕೆಲವೊಂದು ಕುರುಹುಗಳನ್ನು ನೋಡುವಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಮನುಷ್ಯನ ವಿಕಾಸದ ಸಂದರ್ಭದ ಪರಿಸ್ಥಿತಿ ಹೇಗಿತ್ತು ಎಂಬ ಬಗ್ಗೆ ಸಿಗುವ ಪಳೆಯುಳಿಕೆಗಳು ಇಂದಿಗೂ ಕುತೂಹಲದ ವಸ್ತುವಾಗಿದೆ.
ಶಿಲಾಯುಗ ಮತ್ತು ಅದರ ಹಿಂದಿನ ಕಾಲದ ಕುರುಹುಗಳು ಇಲ್ಲಿವೆ. ಈ ಗುಹೆಗಳಲ್ಲಿ ನಮ್ಮ ಪೂರ್ವಜರು ವಾಸವಾಗಿದ್ದರು ಎಂಬುದಕ್ಕೆ ಇಲ್ಲಿ ಹೆಜ್ಜೆ ಹೆಜ್ಜೆಗೂ ಸಾಕ್ಷಿಗಳು ಸಿಗುತ್ತವೆ. ಅದರಲ್ಲೂ ಈ ಗುಹೆಯ ಬಂಡೆಯ ಮೇಲೆ ಬಿಡಿಸಲಾಗಿರುವ ಚಿತ್ರಗಳ ರಹಸ್ಯದ ಗಂಟು ಇಂದಿಗೂ ಬಿಚ್ಚಲಾಗಿಲ್ಲ. ಬ್ರಿಟಿಷರ ಕಾಲದಲ್ಲಿ ಆಗಿನ ಅಧಿಕಾರಿ ಡಬ್ಲ್ಯೂ ಕಿನ್ಕೈಡ್ 1888ರಲ್ಲಿ ಮೊದಲ ಬಾರಿಗೆ ಭೀಮ್ಬೈತ್ಕಾವನ್ನು ತನ್ನ ದಾಖಲೆಯಲ್ಲಿ ಉಲ್ಲೇಖಿಸಿದ್ದರು. ಆದರೆ, ಭೀಮ್ಬೈತ್ಕಾದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಿದವರು ಪುರಾತತ್ವಶಾಸ್ತ್ರಜ್ಞ ವಿ ಎಸ್ ವಾಕಂಕರ್. 1957ರಲ್ಲಿ ಇವರು ಇಲ್ಲಿನ ಶಿಲೆಯ ಮೇಲಿನ ರಚನೆ, ಗುಹೆ ಸೇರಿದಂತೆ ಹಲವು ವಿಧದಲ್ಲಿ ಅಧ್ಯಯನ ನಡೆಸಿ ವರದಿ ಮಾಡಿದ್ದರು. ಜೊತೆಗೆ, ಇಂತಹದ್ದೇ ಶಿಲಾ ರಚನೆಗಳು ಸ್ಪೇನ್ ಮತ್ತು ಫ್ರಾನ್ಸಿನಲ್ಲೂ ಇರುವುದಾಗಿ ಇವರು ಉಲ್ಲೇಖಿಸಿದ್ದರು. ಆದರೆ, ಈ ಗುಹೆಯಲ್ಲಿರುವ ಚಿತ್ರಗಳಂತೂ ಇಂದಿಗೂ ದೊಡ್ಡ ರಹಸ್ಯವಾಗಿವೆ. ಇವು ಮೂರು ವಿಭಿನ್ನ ಅವಧಿಯ ಚಿತ್ರಗಳಾಗಿವೆ ಮತ್ತು ಮೂರರಲ್ಲೂ ಅದರಲ್ಲೇ ಆದ ವಿಶಿಷ್ಟತೆ ಮತ್ತು ವಿಭಿನ್ನ ಶೈಲಿ ಇದೆ.
ಇಲ್ಲಿರುವ ಹಲವು ಗುಹೆಗಳಲ್ಲಿ ಒಟ್ಟು ಸುಮಾರು ಎರಡು ಸಾವಿರಕ್ಕೂ ಅಧಿಕ ಬಗೆಬಗೆಯ ಚಿತ್ರಗಳನ್ನು ಬರೆಯಲಾಗಿದೆ ಎಂಬುದು ಅಧ್ಯಯನದ ಮೂಲಕ ಗೊತ್ತಾದ ಸಂಗತಿ. ಇಲ್ಲಿ ಹಸಿರು ಔಟ್ಲೈನ್ನಲ್ಲಿ ಮನುಷ್ಯರ ಚಿತ್ರ ಬಿಡಿಸಲಾಗಿದೆ. ಇದು ತುಂಬಾ ಹಳೆಯ ಚಿತ್ರವಾಗಿದೆ. ಇನ್ನು, ಕೆಂಪು ಬಣ್ಣದಲ್ಲಿ ದೊಡ್ಡ ಪ್ರಾಣಿಗಳ ಚಿತ್ರಗಳನ್ನೂ ಬರೆಯಲಾಗಿದೆ. ಇಲ್ಲಿನ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಕೆಲವೊಂದು ಪ್ರಾಣಿಗಳು ಈಗ ಇಲ್ಲವೇ ಇಲ್ಲ. ಇವುಗಳ ಕಾಲಮಾನ ಸುಮಾರು ಹತ್ತು ಸಾವಿರ ವರ್ಷಕ್ಕೂ ಹಿಂದಿನದ್ದು ಎಂದು ಅಂದಾಜಿಸಲಾಗಿದೆ. ಅಂದರೆ, ಈ ಅವಧಿಯಲ್ಲಿ ಒಂದಷ್ಟು ಸಲಕರಣೆಗಳನ್ನೂ ಬಳಸಲು ಮಾನವರು ಅರಿತಿದ್ದರು. ಆ ಕಾಲದ ಮಾನವರ ಬಹುತೇಕ ದೈನಂದಿನ ಜೀವನದ ಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ವಿವಿಧ ಪ್ರಾಣಿಗಳ ಬೇಟೆ, ಚಿಕ್ಕಚಿಕ್ಕ ಮನುಷ್ಯನ ಚಿತ್ರಗಳು, ಗುಂಪು ನೃತ್ಯ, ಆಟ, ಯುದ್ಧ, ಬೇಟೆ ಹೀಗೆ ವಿವಿಧ ಚಿತ್ರಗಳನ್ನು ಇಲ್ಲಿ ಕಾಣಬಹುದು. ಕೆಲವೊಂದು ಚಿತ್ರಗಳು ನಯನಾಜೂಕಿನಿಂದ ಕೂಡಿದ್ದು ಈಗಲೂ ಅಚ್ಚರಿ ಮೂಡಿಸುತ್ತವೆ.
ಇಲ್ಲಿ ಆದಿಮಾನವರು ಇದ್ದರು ಎಂಬುದು ಸ್ಪಷ್ಟ. ಅದಕ್ಕೆ ಇಲ್ಲಿರುವ ಕುರುಹುಗಳೇ ಸಾಕ್ಷಿ. ಆದರೆ, ಪ್ರಶ್ನೆ ಮೂಡುವುದು ಆದಿಮಾನವರಿಗೆ ಬಣ್ಣಗಳ ಬಗ್ಗೆ ಮಾಹಿತಿಯೂ ಇತ್ತಾ ಎಂಬುದು. ಯಾಕೆಂದರೆ, ಇಲ್ಲಿರುವ ಚಿತ್ರಗಳಲ್ಲಿ ನಾನಾ ಬಣ್ಣಗಳನ್ನು ಬಳಸಲಾಗಿದೆ. ಈ ಬಣ್ಣಗಳು ಇಂದಿಗೂ ಸ್ಪಷ್ಟವಾಗಿ ಕಾಣುತ್ತವೆ. ಅಂದರೆ, ಬಂಡೆಯಲ್ಲಿ ಇಷ್ಟು ಅಚ್ಚೊತ್ತಿದ್ದಂತೆ ಉಳಿಯುವಂತಹ ಅದ್ಯಾವ ಬಣ್ಣವನ್ನು ಆದಿ ಮಾನವರು ಬಳಸಿದ್ದರು…? ಈ ಬಣ್ಣ ತಯಾರಿಗೆ ಇವರು ಬಳಸಿದ್ದ ಮಾರ್ಗ ಯಾವುದು…? ಬಣ್ಣಗಳ ಬಗ್ಗೆ ಇವರಿಗೆ ಅಷ್ಟು ನಿಖರವಾಗಿ ಗೊತ್ತಿತ್ತಾ…? ಇಷ್ಟು ಸಾವಿರ ವರ್ಷಗಳೇ ಉರುಳಿದರೂ ಈ ಬಣ್ಣಗಳು ಇನ್ನೂ ಮಾಸಿಲ್ಲ ಹೇಗೆ…? ಹೀಗೆಲ್ಲಾ ಪ್ರಶ್ನೆಗಳು ಸುಳಿವುದು ಸಹಜ. ಆದರೆ, ಇಲ್ಲಿರುವ ಕುರುಹುಗಳನ್ನು ನೋಡಿದಾಗ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಬಣ್ಣಗಳ ಬಗ್ಗೆ ಅರಿತಿದ್ದರು ಎಂದು ನಂಬದೆ ವಿಧಿಯಿಲ್ಲ. ಯಾಕೆಂದರೆ, ಕಾರ್ಬನ್ ಡೇಟೆಡ್ನಲ್ಲಿ ಈ ಬಣ್ಣಗಳ ಕಾಲಮಾನ ಹತ್ತು ಸಾವಿರಕ್ಕೂ ಅಧಿಕ ವರ್ಷವೆಂದೇ ಗೊತ್ತಾಗಿದೆ. ಹೀಗಾಗಿ, ಭೀಮ್ಬೈತ್ಕಾ ಸದ್ಯ ಪ್ರವಾಸಿತಾಣವಾಗಿ ಮಾರ್ಪಟ್ಟಿದ್ದರೂ ಪ್ರಶ್ನೆಗಳು ಮಾತ್ರ ಹಾಗೆಯೇ ಉಳಿದಿವೆ.
ಇಂತಹ ಅಪರೂಪ ಮತ್ತು ಪ್ರಾಚೀನ ಸ್ಮಾರಕಗಳಿಗೆ ಭೇಟಿ ನೀಡಿ ಅದರ ಬಗ್ಗೆ ತಿಳಿದುಕೋಳ್ಳುವುದು ಅತ್ಯಂತ ರೋಮಾಂಚನಕಾರಿ ಅನುಭವವನ್ನು ನೀಡುತ್ತದೆ ಅದರಲ್ಲಿ ಸಂದೇಹವಿಲ್ಲ.