ಕರ್ನಾಟಕ ವಿಧಾನಸಭಾ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಯನ್ನು ಎದುರಿಸಿದ್ದ ಮಾಜಿ ಸಚಿವ ರಮಾನಾಥ ರೈ ಚುನಾವಣೆಯಲ್ಲಿ ಸೋತ ಬಳಿಕ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ.
ಚುನಾವಣಾ ರಾಜಕೀಯದಿಂದ ಮಾತ್ರ ದೂರವಿರಲಿದ್ದೇನೆ. ಆದರೆ ಪಕ್ಷ ಎಂಎಲ್ಸಿ ಸೇರಿದಂತೆ ಇತರ ಅವಕಾಶಗಳನ್ನು ನೀಡಿದ್ದಲ್ಲಿ ಅದನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ನಾನು ಪಕ್ಷಕ್ಕೆ ವಿರುದ್ಧವಾಗಿ ಎಂದೂ ನಡೆದಿಲ್ಲ ಆದ್ದರಿಂದ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. ಹಾಗೆಯೇ ಪಕ್ಷದಲ್ಲಿ ನನಗಿಂತಲೂ ಹಿರಿಯರು ಈಗಲೂ ಇದ್ದಾರೆ. ಆದರೆ ನಾನು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಮ್ಮ ಪಕ್ಷದಿಂದಲೇ ಅಪಸ್ವರ ಕೇಳಿ ಬರುತ್ತಿದೆ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ನಿವೃತ್ತಿಯ ಕಾರಣವನ್ನು ತಿಳಿಸಿದ್ದಾರೆ.
ರಮಾನಾಥ್ ರೈ ರಾಜಕೀಯ ಜೀವನ:
ಒಂಭತ್ತು ವಿಧಾನಸಭಾ ಚುನಾವಣೆಗಳನ್ನು ಎದುರಿಸಿರುವ ರಮಾನಾಥ್ ರೈ ಅವರು ಕೇವಲ ಮೂರು ಬಾರಿ ಸೋಲು ಕಂಡಿದ್ದು, ಸತತ ಆರು ಬಾರಿ ಒಂದೇ ಕ್ಷೇತ್ರದಲ್ಲಿ ಒಂದೇ ಪಕ್ಷದಲ್ಲಿ ಗೆಲುವನ್ನು ಪಡೆದುಕೊಂಡಿದ್ದಾರೆ.
ರಮಾನಾಥ್ ರೈ 1985 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುದರ ಮೂಲಕ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಕಣಕ್ಕಿಳಿದರು. 1989, 1994, 1999, 2008 ಮತ್ತು 2013ರಲ್ಲಿ ಸತತವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದರು. ಕೇವಲ ಶಾಸಕರಾಗಿ ಅಷ್ಟೇ ಅಲ್ಲದೇ ಸಚಿವರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. 1992ರಲ್ಲಿ ರಾಜ್ಯ ಗೃಹ ಸಚಿವರಾಗಿ, 1994ರಲ್ಲಿ ಅಬಕಾರಿ ಸಚಿವರಾಗಿ, 1999ರಲ್ಲಿ ಬಂದರು – ಮೀನುಗಾರಿಕೆ ಸಚಿವರಾಗಿ, 2002ರಲ್ಲಿ ಸಾರಿಗೆ ಸಚಿವರಾಗಿ, 2013ರಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಗೆಲುವಿನ ನಾಗಾಲೋಟದಲ್ಲಿದ್ದ ರಾಮನಾಥ್ ರೈ 2004ರಲ್ಲಿ ಮೊದಲ ಬಾರಿಗೆ ಸೋಲನ್ನು ಎದುರಿಸಬೇಕಾಯಿತು. ಬಿಜೆಪಿ ಅಭ್ಯರ್ಥಿ ಬಿ.ನಾಗರಾಜ ಶೆಟ್ಟಿ ವಿರುದ್ಧ 5,926 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ನಂತರ 2018ರ ಚುನಾವಣೆಯಲ್ಲೂ ರಾಜೇಶ್ ನಾಯಕ್ ವಿರುದ್ಧ 15,971 ಮತಗಳ ಅಂತರದಲ್ಲಿ ಸೋಲು ಕಂಡರು. ಈ ಬಾರಿಯ ಚುನಾವಣೆಗೂ ಮೊದಲೇ ಇದು ನನ್ನ ಕೊನೆಯ ಚುನಾವಣೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಆದರಿಂದ ರಾಜೇಶ್ ನಾಯಕ್ ವಿರುದ್ಧ ಈ ಬಾರಿಯ ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ರಾಜಕೀಯ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ.