ಬೆಳಗಾವಿ: ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಸೀಫ್ ಸೇಠ್ ಅವರ ಗೆಲುವನ್ನು ಸಂಭ್ರಮಿಸುವ ವೇಳೆ ಕೆಲ ಕಿಡಿಗೇಡಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಆಸೀಫ್ ಸೇಠ್ ಗೆಲುವು ಖಾತ್ರಿ ಆಗುತ್ತಿದ್ದಂತೆಯೇ ಅಪಾರ ಸಂಖ್ಯೆಯ ಬೆಂಬಲಿಗರು ಮತ ಎಣಿಕೆ ಕೇಂದ್ರದ ಸುತ್ತ ಗುಂಪುಗೂಡಿ ಬಣ್ಣಗಳನ್ನು ಎರಚಿ, ಸಂಗೀತ ಹಾಕಿಕೊಂಡು ಕುಣಿದರು. ಈ ಸಮಯದಲ್ಲಿ ಕಾಂಗ್ರೆಸ್ ಧ್ವಜ ಹಿಡಿದು ಬಂದ ಕೆಲವರು ‘ಜಿಂದಾಬಾದ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್’ ಎಂದು ಮೂರು ಬಾರಿ ಘೋಷಣೆ ಮೊಳಗಿಸಿದರು. ಕೂಡಲೇ ಸಮೀಪದಲ್ಲೇ ಇದ್ದ ಕೆಲವು ಪೊಲೀಸರು ಯುವಕರ ಬಳಿ ಹೋಗಿ ಇಂತಹ ಘೋಷಣೆ ಕೂಗದಂತೆ ತಾಕೀತು ಮಾಡಿದರು. ʼಈ ರೀತಿ ಬೇರೆ ಮಾತು ತೆಗೆದರೆ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ’ ಎಂದೂ ಎಚ್ಚರಿಕೆ ನೀಡಿದರು. ಆದರೆ, ಆರೋಪಿಗಳನ್ನು ಪೋಲೀಸರು ವಶಕ್ಕೆ ತೆಗೆದುಕೊಳ್ಳಲಿಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗಿರುವ ವಿಡಿಯೊ ತುಣುಕು ಸಂಜೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.
ಈ ಕುರಿತು ಪ್ರತಿಕ್ರಿಯಿಸಿದ ಪೋಲೀಸ್ ಇನ್ಸ್ಪೆಕ್ಟರ್ ದಯಾನಂದ ಶೇಗುಣಸಿ ಅವರು ‘ಆರ್ಪಿಡಿ ಕಾಲೇಜು ಬಳಿ ನಡೆದ ವಿಜಯೋತ್ಸವ ವೇಳೆ ಪಾಕಿಸ್ತಾನ್ ಜಿಂದಾಬಾಂದ್ ಎಂದು ಕೆಲವರು ಕೂಗಿದ್ದಾರೆ. ಐನೂರಕ್ಕೂ ಹೆಚ್ಚು ಯುವಕರು ಅಲ್ಲಿದ್ದರು. ಎಲ್ಲರೂ ಮುಖಕ್ಕೆ ಬಣ್ಣ ಬಳಿದುಕೊಂಡಿದ್ದರು. ಯಾರು ಕೂಗಿದ್ದು ಎಂದು ಗುರುತಿಸಲು ಆಗಿಲ್ಲ. ಈ ಬಗ್ಗೆ ಟಿಳಕವಾಡಿ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಸಿಕೊಳ್ಳಲಾಗುವುದುʼ ಎಂದು ಹೇಳಿದರು. ಈ ಕ್ಷೇತ್ರದಲ್ಲಿ ಆಸೀಫ್ ಅವರು 69,184 ಮತಗಳನ್ನು ಪಡೆದಿದ್ದು ಬಿಜೆಪಿಯ ಡಾ. ರವಿ ಪಾಟೀಲ್ ಅವರನ್ನು 4,653 ಮತಗಳಿಂದ ಸೋಲಿಸಿದ್ದಾರೆ.