ಜೂನ್ 1ನೇ ತಾರೀಕು ಬಂತೆಂದರೆ ಶಾಲೆಗಳಲ್ಲಿ ಪ್ರಾರಂಭೋತ್ಸವದ ಸಂಭ್ರಮ. ಮಕ್ಕಳಿಗೆ ಖುಷಿಯೋ ಖುಷಿ. ಪೋಷಕರಲ್ಲಿ ಏನೋ ಒಂಥರಾ ಚಿಂತೆ ಆದರೂ ʼಮಕ್ಕಳು ಶಾಲೆಗೆ ಹೊರಟರಲ್ಲಾʼ ಎಂಬ ನೆಮ್ಮದಿಯ ನಿಟ್ಟುಸಿರು. ʼಇನ್ನು ಪಾಠದ ಆರಂಭʼ ಎಂದು ಶಿಕ್ಷಕರಲ್ಲಿ ಉತ್ಸಾಹ. ಹೀಗೆ ಶಾಲಾರಂಭವನ್ನು ಪ್ರತಿಯೊಬ್ಬರು ಒಂದೊಂದು ರೀತಿ ಸ್ವಾಗತಿಸುತ್ತಾರೆ.
ಜೂನ್ನಲ್ಲಿ, ಮಕ್ಕಳು ಶಾಲೆಗೆ ಹೋಗುವ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಯೂನಿಫಾರಂ, ಬ್ಯಾಗ್, ಊಟದ ಡಬ್ಬಿ ಹೀಗೆ ಎಲ್ಲವನ್ನು ಖರೀದಿಸುತ್ತಾರೆ. ಇನ್ನೂ ಮಕ್ಕಳ ಊಟದ ಡಬ್ಬಿಗೆ ನೀಡುವ ಆಹಾರವು ಅವರ ಹಸಿವು ನೀಗಿಸುವ ಜೊತೆಗೆ ಆರೋಗ್ಯಕ್ಕೂ ಉತ್ತಮ ಎನ್ನಿಸಬೇಕು. ಹಾಗದರೆ ಮಕ್ಕಳ ಊಟದ ಡಬ್ಬಿ ಹೇಗಿರಬೇಕು, ಇಲ್ಲಿದೆ ನೋಡಿ ಪೋಷಕರಿಗೆ ಸಲಹೆ.
ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕೂಡ ಸವಾಲು. ಬ್ಯಾಗ್, ಯೂನಿಫಾರ್ಮ್, ಚಪ್ಪಲಿ, ಛತ್ರಿ, ರೇನ್ಕೋಟ್ ಇದೆಲ್ಲದರ ಜೊತೆಗೆ ಮುಖ್ಯವಾಗಿರುವುದು ಟಿಫಿನ್ ಬಾಕ್ಸ್ ಆಗಿದೆ.
ಮಕ್ಕಳ ಟಿಫಿನ್ ಬಾಕ್ಸ್ ಗೋಸ್ಕರ ಷೋಷಕರನ್ನು ಮೊದಲಿನ ದಿನವೇ ಚಿಂತೆಯಲ್ಲಿ ಇರಬಹುದು. ನಾಳೆ ಡಬ್ಬಿಗೆ ಏನು ಮಾಡಲಿ, ಅಕ್ಕಿ ತಿಂಡಿಗಳನ್ನು ಮಗು ತಿನ್ನುವುದಿಲ್ಲ, ಎಣ್ಣೆ ಪದಾರ್ಥ ಆರೋಗ್ಯ ಕೆಡುತ್ತದೆ, ಸಿಹಿ ತಿಂದರೆ ಹಲ್ಲು ಹುಳುಕಾಗುತ್ತದೆ. ಹೀಗೆ ಹಲವು ಗೊಂದಲಗಳು ಕಾಡಬಹುದು. ಅದೇನೆ ಇರಲಿ ಮಕ್ಕಳು ಶಾಲೆಗೆ ಒಯ್ಯುವ ಟಿಫಿನ್ ಬಾಕ್ಸ್ಗೆ ಆರೋಗ್ಯಕರ, ಪೌಷ್ಟಿಕಾಂಶಯುಕ್ತ ಆಹಾರ ನೀಡುವುದು ಅವಶ್ಯ ಹಾಗಿದ್ದರಿಂದ ಉತ್ತಮ ತಿಂಡಿ ತಿನಿಸುಗಳನ್ನು ಟಿಫಿನ್ ಬಾಕ್ಸ್ ಗೆ ಹಾಕಿ ಕೊಡಬೇಕು.
ಮಕ್ಕಳ ಟಿಫಿನ್ ಬಾಕ್ಸ್ ನಲ್ಲಿ ಬ್ರೆಡ್, ಬಿಸ್ಕತ್ತು, ಕುರ್ಕುರೆ, ಲೇಸ್ ಸೇರಿದಂತೆ ಸಂಸ್ಕರಿತ ಆಹಾರ ಪದಾರ್ಥಗಳು ಹಾಗೂ ಪಾನೀಯಗಳ ಬದಲು ಮನೆಯಲ್ಲಿ ಮಾಡಿದ ತಿನಿಸುಗಳನ್ನು ಹಾಕಿಕೂಡಬೇಕು. ಯಾವಾಗಲೂ ತಾಜಾ ತಿನಿಸುಗಳನ್ನೇ ಡಬ್ಬಿಗೆ ತುಂಬಿಸಿ. ಆಯಾ ಋತುಮಾನದ ಹಣ್ಣುಗಳನ್ನು ಡಬ್ಬಿಗೆ ಹಾಕಿ ಕೊಡುವುದು ಉತ್ತಮ. ಮಕ್ಕಳು ತರಕಾರಿ ಇಷ್ಟ ಪಡುವುದಾದರೆ ಅವರಿಷ್ಟದ ತರಕಾರಿಯನ್ನೂ ವಾರಕ್ಕೆ ಮೂರು ದಿನ ಕೊಡುವುದು ಸೂಕ್ತ.
ಪ್ರತಿದಿನ ದೋಸೆ, ಚಪಾತಿ, ತರಕಾರಿ, ಹಣ್ಣುಗಳನ್ನು ತಿಂದು ಮಕ್ಕಳಿಗೆ ಬೇಸರವಾಗಬಹುದು. ಅದಕ್ಕಾಗಿ ಅದನ್ನು ಭಿನ್ನವಾಗಿ ತಯಾರಿಸಿ ಡಬ್ಬಿಗೆ ಹಾಕಿ. ಚಪಾತಿ, ಬ್ರೆಡ್ ರೋಲ್, ಚಪಾತಿ ಜಾಮ್, ಸ್ಟಫ್ಡ್ ವೆಜಿಟೇಬಲ್ ಪರೋಟ ಹೀಗೆ ಇರುವುದನ್ನೇ ಭಿನ್ನವಾಗಿ, ಆರೋಗ್ಯಕರವಾಗಿ ತಯಾರಿಸಿ ಕೊಡಬಹುದು. ಹಸಿರು ತರಕಾರಿಗಳು, ಬೇಯಿಸಿದ ಧಾನ್ಯಗಳು, ಪನ್ನೀರ್ ಇವುಗಳಿಂದ ವಿಶೇಷ ಖಾದ್ಯ ತಯಾರಿಸಿ ಡಬ್ಬಿಗೆ ಹಾಕಬಹುದು. ಹೀಗೆ ಮಾಡುವುದರಿಂದ ಮಕ್ಕಳಿಗೂ ಕೂಡ ಖುಷಿಯಾಗಿ ಬೇರೆ ಬೇರೆ ತಿಂಡಿ ಅಂತ ಎಣಿಸಿ ಅದನ್ನು ಚೆನ್ನಾಗಿ ತಿಂದು ಬರುತ್ತಾರೆ.
ನೀವು ತಯಾರಿಸುವ ಖಾದ್ಯಗಳಗೆ ಸಾಧ್ಯವಾದಷ್ಟು ತರಕಾರಿ ಬಳಸಿ ತಯಾರಿಸಬೇಕು. ಮೊಳಕೆಕಾಳುಗಳು, ಶೇಂಗಾ, ಕಡಲೆ, ಜೋಳ ಇಂತಹ ಆರೋಗ್ಯಕರ ವಸ್ತುಗಳಿಂದ ತಯಾರಿಸಿದ ತಿನಿಸುಗಳನ್ನು ಡಬ್ಬಿಗೆ ಹಾಕಿದರೆ ಒಳ್ಳೆಯದು. ತರಕಾರಿಗಳಿಂದ ಮಕ್ಕಳಲ್ಲಿ ಶಕ್ತಿಯ ಮಟ್ಟ ಹೆಚ್ಚುವುದು ಮಾತ್ರವಲ್ಲ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ನಿವಾರಣೆಗೂ ಇದು ಸಹಕಾರಿ.
ರಜಾದಿನಗಳಲ್ಲಿ ಮಕ್ಕಳು ಸಿಕ್ಕಿದ್ದನ್ನು ತಿಂದು, ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡುವ ಮೂಲಕ ಹೊಟ್ಟೆಗೆ ಕಡಿಮೆಯಾಗದಂತೆ 2 ತಿಂಗಳು ಕಳೆದಿರುತ್ತಾರೆ. ಆದರೆ ಶಾಲೆಯಲ್ಲಿ ಹಾಗಾಗುವುದಿಲ್ಲ. ಆ ಕಾರಣಕ್ಕೆ ನಡುವೆ ನಡುವೆ ತಿನ್ನಲು ನೆರವಾಗುವಂತೆ 2,3 ಚಿಕ್ಕ ಚಿಕ್ಕ ಡಬ್ಬಿಯನ್ನು ಕಳಿಸಬೇಕು. ಸಾಧ್ಯವಾದರೆ ಆ ಡಬ್ಬಿಗಳಲ್ಲಿ ಬೇರೆ ಬೇರೆ ರೀತಿಯ ತಿನಿಸುಗಳನ್ನು ಹಾಕಿ. ಮೊಳಕೆ ಕಾಳು, ಹಣ್ಣುಗಳ ಸಲಾಡ್, ಡ್ರೈ ಫ್ರೂಟ್ಸ್ ಗಳನ್ನು ನೀಡಬಹುದು. ಇದು ಮಕ್ಕಳಲ್ಲಿ ಆಯಾಸ, ಸುಸ್ತು ಕಡಿಮೆಯಾಗಲು ಸಹಕಾರಿಯಾಗಿದೆ.
ಬೆಲ್ಲ, ರಾಗಿಯಿಂದ ತಯಾರಿಸಿದ ತಿನಿಸುಗಳನ್ನು ನೀಡುವುದು ಇನ್ನೂ ಉತ್ತಮ.
ಮಕ್ಕಳ ಡಬ್ಬಿಗೆ ಡೆಸರ್ಟ್ ಅಥವಾ ಸಿಹಿ ತಿನಿಸುಗಳನ್ನು ಮಾಡುವಾಗ ಸಕ್ಕರೆ ಬದಲು ಬೆಲ್ಲದ ಬಳಸಬಹುದು ಅಥವಾ ಜೇನುತುಪ್ಪ ಬಳಸಿ. ಇದರೊಂದಿಗೆ ಸಾಕಷ್ಟು ಡ್ರೈ ಫ್ರೂಟ್ಸ್ ಗಳನ್ನು ಸೇರಿಸಬೇಕು. ಹೀಗೆ ಕೇಕ್, ಕುಕ್ಕಿಸ್ ತಯಾರಿಸುವಾಗ ಮೈದಾಹಿಟ್ಟಿನ ಬದಲು ರಾಗಿ ಬಳಸಬಹುದಾಗಿದೆ.
ಮಕ್ಕಳು ತಣ್ಣನೆಯ ಆಹಾರ ಸೇವನೆಗೆ ಇಷ್ಟಪಡುವುದಿಲ್ಲ. ಆ ಕಾರಣಕ್ಕೆ ತಿನ್ನುವವರೆಗು ಬಿಸಿ ಇರುವಂತೆ ಹಾಟ್ ಬಾಕ್ಸ್ನಲ್ಲಿ ಆಹಾರ ನೀಡುವುದು ಉತ್ತಮ.
ಹೀಗೆ ಪೋಷಕರಾದ ನಾವು ಮಕ್ಕಳ ಟಿಫಿನ್ ಬಾಕ್ಸ್ ನ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ತೆಗೆದುಕೊಂಡು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುವಂತ ಪದಾರ್ಥಗಳನ್ನ ಅದರಲ್ಲಿ ತುಂಬಿಸಿ, ನೀರನ್ನು ಕೊಡಲು ಮರೆಯದಿರಬೇಕು.