ಬೆಂಗಳೂರು: ಮೇ.10 ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ ಯುವಕ-ಯುವತಿಯರು ಹಾಗೂ ವೃದ್ಧರ ಉತ್ಸಾಹ ಎಲ್ಲರ ಗಮನ ಸೆಳೆಯುವಂತಿತ್ತು.
ಚುನಾವಣಾ ಆಯೋಗದ ಪ್ರಕಾರ 11.71 ಲಕ್ಷ ಜನರು ಮೊದಲ ಬಾರಿಗೆ ಮತ ಚಲಾಯಿಸಲು ಅರ್ಹರಾಗಿದ್ದು, 16,914 ಜನ ಶತಾಯುಷಿಗಳು ಮತ್ತು 12.16 ಲಕ್ಷ ಮಂದಿ 80 ವರ್ಷ ಮೇಲ್ಪಟ್ಟವರು ತಮ್ಮ ಹಕ್ಕು ಚಲಾಯಿಸಲು ಅರ್ಹರಿದ್ದರು.
ಇನ್ನು ಸುಮಾರು 737 ಬೂತ್ ಗಳನ್ನು ಸಿಂಗರಿಸಿ ಹಬ್ಬದ ವಾತಾವರಣ ಸೃಷ್ಟಿ ಮಾಡಲಾಗಿತ್ತು. ಇನ್ನು ಚುನಾವಣಾ ಆಯೋಗ ಮತದಾರರಲ್ಲಿ ಆಸಕ್ತಿ ಹೆಚ್ಚಿಸಲು ವಾರಾಂತ್ಯ ಮತದಾನ ಬದಲಿಗೆ ಬುಧವಾರ ಮತದಾನ ಪ್ರಕ್ರಿಯೆ ಆಯ್ಕೆ ಮಾಡಿದೆ.
ಸೋಮವಾರ ಮತದಾನ ಇದ್ದಿದ್ದರೆ, ಶನಿವಾರ, ಭಾನುವಾರ ಜೊತೆಗೆ ಮತ್ತೊಂದು ದಿನ ರಜೆ ಪಡೆದು ಎಲ್ಲರು ಟ್ರಿಪ್ ಪ್ಲಾನ್ ಮಾಡ್ತಿದ್ರು. ಇನ್ನು ಮಂಗಳವಾದ್ರು ಒಂದು ವೀಕ್ ಆಫ್ ಮೂಲಕ ಮತದಾನ ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಬುಧವಾರ ಹೀಗೆ ಮಾಡೋದು ಕಷ್ಟ ಹಾಗಾಗಿ ಈ ಪ್ಲಾನ್ ಮಾಡಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇನ್ನು ಹೆಚ್ಚಿನ ಜನರನ್ನು ಆಕರ್ಷಿಸಲು ಪಿಂಕ್ ಬೂತ್ ಗಳಲ್ಲಿಯೂ ಮತದಾನ ಪ್ರಕ್ರಿಯೆ ನಡೆಯುತ್ತಿತ್ತು. ಚುನಾವಣಾ ಆಯೋಗದ ಪ್ರಕಾರ 996 ಪಿಂಕ್ ಬೂತ್ ಗಳು, 239 ಬೂತ್ ಗಳನ್ನು ವಿಶೇಷಚೇತನರು ಹಾಗೂ 286 ಬೂತ್ ಗಳನ್ನು ಯುವಕರು ನಿರ್ವಹಿಸಿರುತ್ತಾರೆ ಎಂದಿದೆ. ಇನ್ನು ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆಯಿಂದ ಮತ ಚಲಾಯಿಸುವ ಆಯ್ಕೆಯನ್ನು ನೀಡಲಾಗಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.