ಲಕ್ನೋ : ಮಕ್ಕಳಾಗಲಿಲ್ಲವೆಂದು ಮಹಿಳೆಯೊಬ್ಬರು ತನ್ನ ಸೊಸೆಯನ್ನು ಹತ್ಯೆಗೈದ ಅಮಾನವೀಯ ಘಟನೆ ಉತ್ತರ ಪ್ರದೇಶದ ಕಡಧಾಮ್ ಎಂಬಲ್ಲಿ ನಡೆದಿದೆ.
ಕೊಲೆಗೀಡಾದ ಯುವತಿಯನ್ನು ಸಾಲಿ ಬೇಗಂ(33) ಎಂದು ಗುರುತಿಸಲಾಗಿದೆ. ಇವರಿಗೆ ಮದುವೆಯಾಗಿ 15 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಈಕೆಯ ಅತ್ತೆ, ಮಗುವಾಗದ ಕಾರಣ ಅವಳ ಜೊತೆ ಜಗಳವಾಡಿ ವಿಷಹಾಕಿ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಪೊಲೀಸರಿಗೆ ದೂರು ನೀಡಿದ ಮೃತಳ ಸಹೋದರ ಗೌಸ್ ಮುಹಮ್ಮದ್, ಬೇಗಂ 15 ವರ್ಷಗಳ ಹಿಂದೆ ಫಿರೋಜ್ ಅಹ್ಮದ್ ಎಂಬಾತನೊಂದಿಗೆ ಮದುವೆಯಾಗಿದ್ದಳು. ಅವರಿಗೆ ಮಕ್ಕಳಾಗಿರಲಿಲ್ಲ. ಇದೇ ಕಾರಣಕ್ಕೆ ಅತ್ತೆ ಆಗಾಗ ಅವಳೊಂದಿಗೆ ಜಗಳವಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ತನಗೆ ಅತ್ತೆ ವಿಷ ಹಾಕಿರುವ ಬಗ್ಗೆ ಗೌಸ್ ಮುಹಮ್ಮದ್ ಬಳಿ ಸಹೋದರಿ ಸಾಲಿ ಬೇಗಂ ಕರೆ ಮಾಡಿ ತಿಳಿಸಿದ್ದು, ಸ್ಥಳಕ್ಕೆ ತೆರಳಿ ನೋಡಿದಾಗ ಆಕೆ ಗಂಭೀರಾವಸ್ಥೆಯಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪತಿ ಸೇರಿದಂತೆ ಕುಟುಂಬದ ನಾಲ್ವರ ವಿರುದ್ಧ ಕಡಧಾಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.