ಕೆಲ ತಿಂಗಳಿಂದ ಟ್ವಿಟರ್, ಫೇಸ್ ಬುಕ್ ತಮ್ಮ ಬಳಕೆದಾರರ ಖಾತೆಗಳಿಗೆ ಅಧಿಕೃತ ಬ್ಲೂಟಿಕ್ ನೀಡುತ್ತಿರುವ ಬಗ್ಗೆ ಭಾರಿ ಸುದ್ದಿ ಹರಿದಾಡುತ್ತಿತ್ತು. ಈ ನಡುವೆ ಇದೀಗ ಗೂಗಲ್ ಕೂಡ ತನ್ನ ಬಳಕೆದಾರರಿಗೆ ಬ್ಲೂಟಿಕ್ ನೀಡಲು ಮುಂದಾಗಿದೆ.
ಹೌದು, ಟ್ವಿಟರ್, ಫೇಸ್ಬುಕ್, ಮೆಟಾ ಈಗಾಗಲೇ ಚಂದಾದಾರಿಕೆ ಆರಂಭಿಸಿವೆ. ಗೂಗಲ್ ತನ್ನ ಜಿಮೇಲ್ ಬಳಕೆದಾರರ ಅಧಿಕೃತ ಖಾತೆಗಳಿಗೆ ಬ್ಲೂಟಿಕ್ ಜಾರಿಗೊಳಿಸುತ್ತಿದ್ದು, ಮೊದಲ ಹಂತದಲ್ಲಿ ಉಚಿತವಾಗಿ ನೀಡಲು ಗೂಗಲ್ ಮುಂದಾಗಿದೆ.
ಜಿಮೇಲ್ ಬಳಕೆದಾರರಿಗೆ ಗೂಗಲ್ BIMI (ಬ್ರಾಂಡ್ ಇಂಡಿಕೇಟರ್ ಫಾರ್ ಮೆಸೇಜ್ ಐಡೆಂಟಿಫಿಕೇಶನ್) ನೀಡುತ್ತಿದೆ. ಹೆಚ್ಚಾಗುತ್ತಿರುವ ಸ್ಪಾಮ್ ಹಾಗೂ ಫೇಕ್ ಮೇಲ್ ಗಳಿಂದ ದೂರವಿರಲು ಜಿಮೇಲ್ ಈ ಬ್ಲೂಟಿಕ್ ಆರಂಭಿಸಿದೆ. BIMI ಪ್ಲಾಟ್ ಫಾರ್ಮ್ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ.
ಎಲ್ಲಾ ಗೂಗಲ್ ವರ್ಕ್ ಸ್ಪೇಸ್ ಗ್ರಾಹಕರು, ಜಿಸ್ಯೂಟ್ ಬೇಸಿಕ್, ವ್ಯಾಪರ ಗ್ರಾಹಕರು ತಮ್ಮ ಗೂಗಲ್ ಖಾತೆಗೆ ಬ್ಲೂಟಿಕ್ ಪಡೆಯಬಹುದಾಗಿದೆ.
ಗೂಗಲ್ BIMI ಫೀಚರ್ಸ್ 2021ರಲ್ಲಿ ಗೂಗಲ್ ಪರಿಚಯಿಸಿದೆ. ಆದರೆ ಕಳೆದೆರಡು ವರ್ಷದಿಂದ ಟೆಸ್ಟಿಂಗ್ ನಡೆಸಿದ ಗೂಗಲ್ ಇದೀಗ ಬಳಕೆದಾರರಿಗೆ ನೀಡುತ್ತಿದೆ. BIMI ಫೀಚರ್ ಮೂಲಕ ಬಳಕೆದಾರರು ಸುರಕ್ಷಿತ ಹಾಗೂ ಬ್ರಾಂಡ್ ಮೇಲೆ ಹೆಚ್ಚು ನಂಬಿಕೆ ಬೆಳೆಸಿಕೊಳ್ಳಲಿದ್ದಾರೆ ಎಂದು ಗೂಗಲ್ ತಿಳಿಸಿದೆ. ಮೇ.2 ರಿಂದ ಗೂಗಲ್ ಬ್ಲೂಟಿಕ್ ಸೇವೆ ಪ್ರಾರಂಭವಾಗಿದೆ.