ಇಂದು ದೇಶ ಹಾಗೂ ರಾಜ್ಯದಲ್ಲಿ ರಾಜಕೀಯ, ಕ್ರೀಡೆ, ವಿಮಾನಯಾನ ಸೇವೆಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು, ಎಲ್ಲೆಲ್ಲಿ ಏನೇನು ನಡೆದಿದೆ ಎಂದು ಒಂದೇ ಸುದ್ದಿಯಲ್ಲಿ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜಯಂಟ್ಸ್ ನಡುವೆ ನಡೆದ ಪಂದ್ಯದ ಬಳಿಕ ಮೈದಾನದಲ್ಲೇ ಜಗಳ ಮಾಡಿಕೊಂಡ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಗೆ ಐಪಿಎಲ್ ಭಾರೀ ದಂಡವನ್ನು ವಿಧಿಸಿದೆ.
ಇಬ್ಬರು ದಿಗ್ಗಜರಿಗೂ ಪಂದ್ಯದ ಸಂಭಾವನೆಯಲ್ಲಿ ಶೇ.100ರಷ್ಟು ದಂಡವನ್ನು ವಿಧಿಸಲಾಗಿದೆ. ಇವರ ಜೊತೆಗೆ ಲಖನೌನ ವೇಗಿ ನವೀನ್ ಉಲ್ ಹಕ್ ಅವರಿಗೂ ಪಂದ್ಯದ ಸಂಭಾವನೆಯಲ್ಲಿ ಶೇ. 50 ರಷ್ಟು ದಂಡವನ್ನು ವಿಧಿಸಲಾಗಿದೆ. ಸೋಮವಾರ ನಡೆದ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿ ಬಿ 18 ರನ್ ಗಳಿಂದ ಗೆಲುವು ಸಾಧಿಸಿತ್ತು. ಕೋಡ್ ಆಫ್ ಕಂಡಕ್ಟ್ ಎರಡನೇ ಹಂತದ ಅಪರಾಧವೆಸಗಿದ ಹಿನ್ನೆಲೆ ಕೊಹ್ಲಿ ಹಾಗೂ ಗಂಭೀರ್ ಗೆ ದಂಡ ವಿಧಿಸಲಾಗಿದೆ.
IPL 2023 | Lucknow Super Giants’ mentor Gautam Gambhir and Royal Challengers Bangalore batter Virat Kohli have been fined 100% of their match fee for breaching the IPL Code of Conduct during a match at Shri Atal Bihari Vajpayee Ekana Cricket Stadium, Lucknow, yesterday.
Both… pic.twitter.com/arWpJayIbS
— ANI (@ANI) May 2, 2023
ಇನ್ನು ರಾಜ್ಯ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ನಡುವೆ ರಾಜ್ಯ ರಾಜಕೀಯ ವಲಯದಲ್ಲಿ ಎಲ್ಲಾ ಪಾರ್ಟಿಗಳು ರಣತಂತ್ರ ರೂಪಿಸುತ್ತಿವೆ. ನಿನ್ನೆ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರಾಜ್ಯದ ಜನತೆಗೆ ಸಾಲು ಸಾಲು ಕೊಡುಗೆಗಳನ್ನು ನೀಡುವ ಬಗ್ಗೆ ತಿಳಿಸಿತ್ತು. ಇದರ ಬೆನ್ನಲ್ಲೆ ಇಂದು ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಘೋಷಣೆ ಮಾಡಿದ್ದು, ಈ ಬಗ್ಗೆ ಬಿಜೆಪಿ ನಾಯಕರು, ಹಿಂದೂ ಸಂಘಟನೆಯ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ತಮ್ಮ ವಾಟ್ಸ್ ಆಪ್, ಫೇಸ್ ಬುಕ್ ನ ಡಿಪಿ, ಸ್ಟೇಟಸ್ ಗಳಲ್ಲಿ ನಾನೊಬ್ಬ ಭಜರಂಗಿ ಎಂದು ಘೋಷಿಸಿಕೊಳ್ಳುತ್ತಿದ್ದಾರೆ.
ಗೋ ಫರ್ಸ್ಟ್ ಏರ್ ಲೈನ್ಸ್ ನ ಎಲ್ಲಾ ವಿಮಾನಗಳನ್ನು ಮೇ 3 ಮತ್ತು 4ರಂದು ರದ್ದುಗೊಳ್ಳಲಿವೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ದೆಹಲಿಯ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಮುಂದೆ ಸ್ವಯಂ ಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಳಿಗಾಗಿ ಅರ್ಜಿ ಸಲ್ಲಿಕೆ ಮಾಡಿದೆ. ಏರ್ ಲೈನ್ಸ್ ನ ಮುಖ್ಯಸ್ಥ ಕೌಶಿಕ್ ಖೋನಾ, ಪ್ರ್ಯಾಟ್ ಮತ್ತು ವಿಟ್ನಿ ಇಂಜಿನ್ ಗಳನ್ನು ಪೂರೈಸದ ಹಿನ್ನೆಲೆ ತನ್ನ ಅರ್ಧಕ್ಕಿಂತ ಹೆಚ್ಚು 28 ವಿಮಾನಗಳನ್ನು ರದ್ದು ಮಾಡಿದೆ ಎಂದು ತಿಳಿಸಿದ್ದಾರೆ.
ಹಿಮಾಲಯದಲ್ಲಿ ಭಾರೀ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂದಿನ 2-3 ದಿನಗಳವರೆಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕೇದಾರನಾಥಕ್ಕೆ ಭೇಟಿ ನೀಡಲಿರುವ ಯಾತ್ರಾರ್ಥಿಗಳು ತಾವು ತಂಗಿರುವ ಸ್ಥಳದಲ್ಲಿಯೇ ಸುರಕ್ಷಿತವಾಗಿ ಇರುವಂತೆ ಮನವಿ ಮಾಡಲಾಗಿದೆ ಎಂದು ರುದ್ರಪ್ರಯಾಗದ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿರುವ ಟೆಸ್ಟ್ ತಂಡಗಳ ವಾರ್ಷಿಕ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ಪ್ರಥಮ ಸ್ಥಾನದಲ್ಲಿದೆ. ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಒಟ್ಟು 121 ಅಂಕಗಳನ್ನು ಪಡೆದುಕೊಂಡಿದ್ದು, ಆಸ್ಟ್ರೇಲಿಯಾ 116 ಹಾಗೂ ಇಂಗ್ಲೆಂಡ್ 114 ಅಂಕಗಳನ್ನು ಪಡೆದುಕೊಂಡಿದೆ. ನಂತರದ ಸ್ಥಾನಗಳಲ್ಲಿ ದಕ್ಷಿಣ ಆಫ್ರಿಕಾ (104), ನ್ಯೂಜಿಲೆಂಡ್ (100), ಪಾಕಿಸ್ತಾನ (86), ಶ್ರೀಲಂಕಾ (84), ವೆಸ್ಟ್ ಇಂಡೀಸ್ (76), ಬಾಂಗ್ಲಾದೇಶ (45), ಜಿಂಬಾಬ್ವೆ (32) ಸ್ಥಾನದಲ್ಲಿದೆ.