ಸುಮ ತಾನು ಗರ್ಭಿಣಿಯಾಗಿದ್ದೇನೆ ಎಂದು ತಿಳಿದ ದಿನದಿಂದಲೂ ಆಕೆ ವೈದ್ಯರು ಹೇಳಿದ ಎಲ್ಲ ಕ್ರಮಗಳನ್ನು ಪಾಲಿಸುತ್ತಿದ್ದಾಳೆ. ನಾರ್ಮಲ್(ಸಹಜ) ಡೆಲಿವೆರಿಗಾಗಿ ಯೋಗದ ಹಲವು ಮುದ್ರೆಗಳು, ವಾಕಿಂಗ್, ವ್ಯಾಯಾಮ, ಮನೆಕೆಲಸ ಹೀಗೆ ಡಾಕ್ಟರ್ನ ಮಾರ್ಗದರ್ಶನದಂತೆ ನಡೆದುಕೊಂಡರು ಕೂಡ ಕಡೆಗೆ ಅವಳಿಗೆ ಸಿಜೆರಿಯನ್ ಮಾಡಬೇಕಾಯಿತು.
ಸುಮ ಅಷ್ಟೇ ಅಲ್ಲ ಪ್ರತಿ ಗರ್ಭಿಣಿಯು ತಾನು ಬಸುರಿ ಎಂದು ಗೊತ್ತಾದ ಪ್ರಥಮ ದಿನದಿಂದ ಮನಸ್ಸಲ್ಲಿ ಬೇಡುವುದೇನೆಂದರೆ ಮಗು ಹೆಣ್ಣಾಗಲಿ ಗಂಡಾಗಲಿ ನಾರ್ಮಲ್(ಸಹಜ) ಡೆಲಿವೆರಿ ಆಗಲಿ ಎಂದು ಆದರೆ ಈಗ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-2021 ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಸಿ-ಸೆಕ್ಷನ್ ಹೆರಿಗೆಗಳ ಮೂಲಕ ಆದ ಜನನಗಳು ಶೇ 4.3ರಷ್ಟು ಹೆಚ್ಚಾಗಿದೆ. ಅಂದರೆ ಈ ಮೊದಲು ಶೇ 17.2 ರಷ್ಟಿದ್ದ ಹೆರಿಗೆಗಳು ಶೇ 21.5ರಷ್ಟು ಹೆಚ್ಚಾಗಿದೆ. 2015-16ರಲ್ಲಿ ಖಾಸಗಿ ಆರೋಗ್ಯ ಕೇಂದ್ರಗಳಲ್ಲೂ ಸಿಸೇರಿಯನ್ ಹೆರಿಗೆಗಳು ಶೇ 40.9 ರಿಂದ ಶೇ 47.4 ಕ್ಕೆ ಏರಿಕೆಯಾಗಿದೆ.
ಹೆಚ್ಚುತ್ತಿರುವ ಸಿಸೇರಿಯನ್ ಹೆರಿಗೆ ಪ್ರಮಾಣಗಳಿಗೆ ಬಹಳಷ್ಟು ಅಂಶಗಳು ಕಾರಣ ಆಗುತ್ತವೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಹೆರಿಗೆ ಕೋಣೆಯಲ್ಲಿ ನಿರಂತರ ನಿಗಾ ವಹಿಸುವುದರಿಂದ ಸಿಸೇರಿಯನ್ ಸಾಧ್ಯತೆ ಹೆಚ್ಚುತ್ತದೆ.
* ನೋವು ನಿವಾರಣೆ ಮತ್ತು ಆಂಟಿಬಯೋಟಿಕ್ಸ್ ವಿಚಾರದಲ್ಲಿ ಸಿ-ಸೆಕ್ಷನ್ ಸುರಕ್ಷಿತ ಆಯ್ಕೆಯಾಗಿದೆ.
* ಮಹಿಳೆಯರು ತಡವಾಗಿ ಮದುವೆಯಾಗುವುದು ಅಥವಾ ಗರ್ಭಧಾರಣೆಯನ್ನು ವಿಳಂಬ ಮಾಡುವುದರಿಂದ 35 ವರ್ಷಗಳನ್ನು ತಲುಪಿದ ನಂತರ ಇದು ಸಿಸೇರಿಯನ್ ಹೆರಿಗೆಗೆ ಕಾರಣವಾಗುತ್ತದೆ.
* ಸ್ಥೂಲಕಾಯತೆಯು ಮತ್ತೊಂದು ಕಾರಣ: 25 ಕ್ಕಿಂತ ಹೆಚ್ಚಿನ ಬಿಎಂಐ ಹೆರಿಗೆ ತೊಂದರೆಗಳನ್ನು ಹೆಚ್ಚಿಸಬಹುದು.
* ಕೆಲವು ಮಹಿಳೆಯರು ಹೆರಿಗೆ ನೋವಿನ ಭಯದಿಂದ ಸಿ-ಸೆಕ್ಷನ್ ಆಯ್ಕೆ ಮಾಡಿಕೊಳ್ಳುತ್ತಾರೆ.
ನಾರ್ಮಲ್ ಡೆಲಿವರಿ ತಾಯಿ ಮತ್ತು ಮಗುವಿಗೆ ಎದುರಾಗುವ ಸಾಕಷ್ಟು ಅಪಾಯಗಳು ಮತ್ತು ತೊಡಕುಗಳನ್ನು ಕಡಿಮೆ ಮಾಡುತ್ತದೆ. ಹೀಗಾಗಿ ನಾರ್ಮಲ್ ಡೆಲಿವರಿ ಸಾಧ್ಯತೆಯನ್ನು ಹೆಚ್ಚಿಸುವ ವಿಧಾನಗಳು ಯಾವುವು ಎಂಬ ಬಗ್ಗೆ ವೈದ್ಯರು ಹೀಗೆ ವಿವರಿಸುತ್ತಾರೆ.
ನಿಯಮಿತವಾಗಿ ವ್ಯಾಯಾಮ ಮಾಡಿ:
ನಾರ್ಮಲ್ ಡೆಲಿವರಿಯಾಗಲು ಎನರ್ಜಿ ಮತ್ತು ಸ್ಟೆಮಿನಾ ತುಂಬಾ ಮುಖ್ಯ. ಹೀಗಾಗಿ, ಗರ್ಭಧಾರಣೆಯ ಒಂಬತ್ತು ತಿಂಗಳನ್ನು ನಾರ್ಮಲ್ ಹೆರಿಗೆಯ ಮ್ಯಾರಥಾನ್ಗೆ ಪೂರ್ವಸಿದ್ಧತಾ ಹಂತವಾಗಿ ಪರಿಗಣಿಸಿ. ಪ್ರತಿದಿನ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಹೆರಿಗೆಯ ಸಮಯದಲ್ಲಿ ಮಗುವನ್ನು ಹೊರಗೆ ತಳ್ಳಲು ಕೆಲವು ಸ್ಟ್ರೆಚಿಂಗ್ ಕೂಡ ಅಷ್ಟೇ ಮುಖ್ಯ. ಆದರೆ, ವೈದ್ಯಕೀಯ ಸಮಸ್ಯೆಗಳು ಇದ್ದ ಮಹಿಳೆಯರಿಗೆ ಮಾತ್ರ ವ್ಯಾಯಾಮ ಮಾಡಲು ಅನುಮತಿ ನೀಡುವುದಿಲ್ಲ. ಆದ್ದರಿಂದ, ವ್ಯಾಯಾಮ ಮಾಡುವ ಮೊದಲು ನಿಮ್ಮ ಪ್ರಸೂತಿ ವೈದ್ಯರ ಸಲಹೆ ಪಡೆಯಿರಿ.
ಸ್ಕ್ವಾಟಿಂಗ್ ಅಭ್ಯಾಸ ಮಾಡಿ:
ಸಾಮಾನ್ಯವಾಗಿ ಚಲನಚಿತ್ರಗಳು ಮತ್ತು ಕಿರುತೆರೆ ಸರಣಿಗಳು ಹೆರಿಗೆಗಾಗಿ ಮಹಿಳೆ ಬೆಡ್ ಮೇಲೆ ಮಲಗಿರುವ ದೃಶ್ಯವನ್ನು ತೋರಿಸುತ್ತವೆ. ಆದರೆ, ಸ್ಕ್ವಾಟಿಂಗ್ ಉತ್ತಮ ಆಯ್ಕೆಯಾಗಿದೆ. ಏಕೆಂದರೆ, ನೀವು ಸ್ಕ್ವಾಟ್ ಮಾಡುವಾಗ ನಿಮ್ಮ ಪೆಲ್ವಿಸ್ ತೆರೆದುಕೊಳ್ಳುತ್ತದೆ ಮತ್ತು ನಿಮ್ಮ ಮಗುವಿಗೆ ಸುಲಭವಾಗಿ ಜನ್ಮ ನೀಡುವ ಸ್ಥಿತಿಗೆ ತಲುಪಲು ಸಹಾಯ ಮಾಡುತ್ತದೆ.
ಸಹಜ ಹೆರಿಗೆ ತರಗತಿಗಳು:
ಜನಪ್ರಿಯ ಅಮೆರಿಕನ್ ದೂರದರ್ಶನ ಧಾರಾವಾಹಿ ಫ್ರೆಂಡ್ಸ್ನಲ್ಲಿ, ಮುಖ್ಯ ಪಾತ್ರದಾರ ರಾಸ್ ಟೇಲರ್ ತನ್ನ ಮಾಜಿ ಹೆಂಡತಿಯನ್ನು ಹೆರಿಗೆ ಕುರಿತಾದ ಲ್ಯಾಮೇಜ್ (ಮಗು ಜನನದ ಬಗ್ಗೆ ಶಿಕ್ಷಣ) ತರಗತಿಗಳಿಗೆ ಕರೆದೊಯ್ಯುತ್ತಾನೆ. ಅದೇ ರೀತಿ, ಹೆರಿಗೆಯ ಕುರಿತಾದ ತರಗತಿಗಳಿಗೆ ಹೋಗುವುದನ್ನು ಪರಿಗಣಿಸಬೇಕು. ಪ್ರಸವಪೂರ್ವ ಶಿಕ್ಷಣ ತರಗತಿಗಳು ಪ್ರಸವ ವೇದನೆ ಮತ್ತು ಜನನ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕಲಿಸುತ್ತವೆ. ಸಂಕೋಚನಗಳನ್ನು ಹೇಗೆ ನಿರ್ವಹಿಸುವುದು, ಉಸಿರಾಟ, ಸ್ವಯಂ-ಸಂಮೋಹನ ಮತ್ತು ವಿಶ್ರಾಂತಿಯಂತಹ ಸರಳ ತಂತ್ರಗಳನ್ನು ಕಲಿಯಲು ನೆರವಾಗುತ್ತದೆ. ಇದು ಹೆರಿಗೆ ಸಮಯದಲ್ಲಿ ನೆರವಾಗುತ್ತದೆ.
ಪ್ರಸವಪೂರ್ವ ಪೋಷಣೆ ಮುಖ್ಯ:
ಆರೋಗ್ಯವಂತ ತಾಯಿ ಎಂದರೆ ಆರೋಗ್ಯವಂತ ಮಗು. ಸಾಕಷ್ಟು ಪ್ರೋಟೀನ್ ಮತ್ತು ಶಕ್ತಿಯನ್ನು ಒದಗಿಸುವ ಆಹಾರವನ್ನು ಸೇವಿಸುವ ಮೂಲಕ ಆಕೆ ತನ್ನ ಗರ್ಭಾಶಯವನ್ನು ಬಲಿಷ್ಠವಾಗಿ ಮತ್ತು ಹೆರಿಗೆಗೆ ಸಿದ್ಧವಾಗಿರಿಸಿಕೊಳ್ಳಬೇಕು. ಆ ಒಂಬತ್ತು ತಿಂಗಳಲ್ಲಿ ಮಗುವಿಗೆ ಮತ್ತು ತಾಯಿಗೆ ಹೆಚ್ಚುವರಿ ಕಾಳಜಿ ಏಕೆ ಬೇಕು ಎಂಬುದನ್ನು ಅರಿತು, ಗರ್ಭಾವಸ್ಥೆಯಲ್ಲಿ ಅಗತ್ಯವಾದ ಪೋಷಣೆ ಮಾಡಿಕೊಳ್ಳುವುದನ್ನು ಕಲಿಯಬೇಕು.