ಅವತ್ತು ಸಂಜೆ ಮನಸ್ಸೇಕೋ ಬೇಜಾರಿಗೆ ಜಾರಿ, ಖುಷಿಗೆ ಹಾತೊರೆಯುತ್ತಿತ್ತು. ಮನಸೆಳೆವ ಮನೆಗೆ ಶುಭ್ರತೆಯೇ ಶೋಭೆಯಲ್ಲವೇ? ಹೀಗಾಗಿ ಮನೆಯ ಅಟ್ಟ ಹಾಗೂ ಅಲಮಾರಿನ ತುಂಬಾ ಅಡರಿ ಕಿರಿಕಿರಿ ಉಂಟು ಮಾಡ್ತಿದ್ದ ಧೂಳಿಗೆ ಮೋಕ್ಷ ಕಾಣಿಸಲು ಕೈಯಲ್ಲೊಂದು ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಮುಂದಾದೆ. ಹೀಗೆ ಕೆಲಸ ಮಾಡ್ತಿದ್ದಾಗಲೇ ಕೆಲ ಹೊತ್ತಿನ ನಂತರ ತುಂಬಾ ಹಳೇಯ ಮಾಸಪತ್ರಿಕೆಯೊಂದು ಕೈಗೆ ಸಿಕ್ತು. ಬಣ್ಣ ಎಲ್ಲಾ ಮಾಸಿದ್ರು ಅದರ ಮೇಲೆ ಮುಖಪುಟದ ಚಿತ್ರ ಸ್ಪಷ್ಟವಾಗಿ ಕಾಣಿಸುತ್ತಿತ್ತು. ನನ್ನ ಅನುಮತಿಗೂ ಕಾಯದೆ ಮುಂಬೆರಳು ಪುಟವನ್ನು ಮೆಲ್ಲಗೆ ತಿರುವಿಹಾಕಿತು. ಆಗ ಕಂಡ ಕೆಂಪು ಬಣ್ಣದ ಪಾಸ್ ಮಾರ್ಕ್ ನನ್ನ ಬದುಕಿನ ಹದಿನೈದು ವರ್ಷಗಳ ಹಿಂದಿನ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತು. ಅರೇ ಆಗ ಈ ರೀತಿ ಆಟವಾಡಿದ್ದು ನಾನೇನಾ? ಅನ್ನುವಷ್ಟು ಆಶ್ಚರ್ಯ ಒಮ್ಮೆಲೆ ಉಂಟಾಗಿತ್ತು. ಅದು ನಾವು ಹೈಸ್ಕೂಲ್ ಕಲಿಯುವಾಗ ನನ್ನೊಳಗೊಂದು ಉತ್ತಮ ಅನುಭವ ಕಟ್ಟಿಕೊಟ್ಟ ಶನಿವಾರದ ವೀಕೆಂಡ್ ಟೀಚರ್ ಕಥೆ.
ಆಗ ನಾನಿನ್ನು ಕನ್ನಡ ಶಾಲೆಯಲ್ಲಿ ಎರಡೋ, ಮೂರೋ ತರಗತಿಯಲ್ಲಿ ಓದುತ್ತಿದ್ದ ನೆನಪು. ಶನಿವಾರ ಮತ್ತು ಭಾನುವಾರ ಬಂತೆಂದರೆ ಎಲ್ಲರಂತೆ ನನಗೂ ಅದೆಂತದೋ ಸಂತಸ. ಶನಿವಾರ ಮಧ್ಯಾಹ್ನವೇ ಶಾಲೆ ಬಿಡುತ್ತಿದ್ದರಿಂದ, ಬೇಗ ಮನೆಗೆ ಬಂದು ಊಟ ಮುಗಿಸಿ ಆಟಕ್ಕೆ ತಯಾರಾಗ್ತಿದ್ದೆ. ಅದೂ ನಾನೊಬ್ಬಳೇ. ಅಮ್ಮನ ಯಾವುದೋ ಒಂದು ಹಳೆಯ ಸೀರೆಯನ್ನು ಏರುಪೇರಾಗಿ ನಾನೇ ಸುತ್ತಿಕೊಂಡು, ಕೈಯಲ್ಲೊಂದು ಕೋಲು ಹಿಡಿದು, ಕುರ್ಚಿ ಮೇಲೆ ಕುಳಿತು ಪಕ್ಕದಲ್ಲಿ ಕೆಲವು ಮಾಸಪತ್ರಿಕೆಗಳನ್ನಿಟ್ಟುಕೊಂಡು ಆಟ ಶುರು ಮಾಡ್ತಿದ್ದೆ. ಆ ಆಟಕ್ಕೆ ಆಗ ನಾನೇ ಇಟ್ಟ ಹೆಸರು ಟೀಚರ್ ಆಟ. ನನ್ನ ಬಹುತೇಕ ಸಹಪಾಠಿಗಳು ಆಗ ಕುಂಟಾಬಿಲ್ಲೆ, ಮರಕೋತಿ, ಅಂತಾ ನಾನಾ ನಮೂನಿ ಆಟದಲ್ಲಿ ಕಳೆದು ಹೋದ್ರೆ ನಾನು ಹೀಗೆ ನನ್ನದೇ ಲೋಕದಲ್ಲಿ ಮುಳುಗಿರ್ತಿದ್ದೆ. ಅಷ್ಟಕ್ಕೂ ಈ ಆಟದಲ್ಲಿ ಶಾಲೆಯಲ್ಲಿನ ನಮ್ಮ ಶಿಕ್ಷಕರ ಭಾವ-ಭಂಗಿಗಳನ್ನು ಗಮನಿಸಿ, ಮನೇಲಿ ಅದನ್ನೇ ಯಥಾವತ್ತು ಅನುಕರಣೆ ಮಾಡುತ್ತಿದ್ದೆ. ಅವರು ಪಾಠ ಹೇಳುವ ಶೈಲಿಯನ್ನು ನನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ, ನಡು ನಡುವೆ ಗೆಳತಿಯರ ಮಧ್ಯೆ ಅದನ್ನ ಪ್ರದರ್ಶಿಸಿ ಎಲ್ಲರ ಅಚ್ಚರಿಗೂ ಕಾರಣಳಾಗ್ತಿದ್ದೆ. ನಾವು ತಪ್ಪು ಮಾಡಿದಾಗ ದಂಡಿಸಿದ ಶಿಕ್ಷಕರ ಶೈಲಿಯನ್ನೇ, ನಾನೂ ನೆಲದ ಮೇಲೆ ಮಕ್ಕಳು ಕೂತಿದ್ದಾರೆ ಎಂದು ಭಾವಿಸಿ ಒಂದು ಬೆತ್ತದಿಂದ ಖಾಲಿ ನೆಲಕ್ಕೆ ಬಡಿಯುತ್ತಿದ್ದೆ . ಇನ್ನು ಅಪ್ಪ ಪ್ರತಿ ತಿಂಗಳು ತರಿಸುವ ಮಾಸಪತ್ರಿಕೆಗಳೇ ನೋಟಬುಕ್ ಎಂದು ಅರ್ಥೈಸಿಕೊಂಡು ಅದರ ಮೇಲೆ ಪೆನ್ನಿಂದ ಪಾಸ್ ಎಂದು ಹಾಕುತ್ತಿದ್ದೆ. ಆದರೆ ಈ ಆಟದಲ್ಲಿ ಪಾಠ ಮಾಡುವ ಶಿಕ್ಷಕರ ಶೈಲಿಯನ್ನೇ ಅನುಕರಿಸಿ ದಿನಾ ಪತ್ರಿಕೆಗಳ ಸುದ್ದಿಗಳನ್ನೇ ಪಾಠದಂತೆ ಹೆಚ್ಚಾಗಿ ವಾಚಿಸ್ತಿದ್ದರಿಂದ ಆಗ ಒಂದು ಬಗೆಯ ಮಾತನಾಡುವ ಧಾಟಿ ರೂಢಿಯಾಯ್ತು. ಆಗ ಈ ಆಟದಿಂದ ನನಗೆ ಬರೀ ಮನರಂಜನೆ ಸಿಗುವುದಷ್ಟೇ ಅಲ್ಲ ಅದೆಂತಾದೋ ಖುಷಿ ಕೂಡ ಸಿಗ್ತಿತ್ತು. ಬರಬರುತ್ತ ಗೀಳಾದ ಈ ಆಟ ನಂತರ ಹೈಸ್ಕೂಲು ಹಾಗೂ ಪಿಯುಸಿಯ ದಿನಗಳಲ್ಲಿನ ಕೆಲವು ಸಮಾರಂಭಗಳ ನಿರೂಪಣೆಯನ್ನು ಚೆನ್ನಾಗಿ ಮಾಡಲು ಕಾರಣವಾಗಿತ್ತು.
ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿನ ಸ್ಟೇಜ್ ಫಿಯರ್ ಎಂಬ ಹೆದರಿಕೆಯನ್ನು ನನ್ನಿಂದ ದೂರ ಮಾಡಲು ಟೀಚರ್ ಆಟದ ಕೊಡುಗೆ ದೊಡ್ಡದು. ಆ ಆಟದ ಪರಿಣಾಮ ಭಾಷಣ, ಅದರ ಪರಿಣಾಮದಿಂದಾಗಿ ಇಂದು ನಾನು ನಿರರ್ಗಳವಾಗಿ ಎಂಥಾ ವೇದಿಕೆ ಮೇಲೆ ನಿಂತು ಮಾತನಾಡುವ ಆತ್ಮವಿಶ್ವಾಸವನ್ನು ವೃದ್ಧಿಸಿದೆ. ಆದರೆ ಆಗಿನ ಆ ಎಲ್ಲಾ ಮಾಸಪತ್ರಿಕೆಗಳು ರದ್ದಿ ಸೇರಿದ್ದವು. ಇದೊಂದು ಹೇಗೋ ಕುರುಹು ಎಂಬಂತೆ ಉಳಿದುಕೊಂಡು ನೆನಪಿನ ಅಂಗಳಕ್ಕೆ ನನ್ನನ್ನು ಜಾರಿಸಿತ್ತು. ಜೊತೆಗೆ ಕೆಲ ದಿನಗಳ ಹಿಂದೆ ನಿನ್ನ ನಿರೂಪಣೆ ಚೆನ್ನಾಗಿದೆ ಅದನ್ನೇ ರೂಢಿಸಿಕೋ ಎಂದ ಪ್ರಿನ್ಸಿಪಾಲರ ಮೆಚ್ಚುಗೆಗೂ ಅದೇ ಟೀಚರ್ ಆಟ ಕಾರಣ ಎಂಬುದನ್ನು ಹಿಂದೆಯೇ ಆ ಪಾಸ್ ಮಾರ್ಕ ಹೊತ್ತ ಪತ್ರಿಕೆ ನೆನಪು ಮಾಡಿಕೊಟ್ಟಿತ್ತು. ಜೊತೆಗೆ ಆ ಕ್ಷಣಕ್ಕೆ ಒಳ್ಳೆಯ ಹವ್ಯಾಸಗಳು ಬದುಕನ್ನು ರೂಪಿಸುತ್ತವೆ ಎಂದ ಸ್ವಾಮಿ ವಿವೇಕಾನಂದರ ಮಾತು ಅದೆಷ್ಟು ನಿಜ ಎಂಬುದು ಕೂಡ ಮನದಟ್ಟಾಗಿತ್ತು.