ಎಲೆಕ್ಟ್ರಾನಿಕ್ ಚಿಪ್ ಅಳವಡಿಸಲಾದ ಹೊಸ ಮತ್ತು ಸುಧಾರಿತ ಪಾಸ್ಪೋರ್ಟ್ ಅನ್ನು ಶೀಘ್ರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಪಾಸ್ಪೋರ್ಟ್ ತಿರುಚುವಿಕೆ ಹಾಗೂ ನಕಲಿ ಪಾಸ್ಪೋರ್ಟ್ ಸೃಷ್ಟಿಸುವ ದಂಧೆಗೆ ಬ್ರೇಕ್ ಬೀಳಲಿದೆ ಎಂದು ಪಾಸ್ಪೋರ್ಟ್ ಸೇವಾ ದಿವಸ್ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ತಿಳಿಸಿದ್ದಾರೆ.
ಪಾಸ್ಪೋರ್ಟ್ ಸೇವಾ ಕಾರ್ಯಕ್ರಮವು 2.0 ಹೊಸ ಮತ್ತು ನವೀಕರಿಸಿದ ಇ-ಪಾಸ್ಪೋರ್ಟ್ಗಳನ್ನುಒದಗಿಸುವುದನ್ನು ಒಳಗೊಂಡಿರುತ್ತದೆ. ಸಕಾಲಿಕ, ವಿಶ್ವಾಸಾರ್ಹ, ಪಾರದರ್ಶಕ ವ್ಯವಸ್ಥೆಯಲ್ಲಿ ಶೀಘ್ರ ಲಭ್ಯವಾಗಬಹುದಾದ ರೀತಿಯಲ್ಲಿ ಜನರಿಗೆ ಪಾಸ್ಪೋರ್ಟ್ಗಳು ಮತ್ತು ಸಂಬಂಧಿತ ಸೇವೆಗಳನ್ನು ಸಮರ್ಥವಾಗಿ ಒದಗಿಸುವ ಶಪಥ ಮಾಡಬೇಕು ಎಂದು ಪಾಸ್ಪೋರ್ಟ್ ಸೇವಾ ಸಂಬಂಧಿತ ಅಧಿಕಾರಿಗಳಿಗೆ ಅವರು ತಿಳಿಸಿದ್ದಾರೆ.
ಇಎಎಸ್ಇ (ಎನ್ಹ್ಯಾನ್ಸ್ಡ್ ಪಾಸ್ಪೋರ್ಟ್ ಸರ್ವೀಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿತ ಸೇವಾ ವಿತರಣೆ, ಚಿಪ್ ಬೇಸ್ಡ್ ಇ ಪಾಸ್ಪೋರ್ಟ್ನಿಂದಾಗಿ ಸುಲಲಿತ ವಿದೇಶ ಪ್ರವಾಸ ಮತ್ತು ಎನ್ಹ್ಯಾನ್ಸ್ಡ್ ಡಾಟಾ ಸೆಕ್ಯುರಿಟಿ) ಜಾರಿಗೊಳಿಸಲಿದ್ದೇವೆ. ಇದು ಡಿಜಿಟಲ್ ವ್ಯವಸ್ಥೆ ಬಳಸಿಕೊಂಡು ಜನರಿಗೆ ಸುಧಾರಿತ ಪಾಸ್ಪೋರ್ಟ್ ಸೇವೆ ನೀಡಲು ನೆರವಾಗಲಿದೆ, ಕೃತಕ ಬದ್ಧಿಮತ್ತೆ ವ್ಯವಸ್ಥೆ ಆಧರಿತವಾಗಿ ಸೇವೆಯನ್ನು ನೀಡಲಾಗುವುದು, ಚಿಪ್ ಆಧರಿತ ಇ ಪಾಸ್ಪೋರ್ಟ್ನಿಂದ ವಿದೇಶಗಳಿಗೆ ಸುಲಲಿತ ಭೇಟಿ ನೀಡಬಹುದು ಮತ್ತು ಮಾಹಿತಿಯನ್ನು ಇನ್ನಷ್ಟು ಸುರಕ್ಷಿತವಾಗಿ ಇಡಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.
ಇ – ಪಾಸ್ಪೋರ್ಟ್ ವಿಶೇಷತೆ ಏನು?
ಮೈಕ್ರೋಚಿಪ್ ಇರುವ ಇ – ಪಾಸ್ಪೋರ್ಟ್ ಬೆರಳಚ್ಚು ಹಾಗೂ ಫೇಸ್ ರಿಕಗ್ನೈಷನ್ನಂತಹ ಸುಧಾರಿತ ಅಂಶಗಳನ್ನು ಒಳಗೊಂಡಿರುತ್ತದೆ. ಇದರಿಂದ ಪಾಸ್ಪೊರ್ಟ್ ತಿರುಚುವಿಕೆ ಹಾಗೂ ನಕಲಿ ಪಾಸ್ಪೋರ್ಟ್ ಮಾಡುವುದು ಅಸಾಧ್ಯವಾಗಲಿದೆ. ವಿಮಾನ ನಿಲ್ದಾಣಗಳ ಚೆಕ್ ಪಾಯಿಂಟ್ನಲ್ಲಿ ಪಾಸ್ಪೋರ್ಟ್ ಹೊಂದಿದವರ ಗುರುತು ದೃಢೀಕರಣಕ್ಕೆ ಸುಲಭವಾಗಲಿದೆ.