ಮತಾಂತರಗೊಂಡ ಪರಿಶಿಷ್ಟ ಜಾತಿ ಪಂಗಡದ ವ್ಯಕ್ತಿಗಳಿಗೆ ಮೀಸಲಾತಿಯನ್ನು ವಿಸ್ತರಿಸುವುದರ ಕುರಿತು ಇತ್ತೀಚೆಗೆ ಸುಪ್ರೀಂ ಕೋರ್ಟ್ ಒಂದು ಹೇಳಿಕೆಯನ್ನು ನೀಡಿ ದೇಶದ ಗಮನವನ್ನ ಸೆಳೆದಿದೆ. ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಅಹಸಾನುದ್ದೀನ್ ಅಮಾನುಲ್ಲ, ನ್ಯಾಯಮೂರ್ತಿ ಅರವಿಂದ ಕುಮಾರ್ ಅವರುಗಳನ್ನೊಳಗೊಂಡ ಪೀಠವು ’ಸಾಮಾಜಿಕ ಕಳಂಕವು ಮತಾಂತರದ ನಂತರವೂ ಮುಂದುವರೆಯಬಹುದು’ ಎಂದು ಅಭಿಪ್ರಾಯ ಪಟ್ಟಿದೆ. ಈ ಹೇಳಿಕೆಯು ಮೀಸಲಾತಿಯ ಕುರಿತ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಈ ಬೆಳವಣಿಗೆಗಳು ಅಂಬೇಡ್ಕರ್ ಜಯಂತಿಯ ಅಸುಪಾಸಿನಲ್ಲಿ ನಡೆಯುತ್ತಿರುವುದು ಕುತೂಹಲಕಾರಿಯಾಗಿದೆ. ಈ ಸಂದರ್ಭದಲ್ಲಿ ಮೀಸಲಾತಿಯ ಕುರಿತು ಅಂಬೇಡ್ಕರ್ ಅವರ ಅಭಿಪ್ರಾಯವನ್ನು ಪುನರ್ ಪರಿಶೀಲಿಸುವುದು ಇಂದಿನ ಅಗತ್ಯವಾಗಿದೆ.
ಸಂವಿಧಾನ ಶಿಲ್ವಿ ಡಾ.ಬಿ.ಆರ್ ಅಂಬೇಡ್ಕರ್ ಅಸ್ಪ್ರಶ್ಯತೆ ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ನಾಯಕ. ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದ ಅಸ್ಪ್ರಶತೆಯ ಅವಮಾನಗಳು ಅವರನ್ನು ಹೋರಾಟಗಾರನನ್ನಾಗಿ ರೂಪಿಸಿತ್ತು. ಸಾಮಾಜಿಕ ಸಮಾನತೆಯ ಕನಸು ಕಾಣುವಂತೆ ಮಾಡಿತ್ತು. ಮೇಲು ಕೀಳೆನ್ನದೇ ಎಲ್ಲರೂ ಸಮಾನರು ಎಂಬ ಪರಿಕಲ್ಪನೆಯನ್ನು ಸಂವಿಧಾನದಲ್ಲಿ ಆಳವಡಿಸಿಕೊಳ್ಳಲು ಇದು ಅವರಿಗೆ ಸ್ಪೂರ್ತಿಯಾಯಿತು. ಇದರಿಂದಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಸಂವಿಧಾನ ಬದ್ಧವಾಗಿ ನೀಡಲಾಯಿತು. ಜಾತಿ ವ್ಯವಸ್ಥೆಯು ತೀರ ಬಿಗುವಾಗಿದ್ದ ಅಂದಿನ ಕಾಲದಲ್ಲಿ ಇದರ ಅವಶ್ಯಕತೆಯೂ ಇತ್ತು.
ಮೀಸಲಾತಿಯನ್ನು ಅಂಬೇಡ್ಕರ್ರವರು ತಮ್ಮ ಬರಹಗಳಲ್ಲಿ ’ಪ್ರಾತಿನಿಧ್ಯದ ಹಕ್ಕು’ ಎಂದು ಉಲ್ಲೇಖಿಸುತ್ತಾರೆ. ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿವರ್ಗಗಳ ಒಟ್ಟು ಜನಸಂಖ್ಯೆಗೆ ಪೂರಕವಾದ ಅನುಪಾತದಲ್ಲಿ ಪರಿಶಿಷ್ಟ ಜಾತಿವರ್ಗದ ಉದ್ಯೋಗಿಗಳು ಇರಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ ಅವರು ಶೈಕ್ಷಣಿಕವಾಗಿ ಅನರ್ಹವಾಗಿರುವ ವ್ಯಕ್ತಿಯ ಪ್ರಾತಿನಿಧ್ಯದ ಹಕ್ಕನ್ನು ಮೊಟಕುಗೊಳಿಸುದರ ಪರವಾಗಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾಯಿಯ ಕುರಿತು ಅವರ ಅಭಿಪ್ರಾಯ ಭಿನ್ನವಾಗಿತ್ತು. ಮೀಸಲಾತಿಯ ಬದಲಿಗೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ಸರ್ಕಾರ ನೀಡಬೇಕು ಎಂಬುದು ಅವರ ನಿಲುವಾಗಿತ್ತು.
ಸಂವಿಧಾನ ಜಾರಿಗೆ ಬಂದ ೨೫ ವರ್ಷಗಳ ನಂತರ ಮೀಸಲಾತಿ ನಿಯಮವನ್ನು ಮರುಪರಿಶೀಲಿಸುವಂತೆ ಅವರು ಸೂಚಿಸಿದ್ದರು. ಆದರೆ ನಂತರ ಬಂದ ಸರ್ಕಾರಗಳು ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ಮರುಪರಿಶೀಲಿಸಲಿಲ್ಲ. ಇದರಿಂದಾಗಿ ಸಾಮಾನ್ಯವರ್ಗದ ಅರ್ಹ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದೆ.
ಒಂದು ವೇಳೆ ಮತಾತಂತರಗೊಂಡವರಿಗೂ ಮೀಸಲಾತಿ ವಿಸ್ತರಣೆಯಾದರೆ, ಮತಾಂತರಗೊಳ್ಳುವವರ ಸಂಖ್ಯೆಯೂ ಹೆಚ್ಚಾಗಬಹುದು ಎನ್ನುವ ಆತಂಕ ಕೆಲವರ್ಗದ ಜನರಲ್ಲಿ ಸೃಷ್ಠಿಯಾಗಿದೆ. ಹಿಂದುಳಿದ ವರ್ಗದ ಉದ್ಧಾರಕ್ಕೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಪೇಕ್ಷೆಯಂತೆ ಜಾರಿಗೆ ಬಂದ ಮೀಸಲಾತಿಯು ರಾಜಕೀಯ ಲಾಭಕ್ಕಾಗಿ ಬಳಕೆಯಾಗುತ್ತಿರುವುದು ದುರಂತ.
ಮೀಸಲಾತಿಯ ಕುರಿತ ಚರ್ಚೆಯು ಹಿಂದುಳಿದ ವರ್ಗಗಳ ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸದೆ ಪೂರ್ಣವಾಗುವುದಿಲ್ಲ. ಇಂದಿಗೂ ಭಾರತದ ಅನೇಕ ಕಡೆ ಜಾತಿಯಾಧಾರಿತ ದೌರ್ಜನ್ಯಗಳು ನಡೆತ್ತಿರುವುದು ಆಗಾಗ ವರದಿಯಾಗುತ್ತಿವೆ. ಭಾರತವಿನ್ನೂ ಸಂಪೂರ್ಣವಾಗಿ ಜಾತಿ ವವ್ಯಸ್ಥೆಯಿಂದ ಮುಕ್ತವಾಗದಿರುವ ಈ ಸಂದರ್ಭದಲ್ಲಿ ಮೀಸಲಾತಿಯ ಪ್ರಸ್ತುತತೆಯು ವಿವಿಧ ಆಯಾಮಗಳನ್ನು ಪಡೆಯುತ್ತದೆ. ಹಿಂದುಳಿದ ವರ್ಗಗಳಿಗೆ ಅಂಟಿಕೊಂಡಿರುವ ಸಾಮಾಜಿಕ ಕಳಂಕವನ್ನು ತೊಡೆದು ಅವರನ್ನು ಮುಖ್ಯವಾಹಿನಿಗೆ ಕರೆದೊಯ್ಯಲು ಮೀಸಲಾತಿ ಎಂಬುದು ಪರಿಣಾಮಕಾರಿಯಾದ ಸಾಧನವೇ ಎಂಬುದನ್ನು ಮರು ವಿಮರ್ಶಿಸುವ ಅಗತ್ಯವಿದೆ.