ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದ್ದ ತೆಲುಗಿನ ನಟ ನರೇಶ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ ಅಭಿನಯದ ‘ಮತ್ತೆ ಮದುವೆ’ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದ್ದು, ಇದೇ ತಿಂಗಳ 23ಕ್ಕೆ ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮಿಂಗ್ ಆಗಲಿದೆ.
ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆ ಸಿನಿಮಾ ತೆಲುಗಿನಲ್ಲಿ ಮಳ್ಳಿಪೆಳ್ಳಿ ಎಂಬ ಟೈಟಲ್ ನಡಿ ಮೇ 26ರಂದು ಬಿಡುಗಡೆಯಾಗಿತ್ತು. ಟಾಲಿವುಡ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೆ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು.
ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್ಗೆ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು.
ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆ ಸಿನಿಮಾದಲ್ಲಿ ನಟಿಸಿದ್ದಾರೆ.
ನರೇಶ್ ಮತ್ತು ಪವಿತ್ರಾ ಲೋಕೇಶ್ ಕಳೆದ ಒಂದು ವರ್ಷದಿಂದ ಭಾರೀ ಸುದ್ದಿಯಲ್ಲಿದ್ದಾರೆ. ಇವರಿಬ್ಬರ ಲಿವಿಂಗ್ ರಿಲೇಶನ್ ಶಿಪ್ ಬಗ್ಗೆ ಮಾಧ್ಯಮಗಳು ನಾನಾ ಸುದ್ದಿಗಳನ್ನು ಬಿತ್ತರಿಸಿವೆ. ಇವೆಲ್ಲದಕ್ಕೂ ಟಕ್ಕರ್ ಕೊಡುವ ರೀತಿ ನರೇಶ್ ‘ಮತ್ತೆ ಮದುವೆ’ ಸಿನಿಮಾ ಮಾಡಿದ್ದಾರೆ. ಸಾಕಷ್ಟು ವಿರೋಧದ ನಡುವೆಯು ತಮ್ಮ ಜೀವನದಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ತಮ್ಮದೇ ಶೈಲಿಯಲ್ಲಿ ಜನರ ಮುಂದೆ ತಂದಿದ್ದಾರೆ.
ಮತ್ತೆ ಮದುವೆಯಲ್ಲಿ ನರೇಶ್ ಮತ್ತು ಪವಿತ್ರಾ ಲೋಕೆಶ್ ಪ್ರೇಮ ಕಹಾನಿ:
ನರೇಶ್ ತಮ್ಮ ಮೊದಲ ಮತ್ತು ಎರಡನೇ ಹೆಂಡತಿಗೆ ವಿಚ್ಛೇದನ ನೀಡಿದ ನಂತರ ಮೂರನೇ ಹೆಂಡತಿ ರಮ್ಯಾ ರಘುಪತಿಯನ್ನು ಹೇಗೆ ಪ್ರೀತಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದಾರೆ. ಒಟ್ಟು ಮೂರು ಮದುವೆಗಳ ನಂತರ ಪವಿತ್ರಾ ಲೋಕೇಶ್ ಜೊತೆಗಿನ ಲವ್ ಸ್ಟೋರಿಯನ್ನು ಸಿನಿಮಾದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.ಪವಿತ್ರಾ ಲೋಕೇಶ್ ಲವ್ ಸ್ಟೋರಿಯ ಜೊತೆಗೆ ಆಕೆಯ ಗಂಡ ಸುಚೇಂದ್ರ ಪ್ರಸಾದ್ ತನ್ನ ಪತ್ನಿಗೆ ಕೊಟ್ಟ ಟಾರ್ಚರ್ ಬಗೆಗಿನ ಕೆಲ ದೃಶ್ಯಗಳು ಸಿನಿಮಾದಲ್ಲಿದೆ. ಪವಿತ್ರಾ ಲೋಕೇಶ್ ಸುಚೇಂದ್ರ ಪ್ರಸಾದ್ ಜೊತೆಗಿನ ಜಗಳ, ಮನಸ್ತಾಪದಿಂದಾಗಿ ನಟ ನರೇಶ್ಗೆ ಹತ್ತಿರವಾಗುತ್ತಾರೆ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಮತ್ತೊಂದೆಡೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಂಬಂಧವನ್ನು ಬಹಿರಂಗಪಡಿಸಲು ನರೇಶ್ ಮೂರನೇ ಹೆಂಡತಿ ಮಾಡಿದ ಪ್ರಯತ್ನಗಳೇನು? ಅದಕ್ಕೆ ಸಹಾಯ ಮಾಡಿದ ಮಾಧ್ಯಮ ಯಾವುದು ಎನ್ನುವ ಬಗ್ಗೆ ಕೂಡ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅದರಲ್ಲಿ ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದು ಯಾರಿಗೂ ತಿಳಿದಿಲ್ಲ.