ಸಂಸ್ಕೃತಿಯ ಸಾಧನಗಳು ನಾಗರೀಕತೆಯಂತೆ ಬಹಿರಂಗದ ಪ್ರಯೋಜನಕ್ಕಾಗಿ ನಿರ್ಮಿತವಾದುವುಗಳಲ್ಲ. ಅವು ತಮಗೆ ತಾವೇ ಪ್ರಯೋಜನಾತ್ಮಕವಾದುವುಗಳು. ಹಿಂದೆ ನೋಡಿದಂತೆ ಒಂದು ಟೈಪ್ ರೈಟರ್ ತನಗೆ ತಾನೇ ಪ್ರಯೋಜನಾತ್ಮಕವಲ್ಲ. ಟೈಪು ಮಾಡಲು ಉಪಯುಕ್ತವಾಗುವುದರ ಯೋಗ್ಯತೆಯಿಂದ ಅದರ ಬೆಲೆಯನ್ನು ಅಳೆಯುತ್ತೇವೆ. ಆದರೆ ಒಂದು ಸುಂದರ ಚಿತ್ರದ ಪ್ರಯೋಜನ ಆ ಚಿತ್ರದಲ್ಲಿಯೇ ಅಡಗಿದೆ, ಏಕೆಂದರೆ ನಮ್ಮಲ್ಲಿರುವ ಆಂತರಿಕವಾದ ಯಾವುದೋ ಅನುಭವಕ್ಕೆ ಅದು ಮೂರ್ತ ಸ್ವರೂಪವೆನ್ನುವಂತಿದೆ. ಹೀಗೆ ಸಂಸ್ಕೃತಿಯಲ್ಲಿ ಭಾವನಾತ್ಮಕವಾದ ಅನುಭವ. ಆನಂದರೂಪಿಯಾಗಿ ಅಭಿವ್ಯಕ್ತಗೊಳ್ಳುತ್ತದೆ. ಇಲ್ಲಿರುವುದು ಆನಂದಾತ್ಮಕ: ನಾಗರೀಕತೆ ಪ್ರಯೋಜನಾತ್ಮಕ, ನಾಗರೀಕತೆಯಲ್ಲಿ ಜನಸಮೃರ್ದ, ಪರದೇಶ ಸಂಪರ್ಕ, ವ್ಯಾಪಾರಗಳಿಂದ ಪ್ರತಿಭೆಗೆ ಉತ್ತೇಜನ ಉಂಟಾದರೂ, ಈ ನೂತನ ವಿಷಯಗಳ ಗುಣಾವಗುಣ ಪರಿಶೀಲನೆಯು ಸಂಸ್ಕಾರದಿಂದಾಗಬೇಕು. ಆದುದರಿಂದ ನಾಗರೀಕತೆಯು ಜಾತಿವಿಶಿಷ್ಟವಲ್ಲ. ಪ್ರಪಂಚದ ಅನೇಕ ಜನಾಂಗಗಳಲ್ಲಿ ವಿವಿಧವಾದ ನಾಗರೀಕತೆಗಳು ಹುಟ್ಟಿವೆ. ಒಂದು ಜನಾಂಗವು ಮತ್ತೊಂದು ಜನಾಂಗದ ನಾಗರೀಕತೆಯನ್ನು ಅನುಕರಿಸಲು ಸಾಧ್ಯ. ಆದರೆ ಸಂಸ್ಕೃತಿಯನ್ನು ಮಾತ್ರ ಅನುಕರಿಸಲಾಗದು, ಆದುದರಿಂದ ನಾಗರೀಕತೆಗಳಲ್ಲಿ ಒಂದು ಸಮಷ್ಟಿರೂಪವಿದೆಯೆಂದು ಹೇಳಿದರೂ ಒಂದೊಂದು ಸಂಸ್ಕೃತಿಯಲ್ಲಿಯೂ ವೈಶಿಷ್ಟ್ಯವಿದೆ.
ಭಾರತೀಯ ಸಂಸ್ಕೃತಿಯು ಭರತಖಂಡದಂತೆಯೇ ಅಖಂಡ ಮತ್ತು ಆನಾದಿ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ, ವಿಶ್ವೇಶ್ವರನಿಂದ ರಾಮೇಶ್ವರನವರೆಗೂ, ಬಿಂದು ಮಾಧವನಿಂದ ಸೇತುಮಾಧವನವರೆಗೂ ಹೇಗೆ ಭರತಖಂಡವು ಅಪರಿಚ್ಛಿನ್ನವೋ ಹಾಗೆಯೇ ವೇದಋಷಿಗಳಿಂದ ರಾಮಕೃಷ್ಣ ಪರಮಹಂಸ, ಮಹಾತ್ಮಾ ಗಾಂಧಿಗಳವರೆಗೂ ಅಖಂಡ, ವಿದೇಶೀಯ ಜನಾಂಗಗಳೂ ಸಂಸ್ಕೃತಿಗಳೂ ಭರತಖಂಡದಲ್ಲಿ ಕೆಲವು ಪ್ರಾಂತಗಳಲ್ಲಿ ತಮ್ಮ ಪ್ರಭಾವವನ್ನು ತೋರಿಸಿದ್ದರೂ ಪ್ರಾಚೀನ ಸಂಸ್ಕೃತಿಯು ಅವುಗಳನ್ನು ಜೀರ್ಣಮಾಡಿಕೊಂಡು, ತನ್ನ ರೂಪವನ್ನಿತ್ತು ತನ್ನ ಅಂಗವಾಗಿ ಮಾಡಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಭಾರತೀಯರ ಆಧ್ಯಾತ್ಮಿಕ ದೃಷ್ಟಿ. ಇದು ಕೇವಲ ಪರಮತಸಹಿಷ್ಣುತೆಯಲ್ಲ. ಕೇವಲ ಸಹಿಷ್ಣುತೆಯು ಔದಾಸೀನ್ಯದಲ್ಲಿ ಪರಿಣಮಿಸಬಹುದು. ಆದುದರಿಂದ ಸಹನೆಯೊಡನೆ ಸಹಕಾರವೂ ಆವಶ್ಯಕ. ಈ ಸಹಕಾರವು ಉಪಾದಾನ ನಿಮಿತ್ತಗಳನ್ನಾಶ್ರಯಿಸಿರುವುದರಿಂದ ಗುಣಾವಗುಣ ವಿಮರ್ಶೆ ಮತ್ತು ಗ್ರಹಣಕ್ರಮದಲ್ಲಿ ಒಂದು ನಿಯತವಾದ ಧರ್ಮವಿರುವುದೇ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ಅರ್ಥ – ಅನರ್ಥ ವಿವೇಚನೆಗೆ ಮೂಲವು ಆತೀಂದ್ರಿಯ ವಿಷಯ ನಿರ್ಣಾಯಕವಾದ ವೇದಜನ್ಯಜ್ಞಾನ, ಚಾರಿತ್ರಿಕ ದೃಷ್ಟಿಯಿಂದ ವೇದಬಾಹ್ಯಗಳೆಂದು ವ್ಯವಹರಿಸುವ ಬೌದ್ಧ, ಜೈನ ಮುಂತಾದ ಮತಗಳೂ
ಭಾರತೀಯ ಸಂಸ್ಕೃತಿಯ ಸೂಚಕಗಳೇ ಆದರೂ ಅವುಗಳಲ್ಲಿಯೂ ಮುಖ್ಯ ತತ್ವಗಳಾದ ಕರ್ಮ, ಜ್ಞಾನ, ಭಕ್ತಿ, ಪುನರ್ಜನ್ಮ ಮುಂತಾದವು ವೇದ ಜ್ಞಾನಜನ್ಯವೆಂದೇ ನಿರ್ಧರಿಸಿದೆ.
ಭಾರತೀಯ ಸಂಸ್ಕೃತಿಯಲ್ಲಿ ವ್ಯಕ್ತಿಯ ಸ್ವಾತಂತ್ರಕ್ಕೆ ಪ್ರಾಧಾನ್ಯವಿದೆ. ವ್ಯಕ್ತಿಗೂ ಈಶ್ವರ ಮತ್ತು ಜಡಪ್ರಪಂಚಗಳಿಗೂ ಇರತಕ್ಕ ಸಂಬಂಧದ ವಿಷಯವಾಗಿ ಭಾರತೀಯ ದರ್ಶನಗಳಲ್ಲಿ ಭಿನ್ನಾಭಿಪ್ರಾಯಗಳು ಕಂಡುಬಂದರೂ ಪ್ರತಿ ವ್ಯಕ್ತಿಯೂ ತನ್ನ ನೈಜವಾದ ಸ್ವಭಾವಾನುಸಾರ ಯಥಾಯೋಗ್ಯವಾಗಿ ಸ್ವತಂತ್ರನೆಂದು ಸರ್ವರಿಂದಲೂ ಅಂಗೀಕರಿಸಲ್ಪಟ್ಟಿರುವುದರಿಂದ ಸಮಾಜದ ನಿರಂಕುಶಾಧಿಕಾರಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಅವಕಾಶವಿಲ್ಲ. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಅಧಿಕಾರ, ಉಪಾಸನಾ, ಗುಣ, ಫಲಗಳಿಗನುಸಾರವಾಗಿ ವ್ಯಕ್ತಿಗೆ ಕರ್ಮವನ್ನು ಮಾಡಲೂ ಬಿಡಲೂ ಅನ್ಯಥಾ ಮಾಡಲೂ ಸ್ವಾತಂತ್ರವಿದೆ. ಇದೇ ಕರ್ಮ ಮತ್ತು ಪುನರ್ಜನ್ಮಗಳ ರಹಸ್ಯ ತತ್ತ್ವ ಭಾರತೀಯ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕ ವಿವೇಚನೆಗೆ ಅಧಿಕ ಪ್ರಾಶಸ್ತ್ರವಿದ್ದರೂ ಧರ್ಮ ವಿರುದ್ಧವಾದ ಕಾಮ, ಕರ್ಮಾಚರಣೆ, ಅರ್ಥಸಂಪಾದನೆ, ಪ್ರಾಪಂಚಿಕಸುಖ ಇವುಗಳೂ ಕೂಡ ವ್ಯಕ್ತಿಯ ಸಂಪೂರ್ಣ ವಿಕಾಸಕ್ಕೆ ಆವಶ್ಯಕವೆಂದು ನಿರ್ಣಯಿಸಿರುವುದರಿಂದ ಭಾರತೀಯರು ಕೇವಲ ಆಮುಷ್ಟಿಕ ದೃಷ್ಟಿಯುಳ್ಳವರೆಂಬ ಆಪಾದನೆಯು ನಿರಾಧಾರವಾದುದು. ಭರತಖಂಡದಲ್ಲಿ ಆಧ್ಯಾತ್ಮಿಕ ಶಾಸ್ತ್ರಗಳೆಷ್ಟು ಬೆಳೆದಿವೆಯೋ ಲೋಕಸಂಗ್ರಹಕ್ಕಾಗಿ ಅಷ್ಟೇ ಐಹಿಕವಿಷಯಕವಾದ ಶಾಸ್ತ್ರಗಳೂ ಇರುವುದರಿಂದ ಭಾರತೀಯ ಸಂಸ್ಕೃತಿಯು ಇತರ ಸಂಸ್ಕೃತಿಗಳಂತೆ ಅಪೂರ್ಣವಾಗಿಲ್ಲದೆ ಸರ್ವಾಂಗ ಸುಂದರವಾಗಿದೆ.