ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಇನ್ನು ಒಂದು ದಿನದಲ್ಲಿ ರಾಜ್ಯದ ಭವಿಷ್ಯ ನಿರ್ಧಾರವಾಗಲಿದೆ. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ. ಮೂರು ಪಕ್ಷಗಳು ತಮ್ಮದೇ ಆದ ಹಲವಾರು ತಂತ್ರಗಳನ್ನು ಇಟ್ಟುಕೊಂಡು ಕಣಕ್ಕೆ ಇಳಿದಿದ್ದು, ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ.
ಚುನಾವಣೆ ಗೆಲ್ಲಲು ಬಿಜೆಪಿ ತಂತ್ರ:
ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಅಧಿಕಾರ ಪಡೆಯಲೇ ಬೇಕು ಎಂದು ಪಣತೊಟ್ಟಿದೆ. ಚುನಾವಣೆಗೆ ಮುನ್ನ ಬಿಜೆಪಿ ಸರ್ಕಾರ ಮೀಸಲಾತಿ ಬದಲಾವಣೆ ಮಾಡಿ ತನ್ನ ಮೊದಲ ತಂತ್ರವನ್ನು ಹೂಡಿತ್ತು. ನಂತರ ಮೋದಿ ವರ್ಚಸ್ಸನ್ನು ಬಳಸಿಕೊಂಡು ಮತಪ್ರಚಾರವನ್ನು ಪ್ರಾರಂಭಿಸಿತು.
ಪ್ರಧಾನಿ ಮೋದಿ ಅವರು ರಾಜ್ಯಾದ್ಯಂತ 20 ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸಿ . ಜೊತೆಗೆ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮೆಗಾ ರೋಡ್ಶೋ ಕೈಗೊಂಡರು. ಈ ರೋಡ್ಶೋ ಸುಮಾರು 25 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು ರಾಜ್ಯದ ಪ್ರಮುಖ ಭಾಗಗಳಲ್ಲಿ ಮೋದಿ ಪ್ರಚಾರ ನಡೆಸಿ ಮತದಾರರನ್ನು ಸೆಳೆಯುವ ಯತ್ನ ಮಾಡಿದರು. ಹಾಗೆಯೇ ದೇಶದ ಪ್ರಮುಖ ಸ್ಟಾರ್ ಪ್ರಚಾರಕಾದ ಅಮಿತ್ ಷಾ ಮತ್ತು ಯೋಗಿ ಆದಿತ್ಯನಾಥ್ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಮೋದಿ ಜನಪ್ರಿಯತೆಯನ್ನು ಬಳಸಿಕೊಳ್ಳುವುದರ ಜೊತೆಗೆ ಡಬಲ್ ಇಂಜಿನ್ ಸರ್ಕಾರ ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿರುವ ಅಭಿವೃದ್ಧಿಯನ್ನು ಜನತೆಯ ಮುಂದಿಟ್ಟು ಮತಯಾಚನೆಯನ್ನು ಬಿಜೆಪಿ ಪಕ್ಷ ಮಾಡಿದೆ.
ಲಿಂಗಾಯತ್ ಸಮುದಾಯ ಮತ್ತು ವಿಷಸರ್ಪ ವಿಚಾರಗಳು ಚುನಾವಣೆಯ ಪ್ರಚಾರಕ್ಕೆ ಪ್ರಮುಖವಾಗಿ ಬಳಕೆಗೆ ಬಂದ ವಿಚಾರವಾದರೂ ಕೂಡ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಬಜರಂಗದ ದಳ ನಿಷೇಧದ ವಿಚಾರವನ್ನು ಮುಖ್ಯ ಅಸ್ತ್ರವಾಗಿ ಬಿಜೆಪಿ ಬಳಕೆ ಮಾಡಿದೆ. ಹಿಂದೂ ಮತದಾರರ ಮತವನ್ನು ಪಡೆಯಲು ತನ್ನ ಕೊನೆ ಹಂತದ ಪ್ರಚಾರದಲ್ಲಿ ಈ ತಂತ್ರವನ್ನು ಹೂಡಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ತಂತ್ರ:
ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಭರವಸೆಯಲ್ಲಿ ಕಾಂಗ್ರೆಸ್ ತನ್ನ ಪ್ರಯತ್ನವನ್ನು ಮಾಡುತ್ತಿದೆ. ಹೆಚ್ಚುತ್ತಿರುವ ಹಣದುಬ್ಬರದ ವಿರುದ್ಧ ಜನರ ಆಕ್ರೋಶವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತನ್ನು ಎತ್ತಿತೋರಿಸಲು ಪ್ರಯತ್ನಿಸುತ್ತಿದೆ. ಬಿಜೆಪಿ 40% ಸರ್ಕಾರ ಎಂಬ ವಿಚಾರವನ್ನು ಕಾಂಗ್ರೆಸ್ ತನ್ನ ಮುಖ್ಯ ತಂತ್ರವಾಗಿ ಬಳಸಿಕೊಳ್ಳುತ್ತಿದೆ. ಇನ್ನೂ ಬಿಜೆಪಿ ಅಲ್ಪ ಸಂಖ್ಯಾತರ ವಿರೋಧಿ ಅದಕ್ಕೆ ಮೀಸಲಾತಿಯನ್ನು ಬದಲಾವಣೆ ಮಾಡಿದೆ ಎಂಬ ವಿಚಾರವನ್ನು ಕಾಂಗ್ರೆಸ್ ತನ್ನ ಮತ ಪ್ರಚಾರದಲ್ಲಿ ಬಳಸಿಕೊಂಡಿದೆ. ಕಾಂಗ್ರೆಸ್ ಗೆದ್ದರೇ ಹಲವಾರು ಗ್ಯಾರಂಟಿಗಳನ್ನು ನೀಡುವುದಾಗಿ ಭರವಸೆಯನ್ನು ನೀಡುತ್ತಾ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.
ಇನ್ನೂ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ನಾಯಕರು ರಾಜ್ಯದ ವಿವಿಧ ಭಾಗಗಳಲ್ಲಿ ರೋಡ್ ಶೋ ರ್ಯಾಲಿಗಳನ್ನು ನಡೆಸಿ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿದ್ದಾರೆ.
ಬಿಜೆಪಿಯಲ್ಲಿ ಅಸಮಾಧಾನಗೊಂಡಿದ್ದ ಉತ್ತರ ಕರ್ನಾಟಕದ ಇಬ್ಬರು ಪ್ರಮುಖ ನಾಯಕರನ್ನು ಸೆಳೆಯಲು ಕಾಂಗ್ರೆಸ್ ಯಶಸ್ವಿಯಾಗಿದೆ. ಇದರಿಂದಾಗಿ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಲಿಂಗಾಯತ ಮತಗಳ ಕಾಂಗ್ರೆಸ್ ಪಡೆಯುವ ಯೋಜನೆಯನ್ನಯ ರೂಪಿಸಿದೆ.
ಗೆಲುವಿಗೆ ಜೆಡಿಎಸ್ ತಂತ್ರ:
ಚುನವಾಣೆಯಲ್ಲಿ ಈ ಬಾರಿ ಹೆಚ್ಚಿನ ಸ್ಥಾನವನ್ನು ಪಡೆದು ಕಿಂಗ್ ಮೇಕರ್ ಆಗುವತ್ತ ಜೆಡಿಎಸ್ ತಂತ್ರವನ್ನು ರೂಪಿಸಿದ್ದು, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆಗೂ ಮೂರು ತಿಂಗಳು ಮುಂಚಿತವಾಗಿಯೇ ತಯಾರಿ ನಡೆಸಿದ್ದರು. ಕುಮಾರಸ್ವಾಮಿ ರಾಜ್ಯದಾದ್ಯಂತ ಪಂಚರತ್ನ ಯಾತ್ರೆಯನ್ನು ಕೈಗೊಂಡು ಮತದಾರರನ್ನು ಕೇಂದ್ರಕರಿಸುವ ಪ್ರಯತ್ನವನ್ನು ನಡೆಸಿದರು. ಪಂಚರತ್ನ ಯಾತ್ರೆಯಲ್ಲಿ ಕುಮಾರಸ್ವಾಮಿ ಅವರ ಆರೋಗ್ಯ ಹದಗೆಟ್ಟಿರುವುದರಿಂದ ಉತ್ತರ ಕರ್ನಾಟಕ ಭಾಗಗಳಲ್ಲಿ ಜೆಡಿಎಸ್ ಕೇಂದ್ರಿಕರಿಸಲು ಸಾಧ್ಯವಾಗಲಿಲ್ಲ.
ಪ್ರಚಾರ ಮತ್ತು ಪ್ರಣಾಳಿಕೆಯಲ್ಲಿ ರೈತರ ಕಲ್ಯಾಣ, ಬಡತನ, ಪ್ರಾದೇಶಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದಂತಹ ರಾಜ್ಯದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿರುವ ಪಕ್ಷವು ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆದ್ದು ಕಿಂಗ್ಮೇಕರ್ ಆಗುವ ಭರವಸೆಯಲ್ಲಿದೆ.