ಬೆಂಗಳೂರು : ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ನ ವೈಸ್ ಚೇರ್ಮನ್, ಸಿಇಓ ಮತ್ತು ಡಿವೈಸ್ ಎಕ್ಸ್ಪೀರಿಯನ್ಸ್ (ಡಿಎಕ್ಸ್) ವಿಭಾಗದ ಮುಖ್ಯಸ್ಥ ಜೋಂಗ್-ಹೀ (ಜೆಹೆಚ್) ಹಾನ್ ಅವರು ಇದೀಗ ಎರಡನೇ ಬಾರಿ ಭಾರತ ಪ್ರವಾಸದಲ್ಲಿದ್ದಾರೆ ಎಂದು ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕಂ. ಲಿಮಿಟೆಡ್ ಇಂದು ಘೋಷಿಸಿದೆ.
ದಕ್ಷಿಣ ಕೊರಿಯಾದ ದೈತ್ಯ ಕಂಪನಿಯಾದ ಸ್ಯಾಮ್ ಸಂಗ್ ಬೆಳವಣಿಗೆಯಲ್ಲಿ ಭಾರತದ ಪ್ರಾಮುಖ್ಯತೆ ಹೆಚ್ಚುತ್ತಿರುವುದನ್ನು ಈ ಭೇಟಿಯಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ. ಹ್ಯಾನ್ ಅವರು ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳು, ಟ್ಯಾಬ್ಲೆಟ್ಗಳು ಮತ್ತು ರೆಫ್ರಿಜರೇಟರ್ಗಳನ್ನು ತಯಾರಿಸುವ ಕಂಪನಿಯ ನೋಯ್ಡಾ ಕಾರ್ಖಾನೆಗೆ ಸೋಮವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಎಚ್ ಹಾನ್ ಅವರು, “ಭಾರತವು ಜಾಗತಿಕವಾಗಿ ಅತಿದೊಡ್ಡದಾಗಿ ಮತ್ತು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು ಸ್ಯಾಮ್ಸಂಗ್ಗೆ ಹೇರಳವಾದ ಬೆಳವಣಿಗೆ ಅವಕಾಶವನ್ನು ಒದಗಿಸುತ್ತಿದೆ” ಎಂದು ಹೇಳಿದರು. ಮಾತು ಮುಂದುವರಿಸಿ, “ಭಾರತದಲ್ಲಿ ಹೂಡಿಕೆ ಮಾಡಿದ ಮೊದಮೊದಲ ಕಂಪನಿಗಳಲ್ಲಿ ಸ್ಯಾಮ್ ಸಂಗ್ ಕೂಡ ಒದಾಗಿದೆ ಮತ್ತು ನೋಯ್ಡಾ ಕಾರ್ಖಾನೆಯು ನಮ್ಮ ಕಂಪನಿಯ ಅತಿದೊಡ್ಡ ಘಟಕಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ. ಈ ಕಾರ್ಖಾನೆಯಲ್ಲಿ ಭಾರತಕ್ಕೆ ಮಾತ್ರವಲ್ಲದೆ ಜಗತ್ತಿಗೆ ವಿವಿಧ ಭಾಗಗಳಿಗೆ ಹೋಗುವ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ” ಎಂದು ಹೇಳಿದರು.
ಸ್ಯಾಮ್ ಸಂಗ್ ತನ್ನ “ಎಐ ಫಾರ್ ಆಲ್” (ಎಲ್ಲರಿಗೂ ಎಐ) ಎಂಬ ತನ್ನ ದೂರದೃಷ್ಟಿಯನ್ನು ಈಗಾಗಲೇ ಹಂಚಿಕೊಂಡಿದ್ದು, ಈ ವರ್ಷದ ಆರಂಭದಲ್ಲಿಯೇ ಕೃತಕ ಬುದ್ಧಿಮತ್ತೆ ಮತ್ತು ಹೈಪರ್-ಕನೆಕ್ಟಿವಿಟಿಯನ್ನು ಜೊತೆಗೂಡಿಸಿ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಅವರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಈ ವರ್ಷ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಐ ಆಧರಿತ ಪ್ರೀಮಿಯಂ ಸ್ಮಾರ್ಟ್ಫೋನ್ಗಳು ಮತ್ತು ರೆಫ್ರಿಜರೇಟರ್ಗಳು, ಏಸಿಗಳು ಮತ್ತು ವಾಷಿಂಗ್ ಮೆಷಿನ್ಗಳಂತಹ ಬೀಸ್ಪೋಕ್ಎಐ ಗೃಹೋಪಯೋಗಿ ವಸ್ತುಗಳನ್ನು ಬಿಡುಗಡೆ ಮಾಡಿದ್ದು, ವಿಶಿಷ್ಟವಾದ ಸಂಪರ್ಕಿತ ಸಾಧನಗಳ ಪರಿಸರ ವ್ಯವಸ್ಥೆಯನ್ನು ರಚಿಸಿದೆ. ಈ ಮೂಲಕ ಅನುಕೂಲತೆ, ಸಂಪರ್ಕ ಮತ್ತು ಸೌಕರ್ಯವನ್ನು ಒದಗಿಸುವುದರ ಜೊತೆಗೆ ಗ್ರಾಹಕರಿಗೆ ವಿದ್ಯುತ್ ಅನ್ನು ಉಳಿತಾಯ ಮಾಡಲು ಅನುವು ಮಾಡಿಕೊಡುತ್ತದೆ.
ಅತ್ಯಾಧುನಿಕ ತಂತ್ರಜ್ಞಾನದ ಬೆಂಬಲದಿಂದ ನಡೆಸಲ್ಪಡುವ ಈ ‘ಒನ್ ಸ್ಯಾಮ್ಸಂಗ್’ ಅನುಭವವು ಕಂಪನಿಯ ಉತ್ಪನ್ನಗಳಿಗೆ ವಿಭಿನ್ನತೆಯನ್ನು ಒದಗಿಸಲು ಸಹಾಯ ಮಾಡಿದೆ ಮತ್ತು ಪ್ರೀಮಿಯಂ ರೆಫ್ರಿಜರೇಟರ್ಗಳಂತಹ ವಿಭಾಗಗಳ ಮೇಲೆ ಗ್ರಾಹಕರ ಆಸಕ್ತಿಯನ್ನು ಹೆಚ್ಚುವಂತೆ ಮಾಡಿದೆ. ಗ್ರಾಹಕರು ಹೆಚ್ಚು ಫೀಚರ್ ಗಳನ್ನು ಒದಗಿಸುವ ದೊಡ್ಡ ಸಾಮರ್ಥ್ಯದ ರೆಫ್ರಿಜರೇಟರ್ಗಳನ್ನು ಆರಿಸಿಕೊಳ್ಳುತ್ತಿರುವುದರಿಂದ ಭಾರತದಲ್ಲಿ ಈ ವಿಭಾಗವು ಕಳೆದ ಹಲ ವರ್ಷಗಳಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಬೀಸ್ಪೋಕ್ ವಿನ್ಯಾಸ ಮತ್ತು ಎಐ ಫೀಚರ್ ಗಳುಳ್ಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರ ಮೂಲಕ ಸ್ಯಾಮ್ಸಂಗ್ ಮಾರುಕಟ್ಟೆಯಲ್ಲಿನ ತನ್ನ ನಾಯಕತ್ವವನ್ನು ಮುಂದುವರೆಸಿದೆ.
ಹೊಸ ಉತ್ಪನ್ನಗಳು ಮತ್ತು ಸರ್ವೀಸ್ ಗಳ ಅಭಿವೃದ್ಧಿಗೆ ಭಾರತ ಮೂಲದ ಆರ್ & ಡಿ ತಂಡಗಳು ನೀಡುತ್ತಿರುವ ಕೊಡುಗೆಗಳನ್ನು ಹಾನ್ ಶ್ಲಾಘಿಸಿದರು.
ಈ ಕುರಿತು ಮಾತನಾಡಿದ ಹಾನ್ ಅವರು, “ಭಾರತವು ನಾವು ಹೊಸ ಆವಿಷ್ಕಾರವನ್ನು ಸಂಶೋಧಿಸಲು ಪ್ರೇರೇಪಿಸುವ ಟೆಕ್-ಸ್ಯಾವಿ ಯುವ ಗ್ರಾಹಕರ ದೊಡ್ಡ ಸಂಖ್ಯೆಯನ್ನು ಹೊಂದಿದೆ,” ಎಂದು ಹೇಳಿದರು. ಮಾತು ಮುಂದುವರಿಸಿ, “ಎಐ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅನೇಕ ಯುವ, ಉದ್ಯಮಶೀಲ ಎಂಜಿನಿಯರ್ಗಳು ಭಾರತದಲ್ಲಿರುವ ನಮ್ಮ ಆರ್ & ಡಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ನಮಗೆ ಹೆಮ್ಮೆ ತರುವ ವಿಚಾರವಾಗಿದೆ” ಎಂದು ಹೇಳಿದರು.
ಸ್ಯಾಮ್ಸಂಗ್, ನೋಯ್ಡಾ ಮತ್ತು ಶ್ರೀಪೆರಂಬದೂರಿನಲ್ಲಿ ಎರಡು ಅತ್ಯಾಧುನಿಕ ಉತ್ಪಾದನಾ ಘಟಕಗಳನ್ನು ಹೊಂದಿದೆ. ಈ ಮೂಲಕ ಕಂಪನಿಯು “ಮೇಕ್ ಇನ್ ಇಂಡಿಯಾ” ಉದ್ದೇಶಕ್ಕೆ ಬದ್ಧವಾಗಿದೆ. ಜೊತೆಗೆ ಕಂಪನಿಯು ನೋಯ್ಡಾದಲ್ಲಿ ಡಿಸೈನ್ ಸೆಟರ್ ಮತ್ತು ಭಾರತದಲ್ಲಿ ಒಟ್ಟು ಮೂರು ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಕೇಂದ್ರಗಳನ್ನು ಸ್ಥಾಪಿಸಿದೆ. ಸ್ಥಳೀಯ ಮತ್ತು ಜಾಗತಿಕ ಉತ್ಪನ್ನಗಳಿಗೆ ನಾವೀನ್ಯತೆಯನ್ನು ಒದಗಿಸುವ ಮೂರು ಆರ್ & ಡಿ ಕೇಂದ್ರಗಳಲ್ಲಿ ಎರಡು ಕೇಂದ್ರಗಳು ನೋಯ್ಡಾದಲ್ಲಿವೆ ಮತ್ತು ಒಂದು ಬೆಂಗಳೂರಿನಲ್ಲಿದೆ.