ಮಣಿಪಾಲ್ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಯ ಪ್ರತಿಷ್ಠಿತ ಘಟಕವಾದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ [ಕೆಎಂಸಿ] ನೇತ್ರಚಿಕಿತ್ಸಾ ವಿಭಾಗ [ಒಫ್ತಲ್ಮಾಲಜಿ]ದ ದ್ವಿತೀಯ ವರ್ಷದ ಕಿರಿಯ ಸ್ಥಾನೀಯ ವೈದ್ಯೆ [ಸೆಕೆಂಡ್ ಇಯರ್ ಜೂನಿಯರ್ ರೆಸಿಡೆಂಟ್] ಡಾ. ಪೂರ್ವಪ್ರಭಾ ಪಾಟೀಲ್ ಅವರು ನ್ಯೂಯಾರ್ಕ್ನಲ್ಲಿ ಇತ್ತೀಚೆಗೆ ಜರಗಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿನ ಮಕ್ಕಳು ಮತ್ತು ಯುವಸಮುದಾಯಕ್ಕಾಗಿ ಇರುವ ಪ್ರಮುಖ ಸಮೂಹ [ಯುನೈಟೆಡ್ ನೇಶನ್ಸ್ ಮೇಜರ್ ಗ್ರೂಪ್ ಫಾರ್ ಚಿಲ್ಡ್ರನ್ ಆ್ಯಂಡ್ ಯೂತ್- ಯುಎನ್ ಎಂಜಿಸಿವೈ- UN MGCY] ವನ್ನು ಜಾಗತಿಕ ವೇದಿಕೆಯಲ್ಲಿ ಪ್ರತಿನಿಧಿಸುವ ಮೂಲಕ ಮಹತ್ತ್ವದ ಸಾಧನೆ ಮಾಡಿದ್ದಾರೆ. ಈ ಸಭೆಯಲ್ಲಿ 193 ದೇಶಗಳು ಶಾಂತಿ, ಭದ್ರತೆ, ಹವಾಮಾನ ವೈಪರೀತ್ಯ, ಮಾನವ ಹಕ್ಕುಗಳು ಸೇರಿದಂತೆ ಪ್ರಮುಖ ಪ್ರಚಲಿತ ಜಾಗತಿಕ ಸವಾಲುಗಳ ಬಗ್ಗೆ ಚರ್ಚಿಸಲು ಸಭೆ ಸೇರಿದ್ದವು.
ಡಾ. ಪೂರ್ವಪ್ರಭಾ ಪಾಟೀಲ್ ಅವರು ಸೆಪ್ಟೆಂಬರ್ 20 ರಂದು ಜರಗಿದ ‘ಭವಿಷ್ಯದ ಕ್ರಿಯಾಶೀಲತೆಯ ಯುಎನ್ಜಿಎ ಸಮಾವೇಶ’ [ಯುಎನ್ಜಿಎ ಸಮ್ಮಿಟ್ ಆಫ್ ದ ಪ್ಯೂಚರ್ ಆ್ಯಕ್ಷನ್ ಡೇ] ದಲ್ಲಿ ಅಂತಾರಾಷ್ಟ್ರೀಯ ಸಮತೆ ಮತ್ತು ಐಕಮತ್ಯಕ್ಕೆ ಸಂಬಂಧಿಸಿದ ಕಲಾಪದ ಸಮನ್ವಯಕಾರರಾಗುವ ಗೌರವವನ್ನು ಪಡೆದಿದ್ದರು. ಈ ಕಲಾಪವು ಪ್ರತಿಷ್ಠಿತ ಟ್ರಸ್ಟೀಶಿಪ್ ಕೌನ್ಸಿಲ್ನಲ್ಲಿ ಜರಗಿದ್ದು ಬಹರೈನ್, ಸ್ಪೆಯಿನ್, ಡಾಮಿನಿಕನ್ ಗಣತಂತ್ರದ ಸಚಿವರು ಸೇರಿದಂತೆ ಜಾಗತಿಕ ಮಟ್ಟದ ನಾಯಕರು ಭಾಗವಹಿಸಿದ್ದರು. ಯುವಸಮುದಾಯದ ತೊಡಗಿಸಿಕೊಳ್ಳುವಿಕೆ, ಆರ್ಥಿಕ ಸಬಲೀಕರಣ, ಹಸಿರು ಕೌಶಲ, ನಾಗರಿಕ ತೊಡಗಿಸಿಕೊಳ್ಳುವಿಕೆ, ಸ್ವಾಸ್ಥ್ಯ ಹೀಗೆ ಹಲವು ವಿಷಯಗಳು ಈ ಸಭೆಯಲ್ಲಿ ಚರ್ಚೆಗೊಳಗಾಗಿದ್ದವು.
ಈ ಸಂವಾದ ಕಲಾಪವಲ್ಲದೆ, ಡಾ. ಪಾಟೀಲ್ ಅವರು ಯುಎನ್ಜಿಎ ಯ ಹಲವು ಉನ್ನತಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಭಾಷಣವನ್ನು ಆಲಿಸುವ ಅವಕಾಶವನ್ನು ಕೂಡ ಪಡೆದಿದ್ದರು.
ಮಾಹೆಯ ಆರೋಗ್ಯ ವಿಜ್ಞಾನಗಳ ವಿಭಾಗದ ಸಹ-ಉಪಕುಲಪತಿಗಳಾದ ಡಾ. ಶರತ್ ರಾವ್ ಅವರು ಡಾ. ಪೂರ್ವಪ್ರಭಾ ಪಾಟೀಲ್ ಅವರನ್ನು ಅಭಿನಂದಿಸುತ್ತ, ‘ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಡಾ. ಪೂರ್ವಪ್ರಭಾ ಅವರ ಪ್ರಾತಿನಿಧ್ಯವು ಜಾಗತಿಕ ಮಟ್ಟದಲ್ಲಿ ವಿಪುಲ ಅವಕಾಶಗಳು ಮುಕ್ತವಾಗಿರುವುದನ್ನು ಸೂಚಿಸುತ್ತದೆ. ಯುವಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ಸುಸ್ತಿರ ಅಭಿವೃದ್ದಿಗೆ ಸಂಬಂಧಿಸಿದ ಅವರ ಮುಂದಾಳತ್ವ ಮತ್ತು ಬದ್ಧತೆಯು ಮಾಹೆಯು ಎತ್ತಿಹಿಡಿಯುವ ಮೌಲ್ಯಕ್ಕೆ ಅನುಗುಣವಾಗಿದೆ. ಡಾ. ಪೂರ್ವಪ್ರಭಾ ಪಾಟೀಲ್ ಅವರ ಸಾಧನೆಯ ಬಗ್ಗೆ ನಮಗೆಲ್ಲರಿಗೆ ಹೆಮ್ಮೆಯಾಗಿದೆ ಮತ್ತು ಅವರು ಇನ್ನೂ ಹೆಚ್ಚಿನ ಸಾಧನೆಯನ್ನು ದಾಖಲಿಸಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.
ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ. ಪದ್ಮರಾಜ ಹೆಗ್ಡೆ ಅವರು ಡಾ. ಪೂರ್ವಪ್ರಭಾ ಪಾಟೀಲರನ್ನು ಅಭಿನಂದಿಸುತ್ತ, ‘ಜಾಗತಿಕ ಮಟ್ಟದಲ್ಲಿ ಕೆಎಂಸಿಯ ಸ್ಥಾನೀಯ ವೈದ್ಯ [ರೆಸಿಡೆಂಟ್] ರು ಪ್ರಧಾನಪಾತ್ರ ವಹಿಸಿರುವುದು ಕೆಎಂಸಿ ಹೆಮ್ಮೆಪಡುವ ಸಂಗತಿಯಾಗಿದೆ. ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಧನಾತ್ಮಕ ಬದಲಾವಣೆಯನ್ನು ತರುವ ಕುರಿತ ತೀವ್ರವಾದ ಒಲವು-ಇವುಗಳಿಂದಾಗಿ ಡಾ. ಪಾಟೀಲ್ ಅವರಿಗೆ ಈ ಮಹತ್ತರ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ. ಯುವಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿ ಜಾಗತಿಕ ಮಟ್ಟದಲ್ಲಿ ಡಾ. ಪಾಟೀಲ್ ನೀಡಿರುವ ಕೊಡುಗೆ ಅನ್ಯರಿಗೆ ಸ್ಫೂರ್ತಿದಾಯಕವಾಗಿದೆ. ಅವರ ಬಗ್ಗೆ ನಮಗೆ ಅಭಿಮಾನವೆನಿಸುತ್ತದೆ’ ಎಂದರು.
ಡಾ. ಪೂರ್ವಪ್ರಭಾ ಪಾಟೀಲ್ ಅವರು ಯುಎನ್ಜಿಎ ಯ ಸಮಾವೇಶದಲ್ಲಿ ಭಾಗವಹಿಸಿದ್ದು ಜಾಗತಿಕ ನೀತಿಗಳನ್ನು ರೂಪಿಸುವಲ್ಲಿ ಮತ್ತು ಜಗತ್ತಿನಾದ್ಯಂತ ಸುಸ್ಥಿರ ಬದಲಾವಣೆಯನ್ನು ತರುವಲ್ಲಿ ಯುವ ಸಮುದಾಯದ ಪಾಲ್ಗೊಳ್ಳುವಿಕೆ ಅಧಿಕವಾಗುತ್ತಿರುವುದರ ಸೂಚಕವಾಗಿದೆ. ಜಾಗತಿಕ ಮಟ್ಟದ ನಾಯಕರ ಜೊತೆಗೆ ಡಾ. ಪಾಟೀಲ್ ಅವರ ದನಿಯು ಸರ್ವರಿಗೂ ಒಳಗೊಳ್ಳುವಿಕೆ [ಇನ್ಕ್ಲೂಸಿವ್] ಮತ್ತು ನ್ಯಾಯಸಮ್ಮತ [ಇಕ್ವಿಟೇಬಲ್] ವಾದ ಭವಿಷ್ಯವನ್ನು ಕಟ್ಟುವಲ್ಲಿ ನೀಡಿರುವ ಕೊಡುಗೆಯಾಗಿದೆ.