ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ AI ಅಥವಾ ಕೃತಕ ಬುದ್ಧಿಮತ್ತೆ ಎನ್ನುವುದು ಕಂಪ್ಯೂಟರ್ ಸಿಸ್ಟಮ್ ಮತ್ತು ಯಂತ್ರಗಳಲ್ಲಿ ಮಾನವರಂತೆ ವರ್ತಿಸುವ, ನಿರ್ಧಾರಗಳನ್ನು ತೆಗೆದುಕೊಳ್ಳುವ, ಯೋಚನೆಗಳನ್ನು ಮಾಡುವ, ಭಾಷೆಗಳನ್ನು ಅರ್ಥೈಸಿಕೊಳ್ಳುವ, ಸಮಸ್ಯೆಗಳನ್ನು ಬಗೆಹರಿಸುವ, ದೃಶ್ಯ ಸಂಗ್ರಹಿಸಿಕೊಳ್ಳುವ ಹಾಗೂ ಪ್ರತಿಕ್ರಿಯೆಗಳನ್ನು ನೀಡುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಎಂದರ್ಥ. ಇನ್ನೂ ಸರಳವಾಗಿ ಹೇಳಬೇಕೆಂದರೆ ಯಂತ್ರಗಳನ್ನು ಮಾನವರಂತೆ ವರ್ತಿಸುವ ಹಾಗೆ ಮಾಡುವ ವಿಜ್ಞಾನ ಮತ್ತು ತಂತ್ರಜ್ಞಾನವಾಗಿದೆ. ಇದರಿಂದ ಮಾನವ ಸಮಾಜಕ್ಕೆ ಅನುಕೂಲ ಮತ್ತು ಅನಾನುಕೂಲಗಳು ಇವೆ. ಈಗ AI ನಮ್ಮ ನಿಜ ಜೀವನದಲ್ಲಿ ಕಾಲಿಟ್ಟಿದೆ.
ಕೃತಕ ಬುದ್ಧಿಮತ್ತೆಯನ್ನು ಬಳಸುವುದರಿಂದ ನಮ್ಮ ಕೆಲಸದಲ್ಲಿ ನಿಖರತೆ, ದಕ್ಷತೆ, ವೇಗ ಹೆಚ್ಚಿದೆ. ವೆಚ್ಚ ಮತ್ತು ಸಮಯ ಉಳಿಯಲಿದೆ. ಈಗಾಗಲೇ ದೃಶ್ಯ ಮಾಧ್ಯಮದಲ್ಲಿ ನಿರೂಪಣೆಯ ಸ್ಥಾನದಲ್ಲಿ AI ಕಾಣಿಸಿಕೊಂಡಿದೆ. ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿ ಕೂಡ ನೀವು ನೋಡಿರುತ್ತೀರಿ. AI ಸ್ವತಃ ಮಾಹಿತಿ ಕಲೆ ಹಾಕಿ ಸುದ್ದಿ ನಿರೂಪಣೆಯನ್ನು ಮಾಡಿದೆ. AI ಗಳನ್ನು ಮೊದಲಿನಿಂದಲೂ Google ನಲ್ಲಿ ಹಾಗೂ ಜಗತ್ತಿನ ನಂ.1 ಸ್ವಯಂ ಚಾಲಿತ ಕಾರು ಕಂಪನಿ ಯಾದ Tesla ನಲ್ಲೂ ಆಟೋ ಪೈಲೆಟ್ ಆಗಿ ಸೆಲ್ಫ್ ಡ್ರೈವಿಂಗ್ ನಲ್ಲಿ ಬಳಸಿದ್ದಾರೆ. ವೈಯಕ್ತಿಕ ಶಿಪಾರಸುಗಳಲ್ಲೂ ಬಳಸಲಾಗುತ್ತಿದೆ. ಉದಾಹರಣೆಗೆ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್ ಬುಕ್ ಗಳಲ್ಲಿ ನೀವು ನೋಡಿದ ವಿಡಿಯೋ ಅಥವಾ ಆನ್ಲೈನ್ ಶಾಪಿಂಗ್ ಗೆ ಫ್ಲಿಪ್ಕಾರ್ಟ್, ಅಮೆಜಾನ್ ಗಳಲ್ಲಿ ನೀವು ನೋಡಿದ ವಸ್ತುಗಳೇ ನಿಮಗೆ ಮತ್ತೆ ಮತ್ತೆ ಕಾಣಸಿಗುತ್ತವೆ. ಸೇವೆ ನಿರ್ವಹಣೆಗಳಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ, ಮೋಸ ತಡೆಗಟ್ಟುವಿಕೆಯಲ್ಲಿ, ಧ್ವನಿ ನೆರವಿನಲ್ಲಿ AI ಮುಂಚೂಣಿಯಲ್ಲಿದೆ.
ಕೃತಕ ಬುದ್ಧಿಮತ್ತೆ ಬಳಕೆಯಿಂದ ತುಂಬಾ ಉದ್ಯೋಗ ನಷ್ಟವಾಗಲಿದೆ. ಮುಂದಿನ ಹದಿನೈದು ವರ್ಷಗಳಲ್ಲಿ 30% ರಿಂದ 40% ಉದ್ಯೋಗ ಕಿತ್ತುಕೊಳ್ಳಲಿದೆ. AI ಸ್ವತಃ ಸಾಫ್ಟ್ವೇರ್ ಡೆವಲಪ್ ಕೂಡ ಮಾಡಬಹುದು. ಈಗ ಇದನ್ನು ಮನುಷ್ಯರು ಕಂಟ್ರೋಲ್ ಮಾಡುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಮಾನವನಿಗೆ ಹಿಡಿತ ಸಿಗದೇ ಇರೋ ಹಾಗೆ ಮತ್ತೊಂದು AI ತಯಾರು ಮಾಡುವ ಶಕ್ತಿ ಈ AI ಗಳಿಗಿದೆ. ಇದು ಮಾನವ ಕುಲಕ್ಕೆ ಆಪತ್ತು ತರಬಹುದು. ಇದನ್ನು ಬಳಸಿ ಶತ್ರು ರಾಷ್ಟ್ರದ ರಕ್ಷಣಾ ಕಾರ್ಯತಂತ್ರಗಳನ್ನು ಕದ್ದು ಮಾಹಿತಿ ಕಲೆಹಾಕಿ ಯುದ್ಧ ಮಾಡಿದರೆ ಇನ್ನಷ್ಟು ಅಪಾಯಕಾರಿ ಆಗಬಹುದು. ಈ ರೀತಿ ಒಂದು ಹೊಸ ಶಸ್ತ್ರಾಸ್ತ್ರ ಪೈಪೋಟಿಯಾಗಿ ಕೂಡ ಬದಲಾದರೂ ಅಚ್ಚರಿಯೇನಿಲ್ಲ.
ಕೃತಕ ಬುದ್ಧಿಮತ್ತೆನ್ನು ನಾವು ಅತ್ಯಂತ ಜಾಗರೂಕವಾಗಿ ತಯಾರಿ ಮಾಡಬೇಕು. ಆದರೆ ಕೆಲ ಸಂಸ್ಥೆಗಳು ಜಿದ್ದಾಜಿದ್ದಿಗೆ ಬಿದ್ದು ಅತ್ಯಂತ ಬಲಶಾಲಿಯಾದ AI ನ್ನು ತಯಾರಿ ಮಾಡಿ ಬಳಕೆಗೆ ಬಿಡುವ ಪ್ರಯತ್ನ ಮಾಡಿದೆ. ಅದನ್ನು ಸೃಷ್ಟಿಸಿದವರಿಗೂ ಅದರ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗದ ಹಂತಕ್ಕೆ ತಲುಪಿದೆ. ವ್ಯಕ್ತಿಯುಕ್ತವಾಗಿ ವರ್ತಿಸಿದರೆ ಅದನ್ನು ಸರಿಪಡಿಸುವುದು ಕಷ್ಟ ಸಾಧ್ಯವಾಗಿದೆ. ಕೃತಕ ಬುದ್ಧಿಮತ್ತೆಗಳು ಭವಿಷ್ಯದಲ್ಲಿ ಸಮಾಜದ ಮೇಲೆ ಜೊತೆಗೆ ಮನುಕುಲಕ್ಕೆ ಗಂಭೀರ ಅಪಾಯ ಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ.