ಕರ್ನಾಟಕದಲ್ಲಿ ಅತೀ ದೊಡ್ಡ ಐಫೋನ್ ಉತ್ಪಾದನಾ ಘಟಕ ಆರಂಭಗೊಳ್ಳುತ್ತಿರುವುದು ಸಂತಸ ತರುತ್ತಿದೆ. ಐಫೋನ್ ಉತ್ಪಾದಿಸುತ್ತಿರುವ ಫಾಕ್ಸ್ಕಾನ್ ಕಂಪನಿ, ಹೊಸ ಉತ್ಪಾದನಾ ಘಟಕ ಇನ್ನೇನು ಆರಂಭಿಸಲಿದೆ. ರಾಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದ್ದ ಫಾಕ್ಸ್ಕಾನ್ಗೆ ಇದೀಗ ಹೆಚ್ಚುವರಿ 100 ಏಕರೆ ಭೂಮಿ ನೀಡಲಾಗಿದೆ. ಈ ಸಂಬಂಧ ಫಾಕ್ಸ್ಕಾನ್ ಸಿಇಒ ಬ್ರ್ಯಾಂಡ್ ಚೆಂಗ್, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್, ಐಟಿ ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ.
ಫಾಕ್ಸ್ಕಾನ್ ಬರೋಬ್ಬರಿ 8,800 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 300 ಏಕರೆ ಭೂಮಿ ನೀಡುವ ಕುರಿತು ಈ ಮೊದಲು ಒಪ್ಪಂದ ಮಾಡಲಾಗಿತ್ತು. ಆದರೆ ಇದೀಗ ಸಿಎಂ ಸಿದ್ದರಾಮಯ್ಯ, ತುಮಕೂರಿನ ಜಪಾನೀಸ್ ಇಂಡಸ್ಟ್ರೀಯಲ್ ಏರಿಯಾ ಬಳಿ 100 ಏಕರೆ ಭೂಮಿ ನೀಡುವುದಾಗಿ ಹೇಳಿದ್ದಾರೆ. ಫಾಕ್ಸ್ಕಾನ್ ಕಂಪನಿಗೆ ಸರ್ಕಾರದಿಂದ ಎಲ್ಲಾ ನೆರವು ನೀಡಲಾಗುತ್ತದೆ. ಆರಂಭಿಕ ಹಂತದಲ್ಲಿ ಮಾನವ ಸಂಪೂನ್ಮೂಲಗಳ ಬಳಕೆಗೆ ಸರ್ಕಾರ ನೆರವು ನೀಡಲಿದೆ. ಕರ್ನಾಟಕದಲ್ಲಿ ಅತೀ ದೊಡ್ಡ ಐಫೋನ್ ಉತ್ಪಾದನಾ ಘಟಕ ತಲೆ ಎತ್ತಲಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ಇಷ್ಟೇ ಅಲ್ಲ ಬೆಂಗಳೂರಿನಿಂದ ಹೊರ ಪ್ರದೇಶಗಳ ಅಭಿವೃದ್ದಿಗೆ ಇದು ಅತ್ಯಂತ ಮುಖ್ಯವಾಗಿದೆ ಎಂದು ಸಚಿವ ಎಂಬಿ ಪಾಟೀಲ್ ಭರವಸೆಯ ಮಾತುಗಳನ್ನು ಆಡಿದ್ದಾರೆ.
ತೈವಾನ್ ಮೂಲದ ಐಫೋನ್ ಉತ್ಪಾದಕ ಕಂಪನಿ ‘ಫಾಕ್ಸ್ಕಾನ್’ ಚೀನಾ ಜೊತೆ ಮುನಿಸಿಕೊಂಡಿದೆ. ಇದರ ಲಾಭ ಭಾರತ ಹಾಗೂ ಕರ್ನಾಟಕ್ಕೆ ಸಿಗಲು ಸಾಧ್ಯವಾಯಿತು. ವಿಶ್ವದ ಅತಿ ದೊಡ್ಡ ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದಕ ಕಂಪನಿ ಆಗಿರುವ ಹಾಗೂ ಐಫೋನ್ಗಳ ಮುಖ್ಯ ಜೋಡಣೆದಾರ ಕಂಪನಿ ಆಗಿರುವ ಫಾಕ್ಸ್ಕಾನ್ ಈಗಾಗಲೇ ಲಂಡನ್ ಷೇರುಪೇಟೆಗೆ ಭಾರತದ ಉತ್ಪಾದನಾ ಘಟಕ ಆರಂಭ ಕುರಿತು ಮಾಹಿತಿ ನೀಡಿದೆ.
ಕಳೆದ ಮಾರ್ಚ್ ನಲ್ಲಿ ಕರ್ನಾಟಕ ಸರ್ಕಾರ ಹಾಗೂ ಫಾಕ್ಸ್ಕಾನ್ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿದ್ದವು. ಕರ್ನಾಟಕದಲ್ಲಿ 8 ಸಾವಿರ ಕೋಟಿ ರೂ. ಹೂಡಿಕೆ ಮಾಡಿ ಐಫೋನ್ ಉತ್ಪಾದನಾ ಘಟಕ ಸ್ಥಾಪಿಸಲು ಒಪ್ಪಂದ ಏರ್ಪಟ್ಟಿತ್ತು. ಇದರಿಂದ ಗರಿಷ್ಠ 1 ಲಕ್ಷ ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಜನರಿಗೆ ಉದ್ಯೋಗ ಕೂಡ ಸಿಗುವ ಸಾಧ್ಯತೆ ಇದೆ.
2024ರ ಏಪ್ರಿಲ್ 1ರ ವೇಳೆಗೆ ಕಂಪನಿಯು ಇಲ್ಲಿ ಉತ್ಪಾದನೆ ಆರಂಭಿಸಿ ಪ್ರಗತಿಯ ದಾರಿ ಹಿಡಿಯಲಿದೆ. ದಿನಕ್ಕೆ 50 ಲಕ್ಷ ಲೀಟರ್ ನೀರು ಬೇಕಾಗುವುದಾಗಿ ಕಂಪನಿ ತಿಳಿಸಿದೆ. ಅಗತ್ಯ ವಿದ್ಯುತ್, ನೀರು ಪೂರೈಕೆ, ರಸ್ತೆ ಸಂಪರ್ಕ ಇತ್ಯಾದಿ ಮೂಲಸೌಕರ್ಯಗಳನ್ನು ಸರ್ಕಾರ ಒದಗಿಸಲಿದೆ. ಕಂಪನಿಯ ಸಿಬ್ಬಂದಿಗೆ ಬೇಕಾಗುವ ಕೌಶಲ ತರಬೇತಿ ಕೊಟ್ಟು ಸರ್ಕಾರದ ವತಿಯಿಂದ ಅರ್ಹರಿಗೆ ಅವಕಾಶ ನೀಡಿ ಮಾನವ ಸಂಪನ್ಮೂಲ ಲಭ್ಯವಾಗಿಸಲು ಒತ್ತು ಕೊಡುವುದಾಗಿ ಸಚಿವರು ತಿಳಿಸಿದ್ದಾರೆ.