ಇಂದಿನ ಯುವಜನತೆ ದೇವಸ್ಥಾನಗಳಲ್ಲಿ ರೀಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ದೇವಸ್ಥಾನದ ಪಾವಿತ್ರ್ಯತೆಗೆ ದಕ್ಕೆ ತರುತ್ತಿದ್ದಾರೆ ಎಂಬ ಆರೋಪವು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ಕೆಲವು ದಿನಗಳ ಹಿಂದೆ ಉತ್ತರಾಖಂಡ್ನ ಪ್ರಸಿದ್ಧ ಕೇದಾರನಾಥ ದೇವಸ್ಥಾನದ ಬಳಿ ಯುವತಿಯೊಬ್ಬರು ತನ್ನ ಪ್ರಿಯಕರನಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ಬಗ್ಗೆ ಪರ ವಿರೋಧ ಚರ್ಚೆಗಳು ಆರಂಭವಾದ ನಂತರ, ಘಟನೆ ಕುರಿತು ದೇವಸ್ಥಾನ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಪೊಲೀಸರಿಗೆ ಪತ್ರಬರೆದ ಆಡಳಿತ ಮಂಡಳಿ:
ಬದರಿ-ಕೇದಾರನಾಥ ದೇವಾಲಯ ಸಮಿತಿಯು ಪೊಲೀಸರಿಗೆ ಪತ್ರ ಬರೆದಿದ್ದು, ಇಂತಹ ವಿಡಿಯೋಗಳನ್ನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿದೆ. ಯೂಟ್ಯೂಬ್ಗಳು ಮತ್ತು ಇನ್ಸ್ಟಾಗ್ರಾಮ್ನಲ್ಲಿ ಹೆಸರು ಗಳಿಸಿದವರು ಕೇದಾರನಾಥ ದೇವಾಲಯದ ಬಳಿ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಇದರಿಂದ ಭಾರತ ಮತ್ತು ವಿದೇಶಗಳಲ್ಲಿನ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ.
ಇಂತಹ ವಿಡಿಯೋಗಳು ಕೇದಾರನಾಥಕ್ಕೆ ಭೇಟಿ ನೀಡುವ ಭಕ್ತರ ನಂಬಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಚಂದ್ರ ತಿವಾರಿ ಅವರು ಧಾರ್ಮಿಕ ಭಾವನೆಗಳಿಗೆ ವಿರುದ್ಧವಾದ ಯೂಟ್ಯೂಬ್ ಶಾರ್ಟ್ಸ್ ಮತ್ತು ರೀಲ್ಗಳನ್ನು ರಚಿಸುವ ವ್ಯಕ್ತಿಗಳ ಮೇಲೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ಭಕ್ತರ ಮೊಬೈಲ್ ಹ್ಯಾಂಡ್ಸೆಟ್ಗಳನ್ನು ಠೇವಣಿ ಮಾಡಬಹುದಾದ ಕ್ಲೋಕ್ ರೂಮ್ ಅನ್ನು ಸ್ಥಾಪಿಸಲು ಯೋಜನೆ ರೂಪಿಸುದಾಗಿ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ನೆಟ್ಟಿಗರ ಪ್ರತಿಕ್ರಿಯೆ:
ಮದುವೆ ಪ್ರಸ್ತಾಪಕ್ಕೆ ದೇವಸ್ಥಾನವೇ ಸರಿಯಾದ ಸ್ಥಳವೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಇದರಲ್ಲಿ ಏನ್ನೂ ತಪ್ಪಿಲ್ಲ ಎಂದಿದ್ದಾರೆ. ಆದರೆ, ಬಹಳಷ್ಟು ಮಂದಿ ಇದು ದೇವಾಲಯಕ್ಕೆ ಮಾಡಿದ ಅಗೌರವ. ಇಂತಹ ಕ್ರಮಗಳಿಂದ ಕೇದಾರನಾಥ ದೇಗುಲದ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಎಂದು ಟೀಕಿಸಿದ್ದಾರೆ.
ಎಲ್ಲಾ ಮುಖ್ಯ ದೇವಾಲಯಗಳಲ್ಲಿ ಸ್ಮಾರ್ಟ್ಫೋನ್ ನಿಷೇಧಿಸುವುದು ಇದೇ ಕಾರಣಕ್ಕೇ. 20 ಕಿ.ಮೀ ಅಂತರದಲ್ಲಿ ಬೇಸಿಕ್ ಮೊಬೈಲ್ ಬಳಸಲಷ್ಟೇ ಅವಕಾಶ ಕೊಟ್ಟರೆ ಜನಸಂದಣಿ ಸಮಸ್ಯೆಯನ್ನು ನಿವಾರಿಸಬಹುದು ಎಂದು ನಟ್ಟಿಗರೊಬ್ಬರು ಹೇಳಿದ್ದಾರೆ.
ಇನ್ನೊಬ್ಬ ನೆಟ್ಟಿಗರು ಈ ವಿಡಿಯೋದಲ್ಲಿ ನನಗೇನೂ ತಪ್ಪು ಕಾಣಲಿಲ್ಲ, ಬದಲಾಗಿ ಇದು ಬಹಳ ಸುಂದರವಾಗಿದೆ ಎನ್ನಿಸಿತು. ಭಾರತದ ದೇವಾಲಯಗಳಲ್ಲಿ ಮದುವೆಗಳು ನಡೆಯುವುದು ಸಹಜ. ಈ ಜೋಡಿ ಕೇದಾರನಾಥನ ಸನ್ನಿಧಿಯಲ್ಲಿ ಮದುವೆಗೆ ನಿರ್ಧರಿಸಿದೆ. ಅಲ್ಲದೆ ದೇವಸ್ಥಾನದ ವಸ್ತ್ರಸಂಹಿತೆಯನ್ನು ಇವರು ಪಾಲಿಸಿದ್ದಾರೆ. ಈಗಿನ ಕಾಲಮಾನದವರು ಹಿಂದೂ ದೇವರುಗಳಲ್ಲಿ ನಂಬಿಕೆ ಇಟ್ಟಿರುವುದು ಇನ್ನೂ ಸುಂದರ ಅಲ್ಲವೆ? ಎಂದು ಕೇಳಿದ್ದಾರೆ.
ವಿಡಿಯೋದಲ್ಲಿ ಏನಿದೆ?
ವೈರಲ್ ವಿಡಿಯೋದಲ್ಲಿ, ಯೂಟ್ಯೂಬರ್ ಆಗಿರುವ ಯುವತಿ ಕೇದಾರನಾಥ ದೇವಸ್ಥಾನದ ಬಳಿ ತನ್ನ ಗೆಳೆಯನೊಂದಿಗೆ ದೇವರಿಗೆ ಕೈ ಮುಗಿಯುತ್ತಾಳೆ ನಂತರ ಆ ಯುವತಿ ಹಿಂದೆ ಕೈಸನ್ನೆ ಮಾಡುತ್ತಾಳೆ. ಅವಳ ಕೈಗೆ ಪುಟ್ಟ ಡಬ್ಬಿಯೊಂದನ್ನು ಯಾರೋ ರವಾನಿಸುತ್ತಾರೆ. ಬಳಿಕ ಆಕೆ ಮೊಣಕಾಲಿನ ಮೇಲೆ ಕುಳಿತು ಸಿನಿಮೀಯ ಮಾದರಿಯಲ್ಲಿ ತನ್ನ ಗೆಳೆಯನಿಗೆ ಉಂಗುರದೊಂದಿಗೆ ಪ್ರಪೋಸ್ ಮಾಡುತ್ತಾರೆ. ಸಮೀಪದಲ್ಲಿ ನಡೆಯುತ್ತಿದ್ದ ಜನರು ಆಕೆಯ ಪ್ರಪೋಸಲ್ ನೋಡಿ ಆಶ್ಚರ್ಯಪಟ್ಟಿದ್ದಾರೆ ಮತ್ತು ಕೆಲವರು ಅದನ್ನು ತಮ್ಮ ಫೋನ್ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ.
ನನ್ನ ಕನಸು ನನಸಾದ ದಿನವಿದು. ನಾನು ಒಂದು ತಿಂಗಳಿನಿಂದ ಈ ದಿನಕ್ಕಾಗಿ ತಯಾರಿ ನಡೆಸಿದ್ದೆ. ಸಮುದ್ರ ಮಟ್ಟದಿಂದ 11,750 ಅಡಿ ಎತ್ತರದಲ್ಲಿರುವ ಕೇದಾರನಾಥನ ಸನ್ನಿಧಿಯಲ್ಲಿ ನಾನು ಮೊಣಕಾಲುಗಳನ್ನೂರಿ ನನ್ನ ಸಂಗಾತಿಯೆದುರು ಅಧಿಕೃತವಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದೇನೆ. ಈ ಸ್ಥಳವು ಶುದ್ಧವೂ ಮತ್ತು ಮಾಂತ್ರಿಕತೆಯಿಂದ ಕೂಡಿದೆ. ಬೋಲೇನಾಥನ ಆಶೀರ್ವಾದದೊಂದಿಗೆ” ಎಂದು ಯೂಟ್ಯೂಬರ್ ಆಗಿರುವ ಈ ಯುವತಿ ಒಕ್ಕಣೆ ಬರೆದು ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾಳೆ.