ಗುಂಡಮ್ಮ…
ನಾವು ಬೋಟ್ ಮೇಲೆ ಕೂತು ಗಂಗಾ ಆರತಿ ನೋಡಲು ಹೊರಟೆವು. ಅಂಬಿಗ ದಾರಿಯುದ್ದಕ್ಕೂ ಸಿಕ್ಕಿದ ಘಾಟ್ ಗಳ ಹೆಸರುಗಳನ್ನು ,ಕಟ್ಟಿದವರ ಬಗ್ಗೆ ಹೇಳುತ್ತಾ ಹೋದ. ಯಾವುದೂ ಮನಸ್ಸಿನಲ್ಲಿ ಉಳಿದಿಲ್ಲ. ಉಳಿದವು ಕೇವಲ ಎರಡು ಘಾಟ್ ಗಳು ಮಾತ್ರ. ಅವು ಹರಿಶ್ಚಂದ್ರ ಘಾಟ್ ಮತ್ತು ಮಣಿಕರ್ಣಿಕಾ..
ಎರಡೂ ಕಡೆ ಹೆಣಗಳನ್ನು ಸುಡುತ್ತಾರೆ..ಅಂದ್ರೆ ರುದ್ರಭೂಮಿಗಳು..ಅನ್ನಬಹುದೇನೋ..ಇಲ್ಲಿ ಒಂದೊಂದು ಕಡೆ ಇಪ್ಪತ್ತರಿಂದ ಇಪ್ಪತ್ತೈದು ಹೆಣಗಳನ್ನು ಒಮ್ಮಲೆ ಸುಡಬಹುದು. ಅಂದರೆ ಒಮ್ಮೆಲೆ ಐವತ್ತು ಶವಸಂಸ್ಕಾರ ಮಾಡಬಹುದು. ಅಷ್ಟು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದಾರಂತೆ. ಹರಿಶ್ಚಂದ್ರ ಘಾಟ್ ಲ್ಲಿ ವಿದ್ಯುತ್ ಚಿತಾಗಾರವೂ ಇದೆಯಂತೆ. ಆದರೆ ಹೆಚ್ಚಿನವರು ಅದನ್ನು ಇಷ್ಟಪಡುವುದಿಲ್ಲವಂತೆ. ಹಲವಾರು ಬೋಟ್ ಗಳನ್ನು ಸಾಲಾಗಿ ಇಟ್ಟಿದ್ದರು ಅವುಗಳಲ್ಲಿ ಸೌದೆಯ ರಾಶಿಗಳನ್ನು ಒಟ್ಟಿದ್ದರು. ಈ ಮೊದಲು ಗಂಗೆಯಲ್ಲಿ ಅರೆಸುಟ್ಟ ಹೆಣಗಳನ್ನು ತೇಲಿಸಿ ಬಿಟ್ಟು..ಗಂಗೆ ನೋಡಲು ಅಸಹ್ಯವಾಗಿಯೂ, ಭಯಾನಕವಾಗಿ ಕಾಣುತ್ತಿದ್ದಳಂತೆ. ಈ ಹಿಂದೆ ಕಾಶಿಗೆ ಹೋಗಿ ಮರಳಿ ಬಂದವರು ಹೇಳಿದ್ದನ್ನೂ ಕೇಳಿದ್ದೆ. ಆದರೆ ಮೋದಿಯವರು ಪ್ರಧಾನಿಯಾದ ಮೇಲೆ ಗಂಗೆಯ ಶುದ್ಧೀಕರಣದ ಹೆಸರಲ್ಲಿ ಗಂಗೆ ಶುಭ್ರವಾಗಿ ಹರಿಯುತ್ತಿದ್ದಾಳೆ. ಹಾಗಾಗಿ ನಮಗೆ ಒಂದೇ ಒಂದು ಹೆಣ ಕಾಣಲಿಲ್ಲ.. ವಾಸನೆಯೂ ಬರುತ್ತಿರಲಿಲ್ಲ. ಹೆಣಗಳನ್ನು ಸುಡುವುದು ಮಾತ್ರ ಕಾಣುತ್ತಿತ್ತು. ಕಾಶಿಗೆ ಬಂದು ಸಾಯಲು ಅಪೇಕ್ಷೆ ಪಡುವವರು ತುಂಬಾ ಜನ ಭಾರತದಲ್ಲಿ ಮಾತ್ರವಲ್ಲ..ವಿದೇಶದಲ್ಲೂ ಇದ್ದಾರಂತೆ. ತಮ್ಮ ಸಾವಿನ ಬಗ್ಗೆ ಮೊದಲೇ ಸೂಚನೆ ಸಿಕ್ಕಿದವರಂತೂ ಇಲ್ಲಿ ಮನೆ,ರೂಂ ಮಾಡಿಕೊಂಡು ಸಾವನ್ನು ಕಾಯುತ್ತಾರಂತೆ. ಇನ್ನು ಕೆಲವರು ಸತ್ತವರ ಅಪೇಕ್ಷೆಯಂತೆ ಸತ್ತ ಮೇಲೆ ಮೇಲೆ ವಿಮಾನದಲ್ಲಿ ಹೆಣ ತಂದು ಸುಡುತ್ತಾರಂತೆ. ಗಂಗೆಯ ತಟದಲ್ಲಿ ಸುಟ್ಟು, ಅಸ್ಥಿ ಮತ್ತು ಚಿತಾಭಸ್ಮವನ್ನು ಗಂಗೆಯಲ್ಲಿ ವಿಲೀನಗೊಳಿಸಿದರೆ ಪಾಪ ಕಳೆದು ನೇರ ಮುಕ್ತಿಗೆ ಹೋಗುತ್ತಾರೆ. ಪುನರ್ಜನ್ಮದಿಂದಲೂ ಮುಕ್ತಿ ಹೊಂದುವರೆಂಬ ನಂಬಿಕೆ ಜನರದ್ದು. ಈ ರೀತಿ ಬಂದವರ,ಸತ್ತವರ,ಸಾಯದವರ ಕುರಿತು ಹಲವಾರು ಘಟನೆಗಳನ್ನು ಅಂಬಿಗ ಹಾಗೂ ಅವರ ಸಹಾಯಕರು ಹೇಳಿದರು. ಕೇಳುತ್ತಾ ಕೇಳುತ್ತಾ ಗಂಗಾ ಆರತಿ ಆಗುವ ದಶಾಶ್ವಮೇಧ ಘಾಟ್ ಗೆ ಬಂದು ತಲುಪಿದೆವು. ರಥೋತ್ಸವದ ದಿನ,ಲಕ್ಷ ದೀಪೋತ್ಸವದ ದಿನ ನೂರಾರು ಕಾರುಗಳು,ಸಾವಿರಾರು ಜನರು ಇರುತ್ತಾರಲ್ವಾ..ಹಾಗೆಯೇ ಇಲ್ಲಿ ನೂರಾರು ಬೋಟ್ ಗಳು ಗಂಗೆಯ ಮೇಲೆ ತೇಲುತ್ತಿದ್ದವು. ಆ ಬೋಟ್ ಗಳಲ್ಲಿ ಜನ ತುಂಬಿದ್ದರು. ಆರತಿ ನಡೆಯುವಲ್ಲಿಯೂ ಸಾವಿರಾರು ಜನ ಸೇರಿದ್ದರು. ಬಾದಾಮಿ ಎಲೆಗಳಿಂದ ದೊನ್ನೆ ತರಹ ಮಾಡಿ ಅದರಲ್ಲಿ ದೀಪ ಇಟ್ಟು ,ಹೂವಿಟ್ಟು ಮಾರುತ್ತಿದ್ದರು. ಅದನ್ನು ಎಲ್ಲರೂ ತೆಗೆದುಕೊಂಡು ಉರಿಸಿ ಗಂಗೆಯಲ್ಲಿ ತೇಲಲು ಬಿಡುತ್ತಿದ್ದರು. ಹೆಚ್ಚಿನವರು ಹರಕೆ ಹೊತ್ತವರಂತೆ. ನಾನೂ ಐದು ದೀಪಗಳನ್ನು ತೆಗೆದುಕೊಂಡು ದೀಪ ಹತ್ತಿಸಿ ತೇಲಲು ಬಿಟ್ಟೆ. ಆದರೆ ‘ಭಕ್ತಿಯಿಂದ ಅಲ್ವೇನೋ’ ಎಂದು ಅನಿಸುತ್ತಿದೆ. ಆ ದೀಪಗಳು ನೀರಿನಲ್ಲಿ ತೇಲುವಾಗ ನನಗೆ ತುಂಬಾ ಚಂದ ಕಾಣಿಸುತ್ತಿತ್ತು.. ಮನಸ್ಸಿಗೆ ಸಂತೋಷವಾಗುತ್ತಿತ್ತು. ಇನ್ನೊಂದು ಕಾರಣ ಆ ಎಂಟು-ಹತ್ತು ವರ್ಷದ ಮಕ್ಕಳು “ತಗೊಳ್ಳಿ..ತಗೊಳ್ಳಿ” ಎನ್ನುವಾಗ ಅದೂ ಕೇವಲ ಹತ್ತು ರೂಪಾಯಿಗೆ ಬೇಡಾ ಎನ್ನಲು ಮನಸ್ಸು ಬರುತ್ತಿರಲಿಲ್ಲ. ಹೂಗಳನ್ನು ತಂದ ಪ್ಲಾಸ್ಟಿಕ್ ಕವರ್ ಕೂಡಾ ಇಲ್ಲಿ ತೇಲಿಸಲು ಬಿಡುತ್ತಿರಲಿಲ್ಲ. ಅಂಬಿಗರು ಮತ್ತು ಸಹಾಯಕರು.
ದಡದಲ್ಲೂ ಸಾವಿರಾರು ಜನರು ಸೇರಿದ್ದರು. ಅಲ್ಲಿ ದೀಪಗಳ ಅಲಂಕಾರ ಮಾಡಲಾಗಿತ್ತು. ಬೇರೆ ಯಾವ ಬೆಳಕಿನ ವ್ಯವಸ್ಥೆ ಇರಲಿಲ್ಲ. ಏಳು ರಥದಾರತಿ..ಏಳು ದೀಪಗಳ ಆರತಿಗಳನ್ನು ಕುಣಿಯುತ್ತಾ ಕುಣಿಯುತ್ತಾ ಆರತಿ ಮಾಡುತ್ತಿದ್ದರು. ಮರೆಯಲಾಗದ ದೃಶ್ಯ.. ಅದು. ಗಂಗೆಯ ಮೇಲೆ ಸಾವಿರಾರು ಆರತಿಗಳು ತೇಲುತ್ತಿದ್ದರೆ ದಡದ ಮೇಲೆ ಆರತಿಗಳು ಕುಣಿಯುತ್ತಿದ್ದವು…ಇದು ಪ್ರತಿದಿನದ ದೃಶ್ಯವಂತೆ..
ವಾವ್…ಅಮ್ಮುಣು ಹುಟ್ಟಿದ ಮೇಲೆ ಒಂದು ಸಲವಾದರೂ ಇದನ್ನೆಲ್ಲಾ ನೋಡದಿದ್ದರೆ ಜನ್ಮ ವ್ಯರ್ಥ ಅನಿಸಿತು ಕಂದಾ…😍
ಈ ದಶಾಶ್ವಮೇಧ ಘಾಟ್ನ್ನು ಶಿವ ಕಾಶಿಗೆ ಬರುತ್ತಾನೆಂದು ಬ್ರಹ್ಮ ಅವನ ಸ್ವಾಗತಕ್ಕೆಂದು ಕಟ್ಟಿಸಿದನೆಂದು ಪ್ರತೀತಿ ಇದೆ.
ಮೊದಲು ಗಂಗಾ ಆರತಿ ಈ ಘಾಟ್ ಲ್ಲಿ ಮಾತ್ರ ಇತ್ತು. ಈಗ ಇನ್ನೂ ಮೂರು ಕಡೆ ಸಣ್ಣ ಮಟ್ಟದಲ್ಲಿ ನಡೆಯುತ್ತಿದೆ..
ಆರತಿಯಾದೊಡನೆ ಬೋಟ್ ನಲ್ಲಿ ತೇಲುವ ಆರತಿಗಳನ್ನು ನೋಡುತ್ತಾ ಹಿಂತಿರುಗಿದೆವು. ಬೋಟ್ ಇಳಿದು ರಸ್ತೆಗೆ ಬರುವಾಗ ಸಣ್ಣಗೆ ಮಳೆ ಪ್ರಾರಂಭವಾಯಿತು. ಬೀದಿ ಬದಿಯ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಸರಸರನೆ ಪ್ಲಾಸ್ಟಿಕ್ ಶೀಟ್ ಗಳನ್ನು ಮುಚ್ಚಿದರು. ಹತ್ತು ನಿಮಿಷಕ್ಕೆ ಮಳೆ ನಿಂತಿತು. ಏನೂ ಆಗದವರಂತೆ ಮತ್ತೆ ಪ್ಲಾಸ್ಟಿಕ್ ತೆಗೆದು ವ್ಯಾಪಾರಕ್ಕೆ ಕೂತರು. ಹೆಚ್ಚಿನವರ ಮನೆಯೂ ಅಲ್ಲೇ ಇತ್ತು . ಮೆಟ್ಟಲು,ಜಗಲಿಯೇ ಅವರ ಅಂಗಡಿ ಯಾಗಿತ್ತು.
ಗಲ್ಲಿಗೆ ಎಂಟ್ಹತ್ತು ದೇವಸ್ಥಾನಗಳು. ಎಲ್ಲಾ ಈಶ್ವರನ ಗಣಗಳೇ..ಭೈರವ,ವೀರಭದ್ರ, ನಂದಿ …ಹೀಗೆ..ಹೆಸರುಗಳಿದ್ದವು. ಯಾವುದಕ್ಕೂ ಒಂದು ಸರಿಯಾದ ಆಕಾರವಿಲ್ಲ. ಸುಮಾರಾಗಿ ಲಿಂಗಾಕಾರವಿದ್ದವು. ಆ ಕಲ್ಲುಗಳಿಗೆ ಧಾರಾಳವಾಗಿ ಅರಿಶಿನ,ಕುಂಕುಮ, ಬಟ್ಟೆ,ಹೂವು,ಕೆಲವಕ್ಕೆ ಮುಖವಾಡಗಳ ಅಲಂಕಾರ. “ದೇವಸ್ಥಾನ” ಎಂದರೆ ಹತ್ತು ಅಡಿ ಉದ್ದ,ಆರಡಿ ಅಗಲವಿದ್ದರೆ ಸಾಕು. ಅಲ್ಲೇ ಬೆಂಚೋ,ಕಲ್ಲಿನ ಹಲಗೆಯನ್ನು ಎರಡು ಕಲ್ಲುಗಳ ಮೇಲೆ ಇಟ್ಟು ತೀರ್ಥ ಪ್ರಸಾದ ಕೊಡುವ ವ್ಯವಸ್ಥೆ..
ಹತ್ತು ನಿಮಿಷ ಮಳೆ ನಿಲ್ಲುವ ವರೆಗೆ ಇದನ್ನೆಲ್ಲಾ ಪರಿಶೀಲಿಸುತ್ತಾ ನಿಂತೆ. ಆಟೋದಲ್ಲಿ ಹೋಟೆಲ್ಗೆ ಹೋದೆವು. ಸಮಯ ರಾತ್ರಿ 8-30 ಆಗಿತ್ತು. ಊಟದ ವ್ಯವಸ್ಥೆ ಆಗಿತ್ತು. ಊಟ ಮಾಡಿ ನಮ್ಮ ನಮ್ಮ ರೂಂಗೆ ಹೋಗಿ ಮಲಗುವ ಸಿದ್ಧತೆ ನಡೆಸಿದೆವು.
ಗುಡ್ ನೈಟ್..ಗೊಂಡೀ..ಶುಭರಾತ್ರಿ..