ಭಾನುವಾರ ಎಂದ ತಕ್ಷಣ ನಮಗೆ ಮೊದಲು ನೆನಪಾಗುವುದು, ವಾರದ ರಜೆ ಎಂದು. ಪ್ರತೀ ಶಾಲೆ, ಕಾಲೇಜು, ಕಛೇರಿ ಎಲ್ಲಾ ಕ್ಷೇತ್ರದಲ್ಲೂ ವಿಶ್ರಾಂತಿಗಾಗಿ ಒಂದು ದಿನ ಮೀಸಲಿದ್ದು ಅದು ಭಾನುವಾರದ ದಿನವಾಗಿದೆ.
ಭಾನುವಾರವನ್ನು ಮಾತ್ರ ಯಾಕೆ ರಜಾ ದಿನವನ್ನಾಗಿ ಘೋಷಿಸಲಾಯಿತು? ವಾರದ ಬೇರೆ ಯಾವ ದಿನವೂ ಯಾಕೆ ಈ ರಜಾ ದಿನಗಳಲ್ಲೊಂದಾಗಿ ಅಂಗೀಕರಿಸಲ್ಪಟ್ಟಿಲ್ಲ? ಭಾನುವಾರಕ್ಕಿರುವ ಪ್ರತ್ಯೇಕತೆಯಾದರೂ ಏನು?
ಭಾನುವಾರದ ರಜಾ ದಿನ ಭಾರತಕ್ಕೆ ಬ್ರಿಟಿಷ್ ಆಡಳಿತದ ಉಡುಗೊರೆ. ಈ ರಜೆಯ ಇತಿಹಾಸವನ್ನು ನೋಡುವುದಾದರೆ, ಭಾನುವಾರ ದಿನ ತಮ್ಮ ಪ್ರಾರ್ಥನೆಗಾಗಿ ತೆರಳುತ್ತಿದ್ದ ಬ್ರಿಟಿಷರು, ಭಾನುವಾರದ ದಿನವನ್ನು ತಮ್ಮ ವ್ಯಯಕ್ತಿಕ ಕೆಲಸಕ್ಕಾಗಿ ಮತ್ತು ಧಾರ್ಮಿಕ ಆಚರಣೆಗಾಗಿ ಮುಡಿಪಾಗಿಟ್ಟಿದ್ದರು. ಆದರೆ ಭಾರತೀಯ ಕೆಲಸಗಾರರಿಗೆ ವಾರದ ರಜೆ ಎಂಬ ವಿಶ್ರಾಂತಿ ದಿನವಿರಲಿಲ್ಲ. ವಾರದ ಏಳು ದಿನವೂ ಕೆಲಸಮಾಡುತ್ತಿದ್ದರು.
ಟ್ರೇಡ್ ಯೂನಿಯನ್ ಚಳುವಳಿಯ ಅಂದಿನ ಅಧ್ಯಕ್ಷರಾಗಿದ್ದ ನಾರಾಯಣ ಮೇಘಾಜಿ ಲೋಖoಡೆಯವರ ನೇತೃತ್ವದಲ್ಲಿ ನಡೆದ ಸತತ ಏಳು ವರ್ಷಗಳ ಚಳುವಳಿಯ ಪ್ರಯುಕ್ತ, ಭಾನುವಾರವನ್ನು ರಜಾ ದಿನವಾಗಿ ಬ್ರಿಟಿಷ್ ಸರಕಾರವು ಘೋಷಿಸಿತು. ಇನ್ನು ಭಾರತೀಯ ಕಾನೂನಿನ ಪ್ರಕಾರ ಭಾನುವಾರ ರಜಾ ದಿನ ಘೋಷಿಸಲಾಗಿದೆಯೇ ಎಂದು ಕೇಳಿದರೆ ಇಲ್ಲ ಎಂದಿತ್ತು 2012ರ ಮಾಹಿತಿ ಹಕ್ಕು ಕಾಯಿದೆಯ ವರದಿ.
ಮಾಲ್ಡಿವ್ಸ್, ಇರಾಕ್, ಬಹರೈನ್, ಇರಾನ್ ಎಮೆನ್, ಜೋರ್ಡನ್, ಯು ಎ ಇ, ಕುವೈಟ್, ಇಸ್ರೇಲ್, ಲಿಬ್ಯಾ, ಸಿರಿಯ ಮುಂತಾದ ದೇಶಗಳಲ್ಲಿ ರಜಾ ದಿನ ಭಾನುವಾರ ಅಲ್ಲ ಎಂಬುದು ಗಮನಾರ್ಹ