ಮನೆಯೇ ಮೊದಲ ಪಾಠಶಾಲೆಯಾಗಿದ್ದರಿಂದ ಮಕ್ಕಳಿಗೆ ಬೇಕಾಗಿರುವಂತ ನೀತಿ ಪಾಠಗಳನ್ನು ಮನೆಯಲ್ಲಿರುವ ಹಿರಿಯರೇ ಹೇಳಿಕೊಡಬೇಕಾಗುತ್ತದೆ. ಹಾಗೆಯೇ ಮಕ್ಕಳಿಗೆ ಯಾವ ರೀತಿಯ ಸ್ವಾತಂತ್ರ್ಯವನ್ನು ನೀಡಬೇಕು ಎಂದು ಪೋಷಕರು ತಿಳಿದುಕೊಂಡಿರಬೇಕು ಮತ್ತು ಯಾವ ರೀತಿಯ ಶಿಸ್ತಿನಿಂದ ಮಕ್ಕಳನ್ನು ಬೆಳೆಸಬೇಕೆಂಬ ಪರಿಜ್ಞಾನವನ್ನು ಕೂಡ ಇವರು ಹೊಂದಿದ್ದು ಮಕ್ಕಳನ್ನು ಸರಿದಾರಿಯಲ್ಲಿ ಬೆಳೆಸಬೇಕು.
ನಿದ್ದೆ, ಆಹಾರ, ಓದುವ ವಿಷಯಗಳಲ್ಲಿ ಶಿಸ್ತು ಬಹಳ ಮುಖ್ಯ. ದಿನನಿತ್ಯ ಸರಿಯಾದ ದಿನಚರಿಯನ್ನು ಅಳವಡಿಸಿಕೊಂಡು ಹೋಗುವುದು ಉತ್ತಮ. ಏಕೆಂದರೆ ಮಕ್ಕಳು ಶಿಸ್ತಿನಿಂದ ಈ ದಿನಚರಿಯನ್ನು ಪಾಲಿಸಿದರೆ, ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ಹಾಗೆಯೇ, ಬೊಬೈಲ್, ಟಿವಿ ಹಾಗೂ ಗ್ಯಾಜೆಟ್ ವಿಷಯಗಳಲ್ಲಿಯೂ ಶಿಸ್ತುಪಾಲನೆ ಮುಖ್ಯ. ಪೋಷಕರು ಮಕ್ಕಳಿಗೆ ನಿಗದಿತ ಸಮಯವನ್ನು ನಿಯೋಜಿಸಿ ಅದಕ್ಕೆ ತಕ್ಕ ಹಾಗೆ ಮಕ್ಕಳು ನಡೆದುಕೊಳ್ಳುವ ಹಾಗೆ ನೋಡಬೇಕು.
ಇನ್ನು ದಿನಕ್ಕೆ ಒಮ್ಮೆಯಾದರೂ ಕುಟುಂಬದ ಎಲ್ಲಾ ಸದಸ್ಯರು ಮಕ್ಕಳ ಜೊತೆ ಒಟ್ಟಿಗೆ ಕೂತು ಊಟ ಮಾಡುವುದು, ಅಂತ ಸಮಯದಲ್ಲಿ ಯಾರೊಬ್ಬರೂ ಮೊಬೈಲನ್ನು ಉಪಯೋಗಿಸದೆ ಎಲ್ಲರೂ ಮಕ್ಕಳೊಟ್ಟಿಗೆ ಖುಷಿಯಿಂದ ಕಾಲ ಕಳೆಯುವ ಹಾಗೆ ನೋಡಿಕೊಳ್ಳಬೇಕು ಈ ಶಿಸ್ತನ್ನು ಮುಂದೆ ಮಕ್ಕಳು ಕೂಡ ಪಾಲಿಸಿಕೊಂಡು ಹೋಗುತ್ತಾರೆ.
ಮಕ್ಕಳು ಓದುವಾಗ ಪೋಷಕರು ಟಿವಿ ಅಥವಾ ಫೋನ್ ಬಳಕೆ ಮಾಡಬಾರದು. ಮುಂಜಾನೆ ಬೇಗ ಏಳುವುದು, ರಾತ್ರಿ ಬೇಗನೆ ನಿದ್ರೆ ಮಾಡುವುದು, ಇವೆಲ್ಲಾ ದಿನಚರಿಯ ಶಿಸ್ತು. ಮಕ್ಕಳ ಮೇಲೆ ಇವು ಪ್ರಭಾವ ಬೀರುತ್ತವೆ. ಹಾಗಾಗಿ ಪೋಷಕರಾದ ನಾವು ಮೊದಲು ಶಿಸ್ತಿನಿಂದ ಜೀವನವನ್ನು ನಡೆಸುತ್ತಾ ಮಕ್ಕಳನ್ನು ಸರಿದಾರಿಯಲ್ಲಿ ಕೊಂಡೊಯ್ಯಬೇಕು.
ಇನ್ನೂ ಸ್ವಾತಂತ್ರ್ಯವೆಂದರೆ ಆಯ್ಕೆಗಳ ಅವಕಾಶ. ಈ ಆಯ್ಕೆಗಳನ್ನು ಮಾಡಿಕೊಳ್ಳಲು ಕೆಲವೊಮ್ಮೆ ಮಕ್ಕಳಿಗೆ ಅವಕಾಶ ನೀಡಬೇಕಾಗುತ್ತದೆ. ಪೋಷಕರಾದ ನಾವು ನಾವು ಹೇಳಿದಾಗೆ ಕೇಳಬೇಕು ಎನ್ನುವ ಕಟ್ಟುನಿಟ್ಟಿನ ಕ್ರಮವನ್ನು ಮಕ್ಕಳ ಮೇಲೆ ಹೇರದೇ ಕೆಲವೊಂದು ವಿಷಯದಲ್ಲಿ ಅವರಿಗೆ ಪೂರ್ತಿ ಆದಂತಹ ಸ್ವಾತಂತ್ರ್ಯವನ್ನು ನೀಡಬೇಕು. ಉದಾಹರಣೆಗಾಗಿ:
1) ಮಕ್ಕಳಿಗೆ ಭಾವನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ
2) ಪ್ರಶ್ನೆಗಳನ್ನು ಕೇಳಲು ಅವಕಾಶ
3) ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ವಾತಾವರಣ
4) ತನಗೆ ಅಥ೯ವಾಗುವ ರೀತಿಯಲ್ಲಿ ಓದಲು ಅವಕಾಶ
5) ಪ್ರಯೋಗಗಳನ್ನು ಮಾಡಿ ಕಲಿಯಲು ಅವಕಾಶ
6) ಸಣ್ಣ ಪುಟ್ಟ ನಿಧಾ೯ರ ತೆಗೆದುಕೊಳ್ಳಲು ಮುಕ್ತ ವಾತಾವರಣ
7) ತನಗೆ ಇಷ್ಟವಾದ ಉಡುಪು ಧರಿಸಲು ಅವಕಾಶ
8) ಆಸಕ್ತಿಯಿರುವ ಹವ್ಯಾಸ ಬೆಳೆಸಿಕೊಳ್ಳಲು ಸ್ವಾತಂತ್ರ್ಯ
9) ಕ್ರಿಯಾಶೀಲತೆ ಬೆಳೆಸಿಕೊಳ್ಳಲು ಪ್ರೋತ್ಸಾಹ… ಇತ್ಯಾದಿ.
ಮಕ್ಕಳಿಗೆ ಈ ತರಹದ ಸ್ವಾತಂತ್ರ್ಯವನ್ನು ಕೊಡಲು ಪೋಷಕರು ಹಿಂಜರಿಯಬಾರದು. ಇದರಿಂದ ಮಕ್ಕಳು ಸ್ವಾವಲಂಬಿಯೂ ಮತ್ತು ಕ್ರಿಯಾಶೀಲತೆ ಉಳ್ಳವರೂ ಆಗಿರುತ್ತಾರೆ. ಬದುಕನ್ನು ತಾವೇ ರೂಪಿಸಿಕೊಳ್ಳುತ್ತಾರೆ. ಜೀವನದಲ್ಲಿ ಕಠಿಣ ಸವಾಲುಗಳು ಎದುರಾದಾಗ ಧೈರ್ಯದಿಂದ ಮತ್ತು ಜವಾಬ್ದಾರಿಯಿಂದ ನಿಭಾಯಿಸುತ್ತಾರೆ. ಸ್ವಾತಂತ್ರ್ಯದ ಜೊತೆಗೆ ಜವಾಬ್ಧಾರಿಯೂ ಇರಬೇಕು. ಜವಾಬ್ದಾರಿಯ ಸರಿಯಾದ ನಿವ೯ಹಣೆ ಬಹಳ ಮುಖ್ಯವಾಗಿರುತ್ತದೆ.
ಹೋಮ್ವರ್ಕ್ ಮಾಡುವ ಜವಾಬ್ಧಾರಿಯನ್ನು ಮಕ್ಕಳೇ ನಿಭಾಯಿಸುವಂತೆ ಪೋಷಕರು ನೋಡಿ ಕೊಳ್ಳಬೇಕು. ಇದು ಆರೋಗ್ಯಕರ ಕಲಿಕೆ ಆಗುತ್ತದೆ ಮತ್ತು ಇದರಿಂದ ಪೋಷಕರ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ.
ಹೀಗೆ ಮಕ್ಕಳಲ್ಲಿ ಚಿಕ್ಕವರಿರುವಾಗಲೇ ನಾವು ಶಿಸ್ತು ಮತ್ತು ಸ್ವಾತಂತ್ರ್ಯದ ಬಗ್ಗೆ ಅವರಿಗೆ ಅರಿವನ್ನು ಮೂಡಿಸಬೇಕು.