ನಾಳೆ ನೂತನ ಸರ್ಕಾರದ ಮಹತ್ವಾಕಾಂಕ್ಷಿ ಬಜೆಟ್ನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿದ್ದು, 14ನೇ ಬಾರಿಗೆ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಮಾಡಿ ದಾಖಲೆ ನಿರ್ಮಿಸಲಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಜಾರಿಯಲ್ಲಿರುವ ಜನ ಕಲ್ಯಾಣ ಯೋಜನೆಗಳನ್ನೂ ಮುಂದುವರೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಜೊತೆಗೆ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸೋದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳಾದ ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಗೃಹ ಶಕ್ತಿ ಹಾಗೂ ಯುವ ನಿಧಿ ಯೋಜನೆಗಳಿಗೆ ಪ್ರತಿ ವರ್ಷ 55 ಸಾವಿರದಿಂದ 60 ಸಾವಿರ ಕೋಟಿ ರೂ. ಅನುದಾನ ಎತ್ತಿಡಬೇಕಾದ ಅನಿವಾರ್ಯತೆ ಇದೆ. ಇನ್ನು ಗೃಹ ಲಕ್ಷ್ಮಿ ಹಾಗೂ ಯುವ ನಿಧಿ ಹೊರತುಪಡಿಸಿ ಇನ್ನುಳಿದ ಮೂರು ಯೋಜನೆಗಳು ಈಗಾಗಲೇ ಜಾರಿ ಆಗಿವೆ. 2023-24ರ ಆರ್ಥಿಕ ವರ್ಷದ ಪೈಕಿ 8 ತಿಂಗಳು ಮಾತ್ರ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳಿಗೆ 35 ರಿಂದ 40 ಸಾವಿರ ಕೋಟಿ ರೂ. ಮೀಸಲಿಡಬೇಕಾಗಿದೆ.
ಸಿದ್ದು ಸರ್ಕಾರ ಘೋಷಿಸಿರುವ ಗ್ಯಾರಂಟಿಗಳಿಗೆ ಹಣ ಹೊಂದಿಸ ಬೇಕಾದರೆ ಈಗಾಗಲೇ ಜಾರಿಯಲ್ಲಿರುವ ಕೆಲವು ಜನ ಕಲ್ಯಾಣ ಯೋಜನೆಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಅದರಲ್ಲೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾದ ಕೆಲವು ಯೋಜನೆಗಳನ್ನು ಕೈಬಿಡುವ ನಿರೀಕ್ಷೆಗಳಿವೆ. ಹಾಗೆಯೇ ರಾಜ್ಯದಲ್ಲಿ ಗೃಹ ಜ್ಯೋತಿ ಗ್ಯಾರಂಟಿ ಯೋಜನೆ ಜಾರಿಗೆ ಬಂದಿರುವುದರಿಂದ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿಗಳಂತಹ ಯೋಜನೆಗಳ ಅಗತ್ಯ ಇರೋದಿಲ್ಲ. ಈ ಎಲ್ಲಾ ಯೋಜನೆಗಳನ್ನೂ ಗೃಹ ಜ್ಯೋತಿ ಯೋಜನೆ ಜೊತೆಯಲ್ಲೇ ಸೇರಿಸುವ ಸಾಧ್ಯತೆಗಳಿವೆ.
ಗುತ್ತಿಗೆದಾರರ ಬಾಕಿ ಬಿಲ್ ಪಾವತಿಯ ಹೊರೆ:
ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹರಸಾಹಸ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ, ಅವರಿಗೆ ಇದರ ಜೊತೆಯಲ್ಲೇ ಕೋಟ್ಯಂತರ ರೂಪಾಯಿ ಬಾಕಿ ಬಿಲ್ ಪಾವತಿಯೇ ಅತಿ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ಸದ್ಯದ ಮಾಹಿತಿ ಪ್ರಕಾರ ರಾಜ್ಯ ಸರ್ಕಾರವು ಬರೋಬ್ಬರಿ 36,784 ಕೋಟಿ ರೂ. ಬಾಕಿ ಬಿಲ್ ಪಾವತಿ ಮಾಡಬೇಕಿದೆ. ಈ ಪೈಕಿ ರಾಜ್ಯಾದ್ಯಂತ ಸಿವಿಲ್ ಗುತ್ತಿಗೆದಾರರಿಗೇ 25 ಸಾವಿರ ಕೋಟಿ ರೂ. ಬಿಲ್ ಬಾಕಿ ಮರು ಪಾವತಿ ಮಾಡಬೇಕಿದೆ. ಇನ್ನು ರಾಜ್ಯಾದ್ಯಂತ ಇರುವ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಿಗೆ 8,584 ಕೋಟಿ ರೂ. ಬಿಲ್ ಬಾಕಿ ಮರು ಪಾವತಿ ಮಾಡಬೇಕಿದೆ.
ಉತ್ತಮ ಯೋಜನೆಗಳನ್ನು ಮುಂದುವರಿಸುವ ನಿರ್ಧಾರ:
ಬಿಜೆಪಿಯ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಲಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ನಡುವೆಯೇ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಪ್ರಮುಖ ಕಲ್ಯಾಣ ಯೋಜನೆಗಳನ್ನು ಸಿದ್ದರಾಮಯ್ಯ ಮುಂದುವರೆಸಿಕೊಂಡು ಹೋಗಲಿದ್ದಾರೆ ಎನ್ನಲಾಗಿದೆ.
ರೈತರ ಮಕ್ಕಳಿಗೆ ಸ್ಕಾಲರ್ಶಿಫ್ ನೀಡುವ ರೈತ ವಿದ್ಯಾನಿಧಿ ಯೋಜನೆ ಹಾಗೂ ಸಿರಿಧಾನ್ಯ ಬೆಳೆಯಲು ರೈತರಿಗೆ 10 ಸಾವಿರ ರೂ. ಸಹಾಯ ಧನ ನೀಡುವ ರೈತ ಸಿರಿ ಯೋಜನೆಯನ್ನು ಮುಂದುವರಿಸುವ ಇಂಗಿತವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ರೈತ ವಿದ್ಯಾನಿಧಿ ಯೋಜನೆಗೆ 700 ಕೋಟಿ ರೂ. ಹಾಗೂ ರೈತ ಸಿರಿ ಯೋಜನೆಗೆ 600 ಕೋಟಿ ರೂ. ಅಗತ್ಯವಿದೆ. ಈ ಎಲ್ಲಾ ಯೋಜನೆಗಳನ್ನು ಮುಂದುವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಜೆಟ್ನಿಂದ ಯಾವೆಲ್ಲ ಇಲಾಖೆಗೆ ಎಫೆಕ್ಟ್?
ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ನಗರಾಭಿವೃದ್ಧಿ, ಕೃಷಿ ಇನ್ನಿತರ ಇಲಾಖೆಗಳಿಗೆ ಅನುದಾನ ಕಡಿತದ ಬಿಸಿ ತಟ್ಟುವ ಆತಂಕವಿದೆ. ಮಾನವಾಭಿವೃದ್ಧಿ ಸೂಚ್ಯಂಕವನ್ನು ಎತ್ತಿ ಹಿಡಿಯುವ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತಿತರ ಇಲಾಖೆಗಳ ಅನುದಾನವೂ ತಗ್ಗಬಹುದು.