ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥ ಹುದ್ದೆಗೆ ಟೀಮ್ ಇಂಡಿಯಾ ಮಾಜಿ ಆಲ್ರೌಡರ್ ಅಜಿತ್ ಅಗರ್ಕರ್ ನೇಮಕಗೊಂಡಿದ್ದಾರೆ. ಸುಲಕ್ಷಣ ನಾಯಕ್, ಅಶೋಕ್ ಮೆಲ್ಹೋತ್ರ ಹಾಗೂ ಜತಿನ್ ಪರಂಜಾಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಅಜಿತ್ ಅಗರ್ಕರ್ ಅವರನ್ನು ಭಾರತ ಪುರುಷರ ತಂಡದ ಮುಖ್ಯ ಆಯ್ಕೆದಾರರನ್ನಾಗಿ ನೇಮಿಸಿದೆ.
ಈ ಹಿಂದಿನ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಖಾಸಗಿ ವಾಹಿನಿಯೊಂದರ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಕ್ರಿಕೆಟ್ನ ಆಂತರಿಕ ವಿಚಾರಗಳನ್ನು ಬಹಿರಂಗಪಡಿಸಿ ವಿವಾದಕ್ಕೆ ಗುರಿಯಾಗಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಚೇತನ್ ಶರ್ಮಾ ಅವರ ರಾಜೀನಾಮೆ ಬಳಿಕ ತೆರವಾಗಿದ್ದ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಗರ್ಕರ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ.
ಆಯ್ಕೆ ಸಮಿತಿ ಮುಖ್ಯಸ್ಥರ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಅದರಲ್ಲಿ ಅಂತಿಮ ಪಟ್ಟಿಯನ್ನು ರಚಿಸಲಾಗಿತ್ತು. ಸುಲಕ್ಷಣ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಅಭ್ಯರ್ಥಿಗಳ ಸಂದರ್ಶನ ನಡೆಸಿದ ಬಳಿಕ 45 ವರ್ಷದ ಅಜಿತ್ ಅಗರ್ಕರ್ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ. ಆ ಮೂಲಕ ಅಗರ್ಕರ್, ಶಿವಸುಂದರ್ ದಾಸ್, ಸಲೀಲ್ ಅಂಕೋಲಾ, ಸುಬ್ರೋತೊ ಬ್ಯಾನರ್ಜಿ ಮತ್ತು ಎಸ್ ಶರತ್ ಸೇರಿದಂತೆ ಐದು ಸದಸ್ಯರ ಸಮಿತಿಯನ್ನು ಒಳಗೊಂಡಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಭಾರತ ತಂಡದ ಮಾಜಿ ಆಲ್ರೌಂಡರ್ ಅಜಿತ್ ಅಗರ್ಕರ್ ಮುಖ್ಯ ಆಯ್ಕೆದಾರ ಹುದ್ದೆಗೆ 2021ರಲ್ಲಿಯೂ ಅರ್ಜಿ ಸಲ್ಲಿಸಿದ್ದರು. ಆದರೆ, ಆ ವೇಳೆ ಇವರನ್ನು ಹಿಂದಿಕ್ಕಿ ಚೇತನ್ ಶರ್ಮಾ ಆಯ್ಕೆಯಾಗಿದ್ದರು.
ಅರ್ಧಶತಕದ ದಾಖಲೆ ಬರೆದಿರುವ ಅಜಿತ್ ಅಗರ್ಕರ್ :
ಒಂಬತ್ತು ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದ ಅಜಿತ್ ಅಗರ್ಕರ್ 2000ರ ದಶಕದಲ್ಲಿ ಟೀಮ್ ಇಂಡಿಯಾಗೆ ಕೀ ಬೌಲರ್ ಹಾಗೂ ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮೂಲಕ ತಂಡಕ್ಕೆ ರನ್ ತಂದುಕೊಡುತ್ತಿದ್ದರು. ಭಾರತದ ಪರ 26 ಟೆಸ್ಟ್ ಪಂದ್ಯಗಳಿಂದ 58 ವಿಕೆಟ್, 191 ಏಕದಿನ ಪಂದ್ಯಗಳಿಂದ 288 ವಿಕೆಟ್ಗಳನ್ನು ಪಡೆದಿದ್ದಾರೆ. ಇದರ ಜತೆಗೆ 4 ಟಿ20ಐ ಪಂದ್ಯಗಳನ್ನು ಕೂಡ ಆಡಿದ್ದಾರೆ. 2007ರ ಉದ್ಘಾಟನಾ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ ತಂಡದಲ್ಲಿ ಅಜಿತ್ ಅಗರ್ಕರ್ ಆಡಿದ್ದರು.
ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ಅಜಿತ್ ಅಗರ್ಕರ್ ಅವರ ಹೆಸರಿನಲ್ಲಿದೆ. 2000 ಇಸವಿಯಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ ಅಜಿತ್ ಅಗರ್ಕರ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಇದರ ಜತೆಗೆ ಒಡಿಐ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 50 ಕಿತ್ತ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.
ಅಗರ್ಕರ್ ಅವರು ಮುಂಬೈ ರಣಜಿ ತಂಡದ ಆಯ್ಕೆಗಾರರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಅವರಿದ್ದ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸಹಾಯಕ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.