ಮದುವೆ ಅನ್ನೋದು ಎಲ್ಲರ ಜೀವನದಲ್ಲಿ ಆಗುವಂತದ್ದು. ಸಂಪ್ರದಾಯಕ ತಕ್ಕಂತೆ ಅದರ ಆಚರಣೆಗಳು ಬೇರೆ ಬೇರೆ ಆಗಿರುತ್ತವೆ.
ಮದುವೆ ಅನ್ನುವುದು ಒಂದು ದಿನದ ಆಟವಲ್ಲ. ಮದುವೆಯ ದಿನಕ್ಕೂ ಮುನ್ನ ಅನೇಕ ಶಾಸ್ತ್ರ ಸಂಪ್ರದಾಯಗಳನ್ನು ನೆರವೇರಿಸಲಾಗುತ್ತದೆ. ಅಲ್ಲಿ ಒಂದು ಸಂಸ್ಕೃತಿಯೇ ಮೇಳೈಸುತ್ತದೆ. ಸಮಾಜಕ್ಕೆ ಅನುಗುಣವಾಗಿ ಮದುವೆಯ ಸಂಪ್ರದಾಯಗಳು ಭಿನ್ನವಾಗಿರುತ್ತವೆ. ಆ ಸಂಪ್ರದಾಯಕ್ಕೆ ಅನುಗುಣವಾಗಿ ವಿವಾಹ ನಡೆಯುತ್ತದೆ. ಹಿಂದೂ ಧರ್ಮದಲ್ಲೂ ಮದುವೆಗೆ ಮುನ್ನ ಅನೇಕ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಕೆಲವೊಮ್ಮೆ ಈ ಸಂಪ್ರದಾಯಗಳಿಗೆ ಅರ್ಥವಿಲ್ಲ, ಇದು ಕೇವಲ ಆಡಂಬರ ಎನ್ನುವ ಮಾತು ಕೆಲವರ ಬಾಯಿಯಲ್ಲಿ ಬರುತ್ತದೆ. ಕೆಲವರು ಈ ಯೋಚನೆಯೇ ಸರಿ ಎನ್ನಿಸಬಹುದು. ಆದರೆ ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿರುವ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಗಳ ಹಿಂದೆಯೂ ಒಂದು ಕಾರಣವಿದೆ.
ಹಿಂದೂ ಧರ್ಮದಲ್ಲಿ, ಮದುವೆಗೂ ಮುನ್ನ ಅರಿಶಿನ ಶಾಸ್ತ್ರವನ್ನು ನಡೆಸಲಾಗುತ್ತದೆ. ಇದರ ಹಿಂದೆ ಧಾರ್ಮಿಕ ಮಾತ್ರವಲ್ಲದೆ ವೈಜ್ಞಾನಿಕ ಕಾರಣಗಳೂ ಅಡಗಿವೆ.
ಅರಿಶಿನ ಶಾಸ್ತ್ರವನ್ನು ಏಕೆ ಮಾಡಲಾಗುತ್ತದೆ ? :
ಹಿಂದೂ ಧರ್ಮದಲ್ಲಿ, ಮದುವೆಯ ಮೊದಲು, ವಧು ಮತ್ತು ವರನಿಗೆ ಅರಿಶಿನ ಹಚ್ಚುವ ಶಾಸ್ತ್ರ ನಡೆಯುತ್ತದೆ. ಹಿಂದೂ ಧರ್ಮದಲ್ಲಿ ಯಾವುದೇ ಮಂಗಳಕರ ಕೆಲಸದಲ್ಲಿ ಅರಿಶಿನಕ್ಕೆ ವಿಶೇಷವಾದ ಮಹತ್ವವಿದೆ. ಅರಿಶಿನ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ ಧನಾತ್ಮಕ ಶಕ್ತಿಯು ನಮ್ಮ ಸುತ್ತಲೂ ಹರಡುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಹಳದಿ ಬಣ್ಣವನ್ನು ಮದುವೆಯ ಸಮಯದಲ್ಲಿ ಸಮೃದ್ಧಿ ಮತ್ತು ಸಂತೋಷದ ಸಂಕೇತವೆಂದು ಹಿಂದೂ ಧರ್ಮದಲ್ಲಿ ಚಿಂತಿಸಲಾಗುತ್ತದೆ.
ಈ ಪದ್ಧತಿಯಿಂದ, ವಧು ಮತ್ತು ವರನ ಭವಿಷ್ಯದ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮದುವೆ ಆಮಂತ್ರಣ ಪತ್ರಿಕೆಗೂ ಅರಿಶಿನವನ್ನು ಹಚ್ಚುವುದನ್ನು ನೀವು ನೋಡಿರಬಹುದು. ವಿಶೇಷವಾಗಿ ಹಳದಿ ಬಣ್ಣವು ವಿಷ್ಣುವಿಗೆ ತುಂಬಾ ಪ್ರಿಯವಾಗಿದ್ದರಿಂದ ವಿಷ್ಣು ಆಶೀರ್ವಾದವನ್ನು ಪಡೆಯಲು ಅರಿಶಿನವನ್ನು ಹಚ್ಚಲಾಗುತ್ತದೆ ಎನ್ನಲಾಗುತ್ತದೆ.
ಅರಶಿನ ಶಾಸ್ತ್ರದ ಹಿಂದಿದೆ ವೈಜ್ಞಾನಿಕ ಕಾರಣ :
ಅರಿಶಿನ ಶಾಸ್ತ್ರ ಮಾಡುವಾಗ ಮೈ ತುಂಬಾ ಅರಶಿನ ಹಚ್ಚಲಾಗುತ್ತದೆ. ವಧು-ವರರ ಮುಖ ಮತ್ತು ದೇಹದ ಮೇಲೆ ಅರಿಶಿನವನ್ನು ಹಚ್ಚಿದಾಗ ಅದು ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ ಇದೇ ಈ ಶಾಸ್ತ್ರದ ಹಿಂದಿರುವ ವೈಜ್ಞಾನಿಕ ಕಾರಣ. ಇದರ ಹೊರತಾಗಿ ಹಿಂದಿನ ಕಾಲದಲ್ಲಿ ಬ್ಯೂಟಿ ಪಾರ್ಲರ್ಗಳು ಇರಲಿಲ್ಲ. ಇದರಿಂದಾಗಿ ವಧು-ವರರ ಮುಖದ ಅಂದವನ್ನು ಹೆಚ್ಚಿಸಲು ಅರಿಶಿನವನ್ನು ಬಳಸಲಾಗುತ್ತದೆ. ಅರಿಶಿನವು ನಂಜುನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಚರ್ಮದ ಮೇಲಿನ ಸೋಂಕನ್ನು ಸಹ ತೆಗೆದುಹಾಕುತ್ತದೆ. ಹಲವಾರು ದಿನಗಳವರೆಗೆ ಅರಿಶಿನವನ್ನು ಹಚ್ಚುವುದರಿಂದ ಮದುವೆಯ ದಿನದಂದು ಮುಖವು ಫಳ ಫಳನೆ ಹೊಳೆಯುತ್ತದೆ.
ಮದುವೆಯಲ್ಲಿ ಹೀಗೆ ಹಳದಿ ಶಾಸ್ತ್ರವು ಒಂದು ಪ್ರಮುಖವಾದ ಪಾತ್ರವನ್ನುವಹಿಸುತ್ತದೆ.