ಬಾಗಲಕೋಟೆ: ಬದಲಾದ ಕೃಷಿ ಪದ್ಧತಿಯಿಂದ ಮಣ್ಣು, ನೀರಿನ ಮಹತ್ವ ಕಳೆದುಕೊಳ್ಳದಂತೆ ಎಚ್ಚರ ವಹಿಸಬೇಕಿದೆ. ಜೀವಾಮೃತಗಳಾದ ಮಣ್ಣು, ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಪ್ರತಿಯೊಬ್ಬರು ಪ್ರಯತ್ನಿಸಬೇಕು. ನೂತನ ಪದವೀಧರರು ನವೀನ ಆಲೋಚನೆ, ಸೇವಾ ಮನೋಭಾವದಿಂದ ಕೃಷಿ, ತೋಟಗಾರಿಕಾ ಕ್ಷೇತ್ರದ ಅಭಿವೃದ್ಧಿ, ಹೊಸ ತಂತ್ರಜ್ಞಾನಕ್ಕೆ ತಮ್ಮದೆಯಾದ ಕೊಡುಗೆ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತೋವಿವಿಯ 12ನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು,
ತೋಟಗಾರಿಕಾ ಬೆಳೆಗಳಲ್ಲಿ ನಮ್ಮ ರಾಜ್ಯ ಮೊದಲು, ಹಣ್ಣು, ಸಾಂಬಾರ ಬೆಳೆಗಳಲ್ಲಿ 5, ವಾಣಿಜ್ಯ ಬೆಳಗಳಾದ 6 ನೇ ಸ್ಥಾನದಲ್ಲಿದೆ. ರಾಜ್ಯದ ಜೆಡಿಪಿಗೆ ಶೇ.30 ತೋಟಗಾರಿಕಾ ಕ್ಷೇತ್ರದ ಕೊಡುಗೆ ಇದೆ. ಇಲ್ಲಿನ ತೋಟಗಾರಿಕಾ ಉತ್ಪನ್ನಗಳು ಮುಂಚೂಣಿಯಲ್ಲಿವೆ. ರಾಜ್ಯದಲ್ಲಿ ಶೇ.19, ದೇಶದಲ್ಲಿ ಶೇ.6 ರಷ್ಟು ಉತ್ಪಾದನೆಯಲ್ಲಿ ಕೊಡುಗೆ ಇದೆ. ಹೀಗಾಗಿ ತೋವಿವಿ, ವಿಜ್ಞಾನಿಗಳು, ಸಂಶೋಧಕರು, ಪದವೀಧರರು ಹೊಸ ತಂತ್ರಜ್ಞಾನ, ಸ್ಥಳೀಯ ರೈತರ ಅಗತ್ಯಗಳನ್ನು ಆಧರಿಸಿ ಮಹತ್ತರ ಸೇವೆ ಒದಗಿಸಬೇಕು. ತನ್ಮೂಲಕ ರೈತರ ಆದಾಯ ದ್ವಿಗುಣಗೊಳಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ತೋಟಗಾರಿಕೆಯಲ್ಲಿ ಡ್ರೋಣ ಬಳಕೆ, ಕೃತಕ ಬುದ್ಧಿಮತ್ತೆ,ನ್ಯಾನೋ ತಂತ್ರಜ್ಞಾನ ಬಳಕೆ ಮಾಡಲು ಹೊಸ ಆವಿಷ್ಕಾರಗಳನ್ನು ಕೈಗೊಳ್ಳಬೇಕು. ಸಮಾಜದ ಪೌಷ್ಠಿಕಾಂಶದ ಬೆನ್ನೆಲುಬು ಮಾತ್ರವಲ್ಲದೇ ರಾಜ್ಯದಲ್ಲಿ ಸುಸ್ಥಿರ ಜೀವನೋಪಾಯದ ಸಾಧನೆ ಆಗಿದೆ ತೋಟಗಾರಿಕೆ ಎನ್ನುವುದು ಮರೆಯಬಾರದು. ರಾಜ್ಯದಲ್ಲಿ ತೋಟಗಾರಿಕೆ ಕ್ಷೇತ್ರ ಇನ್ನು ವಿಸ್ತರಿಸಲು ಅವಕಾಶವಿದೆ. ಯೋಜನಾ ಬದ್ಧವಾಗಿ ಇದಕ್ಕೆ ಮಾಡಬೇಕಾಗಿದೆ ಎಂದರು.
ತೋವಿವಿ ವಿದ್ಯಾರ್ಥಿಗಳು ಕಳೆದ 8-9 ವರ್ಷಗಳಿಂದ ನಿರಂತರವಾಗಿ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಾ ರಾಷ್ಟ್ರ ಮಟ್ಟದಲ್ಲಿ ವಿಶ್ವಿವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ರಾಜ್ಯಾದ್ಯಂತ ಹರಡಿರುವ 11 ಸಂಶೋದನಾ ಕೇಂದ್ರಗಳು ತೋಟಗಾರಿಕೆಯಲ್ಲಿನ ಸವಾಲುಗಳನ್ನು ಎದುರಿಸಲು ಅಗತ್ಯ ಆಧಾರಿತ ರ್ನಿಷ್ಟ ಸ್ಥಳ ಸಂಶೋಧನೆಯನ್ನು ಕೈಗೊಳ್ಳುತ್ತಿವೆ. ವಿಶ್ವವಿದ್ಯಾಲಯವು ರೈತರ ತಕ್ಷಣದ ಸಮಸ್ಯೆಗಳನ್ನು ಪರಿಹರಿಸಲು ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡಲು, ಅಗತ್ಯ, ಸಮಸ್ಯೆ ಆಧಾರಿತ ಸಂಶೋದನೆಗಳನ್ನು ಕೈಗೊಳ್ಳಲು ಹಲವಾರು ಸುಧಾರಿಸಿದ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಭಾಷಣಕಾರ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಉಪ ಮಹಾ ನಿರ್ದೇಶಕ ಡಾ.ಉದಮ್ ಸಿಂಗ್ ಗೌತಮ್ ಮಾತನಾಡಿ, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವಲ್ಲಿ ಕೃಷಿ ಮತ್ತು ಆಹಾರ ಸಂಸ್ಕರಣೆ ಮಹತ್ವದ ಪಾತ್ರ ವಹಿಸುತ್ತಿದೆ. ಸಾಮಾನ್ಯ ಬುದ್ದಿವಂತಿಕೆ ಕೂಡಾ ಕೃಷಿಯನ್ನು ಹೆಚ್ಚು ಬಲಿಷ್ಠಗೊಳಿಸುತ್ತದೆ. ತೋಟಗಾರಿಕೆ ಕ್ರಾಂತಿಯು ಗ್ರಾಮ ಮತ್ತು ನಗರ ಪ್ರದೇಶದ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಇಂದು ನಿಮ್ಮ ಸಾಧನೆಗಳ ಸಂಭ್ರಮವನ್ನು ಆಚರಿಸಿದ್ದೀರಿ. ಆದರೆ ಇಷ್ಟಕ್ಕೆ ತೃಪ್ತಿ ಪಡುವಂತದಲ್ಲ ಎಂಬುದನ್ನು ಮರೆಯದಿರಿ. ಹಸಿರು ಕ್ರಾಂತಿಯನ್ನು ತರುವ ಜವಾಬ್ದಾರಿಯುತ ಕಾರ್ಯ ನಿಮ್ಮಿಂದಾಗಬೇಕು. ಈ ನಿಟ್ಟಿನಲ್ಲಿ ನೋಬಲ್ ಪ್ರಶಸ್ತಿ ವಿಜೇತ ಡಾ.ನಾರ್ಮನ್ ಬೋರ್ಲಾಗ್ ಬಿಳಿ ಕ್ರಾಂತಿಯನ್ನು ತಂದ ಡಾ.ವರ್ಗೀಸ್ ಕುರಿಯನ್ ಮತ್ತು ಹಸಿವು ಬಡತನ ಅಪೌಷ್ಠಿಕತೆಯನ್ನು ಜಯಿಸಿದ ಡಾ.ಎಂ.ಎಸ್.ಸ್ವಾಮಿನಾಥನ್ ಅಂತ ಮಹಾನ್ ವ್ಯಕ್ತಿಗಳ ಅನುಭವ ಹಾಗೂ ಕಾರ್ಯ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.
ಚಿನ್ನದ ಪದಕ ಪಡೆದವರು:
ತೋವಿವಿ ಘಟಿಕೋತ್ಸವದಲ್ಲಿ ಪದವಿ, ಸ್ನಾತಕೋತ್ತರ, ಪಿಎಚ್ಡಿ ವಿಭಾಗದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಸಾಂಪ್ರದಾಯಕ ಉಡುಪಿನಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳು ದೇಶಿ ಸಂಸ್ಕೃತಿ ಮೇಳೈಸುವಂತೆ ಮಾಡಿದರು. ಶಿಸ್ತುಬದ್ಧ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸಿದ್ದು ವಿಶೇಷ ಗಮನ ಸೆಳೆಯಿತು.
ಪದವಿ ವಿಭಾಗ:
ಬಿಎಸ್ಸಿ ಪದವಿ ವಿಭಾಗದಲ್ಲಿ ಧರಣಿ ಶೆಟ್ಟಿ 16, ನಿಶ್ಚಿತ ಎನ್ 4 ಚಿನ್ನದ ಪದಕಗಳನ್ನು ಪಡೆದರೆ, ಸಚೀತನ ಮೋಡಗಿ, ಸರಸ್ವತಿ ಆರ್, ಪ್ರಿಯಾಂಕಾ ಎಚ್.ಎಲ್ ತಲಾ 3 ಚಿನ್ನದ ಪದಕ, ಎಸ್.ಪಿ.ಶೃತಿ, ಕುನೆ ಲಾವಣ್ಯ, ಎಚ್.ಎಸ್.ಹೇಮಂತ ಗೌಡಾ, ಭುವನೇಶ್ವರಿ ಖಡಕಿ ತಲಾ 2 ಚಿನ್ನದ ಪದಕ ಮತ್ತು ಕಾವ್ಯಶ್ರೀ ಡಿ.ಸಿ, ವರ್ಷ ಮೋಜಿ, ದಿವ್ಯಭಾರತಿ, ಸುಷ್ಮಾ ಎನ್, ಶೀತಲ್ ಬಿ.ಆರ್, ಮಂಜುನಾಥ ಮೆಂದೋಳೆ, ಲಾವಣ್ಯ ವೈ.ಎಸ್, ಅಮಲ್ ಕಿಸೋರ ತಲಾ ಒಂದು ಚಿನ್ನದ ಪದಕ ಪಡೆದರು.
ಸ್ನಾತಕೋತ್ತರ ವಿಭಾಗ: ಎಂ.ಎಸ್.ಸಿ (ತೋಟಗಾರಿಕೆಯಲ್ಲಿ) ಅನುಷಾ 6 ಚಿನ್ನದ ಪದಕ ಪಡೆದುಕೊಂಡರೆ, ಅಜೀತ್ ಕುಮಾರ 3 ಚಿನ್ನದ ಪದಕ, ಸ್ನೇಹಾ ಹೆಂಬಾಡೆ, ವಿದ್ಯಾ ತಲಾ ಎರಡು ಚಿನ್ನದ ಪದಕ, ಸಹನಾ ಜಿ.ಎಸ್, ಧನುಜಾ ಜಿ.ಎಸ್, ದಿವಾಕರ ಸಿ.ಜಿ, ಶಾಂತಾ ತಲಾ ಒಂದು ಚಿನ್ನದ ಪದಕಗಳನ್ನು ಪಡೆದುಕೊಂಡರು.
ಇನ್ನು ಪಿಎಚ್.ಡಿ ಪದವಿ ವಿಭಾಗದಲ್ಲಿ ಜಮುನಾರಾಣಿ ಜಿ.ಎನ್ ಪ್ರಥಮ ರ್ಯಾಂಕ್ ಪಡೆದು 2 ಚಿನ್ನದ ಪದಕ ಪಡೆದರೆ, ದ್ವಿತೀಯ ರ್ಯಾಂಕನ್ನು ರುಚಿತಾ ಟಿ 3 ಚಿನ್ನದ ಪದಕಗಳನ್ನು ಪಡೆದುಕೊಂಡರು.
ಬಾಗಲಕೋಟೆ ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ತೋವಿವಿಯ 12ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಪ್ರಾರಂಭದಲ್ಲಿ ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ ಸ್ವಾಗತಿ ಮತ್ತು ತೋವಿವಿಯ ಪ್ರಗತಿ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಸಚಿವರಾದನ ಎಸ್.ಎಸ್.ಮಲ್ಲಿಕಾರ್ಜುನ, ವಿ.ಪ ಸದಸ್ಯ ಪಿ.ಎಚ್.ಪೂಜಾರ ಸೇರಿದಂತೆ ವ್ಯವಸ್ಥಾಪನಾ ಮಂಡಳಿ ಹಾಗೂ ಪ್ರಾಜ್ಞ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.