ಕಡಿಮೆ ಬೆಲೆಗೆ, ಎಲ್ಲಾ ದಿನಸಿ ಅಂಗಡಿಯಲ್ಲೂ ಸುಲಭವಾಗಿ ಸಿಗುವ ಹಣ್ಣೆಂದರೆ ಬಾಳೆಹಣ್ಣು. ದಿನಕ್ಕೊಂದು ಬಾಳೆಹಣ್ಣು ತಿನ್ನುವುದನ್ನು ಬಹುತೇಕರು ಅಭ್ಯಾಸ ಮಾಡಿಕೊಂಡಿರುತ್ತಾರೆ. ಬಾಳೆಹಣ್ಣನ್ನು ನಿತ್ಯ ತಿನ್ನುವುದು ನಿಜಕ್ಕೂ ಆರೋಗ್ಯಕರ. ಬಾಳೆಹಣ್ಣು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ದಿನಕೊಂದು ಬಾಳೆಹಣ್ಣು ತಿನ್ನೋದು ಉತ್ತಮ. ಆದರೆ ಯಾವ ಸಮಯದಲ್ಲಿ ಬಾಳೆಹಣ್ಣು ತಿನ್ನುವುದು ಉತ್ತಮ ಅನ್ನೋದು ಶೇ.90ರಷ್ಟು ಜನಕ್ಕೆ ಗೊತ್ತೇ ಇರುವುದಿಲ್ಲ. ಅವರಿಗೆ ಬೇಕಾದಾಗ ತಿಂದು ಬಿಡುತ್ತಾರೆ.
ಇದರಲ್ಲಿ ಕೆಲವರು ಬೆಳಗ್ಗೆ ಉಪಹಾರದಲ್ಲಿ ಬಾಳೆಹಣ್ಣು ತಿಂದರೆ, ಹಲವರು ಮಧ್ಯಾಹ್ನ-ರಾತ್ರಿಯ ಊಟ ಆದ ನಂತರ ತಿನ್ನುತ್ತಾರೆ. ಇದರಲ್ಲಿ ಯಾವ ಸಮಯ ಬಾಳೆಹಣ್ಣು ತಿನ್ನಲು ಸೂಕ್ತ ಎಂದು Healthline.com ತಿಳಿಸಿದೆ.
ಮೊದಲಿಗೆ ಬಾಳೆಹಣ್ಣನ್ನು ಏಕೆ ತಿನ್ನಬೇಕು ಅಂತ ತಿಳಿದುಕೊಳ್ಳುವುದಾದರೆ, ಬಾಳೆಹಣ್ಣಿನಲ್ಲಿ ಫೈಬರ್, ವಿಟಮಿನ್ ಮತ್ತು ಖನಿಜಗಳ ಉತ್ತಮವಾಗಿದೆ. ಮಧ್ಯಮ ಗಾತ್ರದ ಬಾಳೆಹಣ್ಣು ಸುಮಾರು 3 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಪೊಟ್ಯಾಸಿಯಮ್, ಫೈಬರ್ ಮತ್ತು ವಿಟಮಿನ್ ಬಿ 6 ಮತ್ತು ಸಿ ನಂತಹ ಪೋಷಕಾಂಶಗಳು ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ ಎಂದು ಹೇಳಬಹುದು. ಇವುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮತ್ತು ಹಸಿವಿನ ಮಟ್ಟವನ್ನು ಸುಧಾರಿಸಲು ಸಹಕಾರಿ.
ಬೆಳಗಿನ ಉಪಾಹಾರದಲ್ಲಿ ಬಾಳೆಹಣ್ಣು ತಿನ್ನುವುದು ಉತ್ತಮ. ಆದರೆ ಬೆಳಗಿನ ಉಪಾಹಾರವಾಗಿ ಬಾಳೆಹಣ್ಣು ತಿಂದು ಬೇರೆ ಏನನ್ನು ತಿನ್ನದಿರುವುದು ಸರಿಯಲ್ಲ. ಅನೇಕ ಜನರು ತಿಂಡಿ ತಿನ್ನಲು ಸಮಯವಿಲ್ಲದ ಕಾರಣ ಬೆಳಗಿನ ಉಪಾಹಾರಕ್ಕಾಗಿ ಬಾಳೆಹಣ್ಣುಗಳನ್ನು ಮಾತ್ರ ತಿನ್ನಲು ಇಷ್ಟಪಡುತ್ತಾರೆ, ಆದರೆ ಅದು ತಪ್ಪಾದ ಆಹಾರ ಪದ್ಧತಿಯಾಗಿದೆ.
ಬಾಳೆಹಣ್ಣುಗಳು ಬಹಳಷ್ಟು ಕಾರ್ಬೋಹೈಡ್ರೇಟ್ ಗಳು ಮತ್ತು ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತವೆ. ಇದನ್ನು ಮಾತ್ರ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಮುಂದೊಂದು ದಿನ ಸಕ್ಕರೆ ಕಾಯಿಲೆ ಕೂಡ ಕಾಣಿಸಿಕೊಳ್ಳಬಹುದು. ಅದಕ್ಕಾಗಿ ಉಪಹಾರದಲ್ಲಿ ಬಾಳೆಹಣ್ಣನ್ನು ಬಳಸಿ ವಿನಹ ಬಾಳೆಹಣ್ಣನ್ನೇ ಉಪಹಾರವಾಗಿ ಮಾಡಿಕೊಳ್ಳಬೇಡಿ.
ಬೆಳಗಿನ ಉಪಾಹಾರದಲ್ಲಿ ಬಾಳೆಹಣ್ಣನ್ನು ಆನಂದಿಸಲು, ನೀವು ಅದನ್ನು ವಿವಿಧ ರೀತಿಯಲ್ಲಿ ಉಪಹಾರದ ಭಾಗವಾಗಿ ಮಾಡಿಕೊಳ್ಳಬಹುದು. ಬಾಳೆಹಣ್ಣನ್ನು ಸ್ಮೂಥಿಯಾಗಿ ಕುಡಿಯಬಹುದು. ಓಟ್ ಮೀಲ್ ಮೇಲೆ ಕತ್ತರಿಸಿದ ಬಾಳೆಹಣ್ಣುಗಳನ್ನು ಹಾಕಿ ತಿನ್ನಬಹುದು. ಹೆಚ್ಚಿನ ಪ್ರೋಟೀನ್ ಇರುವ ಆಹಾರಗಳೊಂದಿಗೆ ಬಾಳೆಹಣ್ಣುಗಳನ್ನು ಸೇರಿಸುವ ಮೂಲಕ ಫೈಬರ್ ಅನ್ನು ತಿನ್ನಬಹುದು. ಹೀಗೆ ಬಾಳೆಹಣ್ಣನ್ನು ದಿನದಲ್ಲಿ ಒಮ್ಮೆ ಉಪಯೋಗಿಸಬಹುದು.