ತರಕಾರಿಗಳ ಬೆಲೆ ಏರಿಕೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಇದು ಜನಸಾಮಾನ್ಯರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಲ್ಲೂ ಟೊಮೆಟೊ ರೇಟು ಗಗನಕ್ಕೇರಿ ಕುಳಿತಿದೆ. ನಮ್ಮಲ್ಲಿ ಮಾತ್ರ ಅಲ್ಲ, ಇಡೀ ದೇಶದಲ್ಲೇ ಮಳೆಯಿಂದ ಟೊಮೆಟೊ ಬೆಲೆ ಗಗನಮುಖಿಯಾಗಿದೆ. ಹಲವೆಡೆ ಟೊಮೆಟೊ 100 ರೂ. ದಾಟಿಯಾಗಿದೆ. ಮುಂದಿನ ಕೆಲವು ವಾರಗಳವರೆಗೆ ಟೊಮೆಟೊ ದುಬಾರಿಯಾಗಿಯೇ ಉಳಿಯುವ ನಿರೀಕ್ಷೆಯಿದೆ. ಎಲ್ಲಿ ನೋಡಿದ್ರೂ ದುಬಾರಿ ಟೊಮೆಟೊನದ್ದೇ ಮಾತು ಕೇಳುವಂತಾಗಿದೆ.
ಗೃಹಿಣಿಯರಿಗಂತೂ ಇದು ಧರ್ಮ ಸಂಕಟದ ವಿಷಯ. ದುಬಾರಿ ಬೆಲೆ ಕೊಟ್ಟು ತಂದ ಟೊಮೆಟೊ ಅನ್ನು ಮೊದಲಿನಂತೆ ವೀಪರಿತವಾಗಿ ಬಳಸಲಾಗದೆ, ಬಳಸದೆಯೂ ಇರಲು ಆಗದೆ ಕಿರಿಕಿರಿ ಶುರುವಾಗಿವೆ. ಆದರೆ ಗೃಹಿಣಿಯರ ಬುದ್ಧಿಶಕ್ತಿ ಅಷ್ಟು ಬೇಗ ಕೈಕೊಡುವಂತಹದ್ದು ಅಲ್ಲ. ಎಂತಹ ಕಷ್ಟ ಬಂದರೂ ಅದಕ್ಕೊಂದು ಪರಿಹಾರ ಅಡುಗೆ ಮನೆಯಲ್ಲಿ ಅವರಿಗೆ ಸಿಕ್ಕೆ ಸಿಗುತ್ತದೆ.
ಬೆಲೆ ಏರಿಕೆ ಇದೇ ಮೊದಲೇನು ಅಲ್ಲ. ಟೊಮೆಟೊ ಬಳಕೆಯನ್ನು ಕಡಿಮೆ ಮಾಡಿ, ಅದರ ರುಚಿಯಲ್ಲಿ ರಾಜಿಯಾಗದಂತೆ ಬೇರೆ ಯಾವ ಪದಾರ್ಥ ಉಪಯೋಗಿಸಬಹುದು ಎಂದು ಕೆಲ ಜಾಣ ಗೃಹಿಣಿಯರು ಕಂಡುಕೊಂಡಿದ್ದಾರೆ. ಹಾಗಾದರೆ ಟೊಮೆಟೊವನ್ನು ಹೆಚ್ಚು ಬಳಸುವ ಅಡುಗೆಗಳಿಗೆ ಈಗ ತಾತ್ಕಾಲಿಕವಾಗಿ ಏನನ್ನು ಬಳಸಬಹುದು. ಯಾವುದನ್ನು ಬಳಸಿದರೆ ಟೊಮೆಟೊನಂತೆಯೇ ರುಚಿ ಕೊಡುತ್ತದೆ ಎಂದು ಮಹಿಳೆಯರು ತಿಳಿದುಕೊಂಡಿದ್ದಾರೆ.
ಹುಣಸೆಹಣ್ಣು: ದಕ್ಷಿಣ ಭಾರತದ ಅಡುಗೆಗಳಾದ ತರಕಾರಿ ಸಾಂಬರ್, ರಸಂ ಸೇರಿದಂತೆ ಕೆಲವು ನಿತ್ಯ ಸೇವಿಸುವ ಆಹಾರಗಳಿಗೆ ಟೊಮೆಟೊಗಿಂತ ಹುಣಸೆಹಣ್ಣಿ ರಸ ಬಳಸಬಹುದಾಗಿದೆ. ಟೊಮೆಟೊವನ್ನೇ ಬಳಸಬೇಕು ಅಂತೇನು ಇಲ್ಲ. ಈಗಿನ ಪರಿಸ್ಥಿತಿಯಲ್ಲಿ ಟೊಮೆಟೊವನ್ನು ಮರೆತು ಹುಣಸೆ ಬಳಸಿದರೆ ಜೇಬಿಗೆ ನಿಜಕ್ಕೂ ಲಾಭ, ನಾಲಿಗೆಗೂ ರುಚಿ ಸಿಗಲಿದೆ.
ನಿಂಬೆ: ಅಡುಗೆಯ ಹುಳಿಗಾಗಿ ಟೊಮೆಟೊ ಬದಲಿಗೆ ನಿಂಬೆ ಹುಳಿಯನ್ನು ಬಳಸಬಹುದು. ನಿಂಬೆಯನ್ನು ಟೊಮೆಟೊಗೆ ಅಗ್ಗದ ಪರ್ಯಾಯವೆಂದು ಪರಿಗಣಿಸಬಹುದು. ನಿಂಬೆಯಲ್ಲಿ ವಿಟಮಿನ್ ಸಿ ಸೇರಿದಂತೆ ಹಲವು ಪೋಷಕಾಂಶಗಳು ಹೇರಳವಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು ಕೂಡ.
ಮೊಸರು: ಉತ್ತರ ಭಾರತದ ಗ್ರೇವಿಗಳಿಗೆ ಮೊಸರನ್ನು ಟೊಮೆಟೊ ಬದಲಿಗೆ ಬಳಸಬಹುದಾಗಿದೆ. ಮಿಕ್ಸ್ ವೆಜಿಟೇಬಲ್, ಬಟಾಣಿ, ಪನ್ನೀರ್, ಪಾಲಕ್ ಗ್ರೇವಿಗಳಿಗೆ ಮೊಸರನ್ನು ಬಳಸಿದ್ರೆ ರೆಸ್ಟೋರೆಂಟ್ ಸ್ಟೈಲ್ ಗ್ರೇವಿ ಸವಿಯಬಹುದು. ಇನ್ನು ನಾನ್ ವೆಜ್ ಖಾದ್ಯಗಳಿಗೂ ಹುಳಿಗಾಗಿ ಮೊಸರನ್ನು ಬಳಸಿದ್ರೆ ರುಚಿ ಜಾಸ್ತಿ ಸಿಗುತ್ತದೆ.
ಹಸಿ ಮಾವು: ಹೇಗೋ ಹಸಿ ಮಾವು ಇನ್ನೂ ಮಾರ್ಕೆಟ್ ನಲ್ಲಿ ಸಿಗುತ್ತಿದೆ. ಕೆಲವೊಂದು ಸಾರು, ಚಿತ್ರನ್ನಕ್ಕೆ ಹಸಿ ಮಾವಿನಕಾಯಿ ಬಳಸಿದ್ರೆ ರುಚಿ ಚೆನ್ನಾಗಿರುತ್ತದೆ ಟೊಮೆಟೊ ಬಳಕೆಯನ್ನು ಕೂಡ ಕಡಿಮೆಯಾಗಿ ಮಾಡಬಹುದು.
ಬೆಟ್ಟದ ನೆಲ್ಲಿಕಾಯಿ: ಇದು ಕೂಡ ಈಗ ಸೀಸನ್ ನಲ್ಲಿದೆ. ಇದನ್ನು ಅಡುಗೆಯಲ್ಲಿ ಬಳಸಿದ್ರೆ ಆರೋಗ್ಯಕ್ಕೆ ಪ್ರಯೋಜನಕಾರಿ. ಇದರಲ್ಲಿ ಗೊಜ್ಜುಗಳನ್ನು ಮಾಡುವುದು ರಚಿಕರವಾಗಿರುತ್ತದೆ. ಹುಳಿ ಪದಾರ್ಥ ಬೇಕಾದಾಗ ಇದನ್ನು ಬಳಸಿಕೊಳ್ಳಬಹುದು.