ದೇಶದ ಅಮೂಲ್ಯ ಸಂಪತ್ತಾದ ಯುವ ಜನತೆ ಹಾದಿ ತಪ್ಪುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಯುವ ಪೀಳಿಗೆಯನ್ನು ಆವರಿಸಿರುವ ಮಾದಕ ವಸ್ತುಗಳು ಅವರನ್ನು ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತಿದೆ. ಇದರಿಂದ ನಾನಾ ಮಂದಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇಂತಹ ಮಾದಕ ವ್ಯಸನ ಮುಕ್ತ ಜಗತ್ತನ್ನು ನಿರ್ಮಿಸುವ ಸಲುವಾಗಿ ಪ್ರತಿವರ್ಷ ಜೂನ್ 26ರಂದು ವಿಶ್ವ ಮಾದಕ ವಸ್ತು ವಿರೋಧಿ ದಿನ ಎಂದು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಇತಿಹಾಸ:
ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ1987ರ ಡಿಸೆಂಬರ್ 7 ರಂದು ಮಾದಕವಸ್ತುಗಳ ತಡೆಗಟ್ಟುವಿಕೆಗಾಗಿ ನಿರ್ಣಯವನ್ನು ಅಂಗೀಕರಿಸಿತು. ಈ ಪ್ರಸ್ತಾವನೆಯಲ್ಲಿ ಮಾದಕ ದ್ರವ್ಯಗಳ ಅಕ್ರಮ ಬಳಕೆ ಮತ್ತು ಅಕ್ರಮ ಸಾಗಾಣಿಕೆ ತಡೆಯಲು ಪ್ರತಿ ವರ್ಷ ಅಂತಾರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನವನ್ನು ಆಚರಿಸಲು ತಿಳಿಸಲಾಗಿದೆ. ಇದಾದ ನಂತರ 1989ರ ಜೂನ್ 26 ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಮಾದಕವಸ್ತು ನಿಷೇಧ ದಿನವನ್ನು ಆಚರಿಸಲಾಯಿತು. ಅಂದಿನಿಂದ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.
ಡ್ರಗ್ಸ್ ಸೇವನೆಯಿಂದ ಬರುವ ಕಾಯಿಲೆ:
ಹೃದಯರಕ್ತನಾಳದ ತೊಂದರೆಗಳು:
ಡ್ರಗ್ಸ್ ಸೇವನೆ ಮಾಡುವುದರಿಂದ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಅಪಾಯಗಳು ಉಂಟಾಗುತ್ತದೆ. ರಕ್ತತದ ಒತ್ತಡ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಇತರ ರಕ್ತಪರಿಚಲನೆಯ ಸಮಸ್ಯೆಗಳ ಉಂಟಾಗಬಹುದು. ಕೊಕೇನ್ ಅಥವಾ ಮೆಥಾಂಫೆಟಮೈನ್ನಂತಹ ಪ್ರಚೋದನೆಯನ್ನು ಉಂಟುಮಾಡುವ ಔಷಧಿಗಳು ಹೃದಯ ಸ್ತಂಭನವಾಗಿ ಸಾವುಗಳಿಗೆ ಕಾರಣವಾಗಬಹುದು .
ಶ್ವಾಸಕೋಶದ ಖಾಯಿಲೆ:
ಧೂಮಪಾನವು ನಮ್ಮ ಶ್ವಾಸಕೋಶಕ್ಕೆ ತುಂಬಾ ಹಾನಿಕಾರಕವಾಗಿದ್ದು, ಧೂಮಪಾನವು ದೀರ್ಘಕಾಲದ ಬ್ರಾಂಕೈಟಿಸ್ ಮತ್ತು ಎಂಫಿಸೆಮಾದಂತಹ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದು ಅತ್ಯಂತ ಅಪಾಯಕಾರಿಯಾದ ಗುಣಪಡಿಸಲಾಗದ ಕಾಯಿಲೆ ಆಗಿದೆ. ಈ ಖಾಯಿಲೆಯಲ್ಲಿ ಸದಾ ಉಸಿರಾಟದ ಸಮಸ್ಯೆ, ನಡೆಯಲು ತೊಂದರೆ ಜೊತೆಗೆ ನಿತ್ಯ ಕೆಮ್ಮುವುದು ಮುಂತಾದ ಗಂಭೀರ ಸಮಸ್ಯೆಗಳು ಕಾಡುತ್ತವೆ. ಈ ರೋಗವು ಮಾರಕವಾಗಬಹುದು.
ಜೀರ್ಣಾಂಗವ್ಯೂಹದ ಸಮಸ್ಯೆಗಳು:
ಓಪಿಯಾಡ್ಗಳು ಮತ್ತು ಎಡಿಎಚ್ಡಿಗಳ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯು ಹಾನಿಗೊಳಗಾಗಬಹುದು. ಒಪಿಯಾಡ್ಗಳು ದೀರ್ಘಕಾಲದ ಮಲಬದ್ಧತೆಗೆ ಕಾರಣವಾಗಬಹುದು. ಮಾದಕ ವಸ್ತುಗಳ ಸೇವನೆಯಿಂದ ಅನ್ನನಾಳಕ್ಕೆ ಹಾನಿ ಉಂಟಾಗುತ್ತದೆ. ಕ್ಯಾನ್ಸರ್, ಪ್ಯಾಂಕ್ರಿಯಾಟೈಟಿಸ್, ರಕ್ತಸ್ರಾವ, ಪೌಷ್ಟಿಕಾಂಶದ ಕೊರತೆಯಂತಹ ಸಮಸ್ಯೆಗಳು ಉಂಟಾಗಬಹುದು.
ಶ್ವಾಸಕೋಶದ ಕ್ಯಾನ್ಸರ್:
ಧೂಮಪಾನದ ಪರಿಣಾಮ ನಮ್ಮ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಧೂಮಪಾನದಿಂದಾಗಿ ನಾವು ಶ್ವಾಸಕೋಶದ ಕ್ಯಾನ್ಸರ್ಗೆ ಬಲಿಯಾಗಬಹುದು. ಧೂಮಪಾನ ಅಥವಾ ತಂಬಾಕು ಸೇವಿಸುವ 80 ಪ್ರತಿಶತ ಜನರು ಶ್ವಾಸಕೋಶದ ಕ್ಯಾನ್ಸರ್ನಿಂದ ಸಾಯುತ್ತಾರೆ ಎಂದು ಹೇಳಲಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಿ ಯುವಕರಲ್ಲಿ ಧೂಮಪಾನಿಗಳಲ್ಲಿ ಕಂಡುಬರುತ್ತದೆ.
ಟಿಬಿ:
ಟಿಬಿ ಒಂದು ಮಾರಣಾಂತಿಕವಾದ ಅಪಾಯಕಾರಿ ರೋಗ. ಕೆಲವರು ನಶೆಗಾಗಿ ಇಂಜೆಕ್ಷನ್ ಬಳಸುತ್ತಾರೆ. ಹಾಗೇ ಇಂಜೆಕ್ಷನ್ ಬಳಸುವುದರಿಂದ ಟಿಬಿಯಂತಹ ಮಾರಣಾಂತಿಕ ಕಾಯಿಲೆಗೆ ಬಲಿಯಾಗುತ್ತಾರೆ.
ಮಾನಸಿಕ ರೋಗಗಳು:
ಮಾದಕ ವಸ್ತು ನಮ್ಮ ದೇಹಕ್ಕೆ ಮಾತ್ರ ಹಾನಿ ಮಾಡುತ್ತದೆ ಎಂದು ಅನೇಕ ಮಂದಿ ಅಂದುಕೊಂಡಿದ್ದಾರೆ. ಆದರೆ ಇದು ತಪ್ಪು ಕಲ್ಪನೆ. ಹೆಚ್ಚು ಆಲ್ಕೋಹಾಲ್ ಅಥವಾ ಸಿಗರೇಟ್ ಕುಡಿಯುವ ಅಭ್ಯಾಸ ಹೊಂದಿರುವವರು ಅಥವಾ ಡ್ರಗ್ಸ್ ಸೇವಿಸುವವರ ಮಾನಸಿಕ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇವುಗಳ ಸೇವನೆಯಿಂದ ನಶೆ ಏರುವ ಕಾರಣ ಒತ್ತಡ, ಖಿನ್ನತೆ, ತಲೆನೋವು ಅಥವಾ ಮೈಗ್ರೇನ್ನಂತಹ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾದಕ ವ್ಯಸನಿಗಳಾಗಿದ್ದರೆ ಮತ್ತು ಸಮಯಕ್ಕೆ ಡ್ರಗ್ಸ್ ಪಡೆಯದಿದ್ದರೆ, ಅವರು ಮಾನಸಿಕ ಅಸ್ವಸ್ಥರಾಗಬಹುದು ಅಥವಾ ಹುಚ್ಚರಾಗಬಹುದು.