ವಿಶ್ವದ ಅತ್ಯಂತ ಬಲಿಷ್ಠ ದೇಶಗಳಲ್ಲಿ ಒಂದಾಗಿರುವ ರಷ್ಯಾ ವಿರುದ್ಧ ಖಾಸಗಿ ಸೇನೆ ವ್ಯಾಗ್ನರ್ ಸಾರಿದ್ದ ಬಂಡಾಯ ಕ್ಷಮಾದಾನದಲ್ಲಿ ಅಂತ್ಯವಾಗಿದೆ. ಬಂಡುಕೋರ ವ್ಯಾಗ್ನರ್ ಪಡೆಗೆ ರಷ್ಯಾ ಸೇನೆಯಲ್ಲಿ ಸೇರುವ ಅವಕಾಶ ಹಾಗೂ ಬಂಡುಕೋರ ಪಡೆಯ ನಾಯಕ ಯೆವ್ಗೆನಿ ಪ್ರಿಗೋಝಿನ್ಗೆ ಬೆಲಾರುಸ್ಗೆ ಸುರಕ್ಷಿತ ಸ್ಥಳಾಂತರದ ಅವಕಾಶವನ್ನು ಪುಟಿನ್ ನೀಡಿದ್ದಾರೆ. ಇದರಿಂದಾಗಿ ರಷ್ಯಾದಲ್ಲಿ ಎದ್ದಿದ್ದ ಆತಂರಿಕ ದಂಗೆ ಶಮನವಾಗಿದೆ.
ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ರಣೋತ್ಸಾಹದಲ್ಲಿರುವ ರಷ್ಯಾಕ್ಕೆ ತನ್ನ ದೇಶದ ಒಳಗೇ ಗುಂಡಿನ ಸದ್ದು ಮೊಳಗುವ ಆತಂಕ ಶುರುವಾಗಿತ್ತು. ರಷ್ಯಾದಲ್ಲಿ ಏನು ಬೇಕಾದರೂ ಆಗಬಹುದು ಎಂಬ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಬೆಲರೂಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ಅವರು ಮಧ್ಯಪ್ರವೇಶಿಸಿ ಪುಟಿನ್ ಹಾಗೂ ಪ್ರಿಗೋಝಿನ್ ನಡುವೆ ಸಂಧಾನ ನಡೆದು ಆತಂರಿಕ ದಂಗೆ ಅಂತ್ಯವಾಗಿದೆ.
ರಷ್ಯಾ ಆತಂರಿಕ ದಂಗೆ :
ಉಕ್ರೇನ್ ಸಮರ ಸೇರಿದಂತೆ ರಷ್ಯಾ ನಡೆಸಿದ ಯುದ್ಧಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ ವ್ಯಾಗ್ನರ್ ಪಡೆಯ ಪ್ರಿಗೋಝಿನ್ ಶನಿವಾರ ರಷ್ಯಾದ ವಿರುದ್ಧವೇ ದಂಗೆ ಸಾರಿದ್ದರು. ತಮ್ಮ ಪಡೆಯ ಸಾಧನೆಯನ್ನು ಮರೆಮಾಚಿ, ತಮ್ಮನ್ನೇ ದಮನಗೊಳಿಸಲು ರಷ್ಯಾ ರಕ್ಷಣಾ ಸಚಿವ ಹಾಗೂ ಸೇನಾ ಮುಖ್ಯಸ್ಥರು ಮುಂದಾಗಿದ್ದಾರೆ ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಸುಮಾರು 50 ಸಾವಿರ ವ್ಯಾಗ್ನರ್ ಯೋಧರು ಮಾಸ್ಕೋದತ್ತ ಮುನ್ನುಗ್ಗಲು ಆರಂಭಿಸಿದರು. ಇದಕ್ಕೂ ಮುನ್ನ ರಷ್ಯಾ ಸೇನೆಯ 4 ಹೆಲಿಕಾಪ್ಟರ್ಗಳನ್ನು ಹೊಡೆದುರುಳಿಸಿ ಹಲವೆಡೆ ರಷ್ಯಾ ಯೋಧರ ಜತೆ ಚಕಮಕಿ ನಡೆಸಿದ್ದರು. ಉಕ್ರೇನ್ ಸಮರಕ್ಕೆ ಸಂಬಂಧಿಸಿದಂತೆ ರಷ್ಯಾಕ್ಕೆ ಪ್ರಮುಖ ನೆಲೆಯಾಗಿರುವ ರೋಸ್ತೋವ್ ನಗರವನ್ನೇ ವ್ಯಾಗ್ನರ್ಗಳು ವಶಕ್ಕೆ ಪಡೆದಿದ್ದರು. ವ್ಯಾಗ್ನರ್ ಪಡೆ ಮಾಸ್ಕೋದತ್ತ ಬರುತ್ತಿದ್ದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಜನರಿಗೆ ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿತ್ತು.
ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಈ ದಂಗೆಯನ್ನು “ದೇಶದ್ರೋಹ” ಎಂದು ಖಂಡಿಸಿದ್ದರು. ಎಂದಿಗೂ ಕಂಡಿರದ “ಕಠಿಣ ಶಿಕ್ಷೆ” ನೀಡುವ ಎಚ್ಚರಿಕೆ ನೀಡಿದ್ದರು. ರಷ್ಯಾ ಸರ್ಕಾರ ಮತ್ತು ವ್ಯಾಗ್ನರ್ ನಾಯಕ ಯೆವ್ಗೆನಿ ಪ್ರಿಗೊಜಿನ್ ನಡುವೆ ಬೆಲರೂಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ದಂಗೆ ಕೈಬಿಡುವುದಾಗಿ ಪ್ರಿಗೊಜಿನ್ ಒಪ್ಪಿಕೊಂಡಿದ್ದಾನೆ. ದೇಶ ತೊರೆದರೆ ಮಾತ್ರ ಪ್ರಿಗೊಜಿನ್ ವಿರುದ್ಧ ಸಶಸ್ತ್ರ ದಂಗೆಯ ಆರೋಪವನ್ನು ಕೈಬಿಡುವುದಾಗಿ ಷರತ್ತು ವಿಧಿಸಲಾಗಿತ್ತು. ಹೀಗಾಗಿ ಪ್ರಿಗೊಜಿನ್ ರಷ್ಯಾ ತೊರೆದು ಬೆಲಾರಸ್ಗೆ ಪಲಾಯನ ಮಾಡಿದ್ದಾರೆ. ಬೆಲಾರಸ್ನಲ್ಲಿ ಪ್ರಿಗೊಜಿನ್ಗೆ ಆಶ್ರಯ ನೀಡಲು ಸಂಧಾನ ಸಭೆಯಲ್ಲಿ ಲುಕಾಶೆಂಕೊ ಒಪ್ಪಿಕೊಂಡಿದ್ದರು.ಸಂಧಾನದ ಬಳಿಕ ವಾಪಸ್ ಉಕ್ರೇನ್ಗೆ ಮರಳುವಂತೆ ಪ್ರಿಗೋಝಿನ್ ತನ್ನ ಸೈನಿಕರಿಗೆ ಆದೇಶಿಸಿದ್ದಾರೆ.
ವಾಗ್ನರ್ ಅಂದ್ರೆ ಯಾರು?
ವ್ಯಾಗ್ನರ್ ಎನ್ನುವುದು ಖಾಸಗಿ ಸೇನಾ ಪಡೆಯಾಗಿದೆ. ಅನೇಕ ದೇಶಗಳು ತನ್ನದೇ ಆದ ಸೇನಾ ಪಡೆಗಳನ್ನು ಹೊಂದುವುದರ ಜತೆಗೆ ಇಂತಹ ಖಾಸಗಿ ಸೇನೆಗಳನ್ನು ಕೂಡ ತನ್ನ ಕಾರ್ಯಗಳಿಗೆ ಬಳಸಿಕೊಳ್ಳುತ್ತವೆ. ಜನರು ಸೇನಾ ತರಬೇತಿಗಳನ್ನು ಪಡೆದು ಹಣಕ್ಕಾಗಿ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಾರೆ. ಇವರು ತಮ್ಮನ್ನು ಸೈನಿಕರು ಎಂದೇ ಗುರುತಿಸಿಕೊಳ್ಳುತ್ತಾರೆ. ಸರ್ಕಾರಗಳು ಕೂಡ ಇವುಗಳಿಗೆ ಹಣಕಾಸಿನ ನೆರವು ನೀಡುತ್ತವೆ. ಇಂತಹ ಸೈನಿಕರು ವೈಯಕ್ತಿಕವಾಗಿ ಅಥವಾ ಖಾಸಗಿ ಸಂಘಟನೆಗಳ ಮೂಲಕ ಸೇವೆ ಒದಗಿಸುತ್ತಾರೆ. ರಷ್ಯಾದ ವ್ಯಾಗ್ನರ್ ಇಂತಹದೇ ಒಂದು ಖಾಸಗಿ ಸಂಘಟನೆ. ವ್ಯಾಗ್ನರ್ ಪಡೆಯಲ್ಲಿರುವವರು ಹೆಚ್ಚಾಗಿ ಜೈಲಿಗೆ ಹೋಗಿ ಬಂದಿರುವ ಖೈದಿಗಳು ಮತ್ತು ಮಾಜಿ ಸೈನಿಕರು. ಇವರಿಗೆ ಸೈನಿಕರಿಗಿಂತ ಅಧಿಕ ಪಟ್ಟು ಸಂಬಳವನ್ನು ನೀಡಿ ಸರ್ಕಾರ ತನ್ನ ಕೆಲಸಗಳನ್ನು ಮಾಡಿಸಿಕೊಳ್ಳುತ್ತದೆ. ಪ್ರಿಗೊಝಿನ್ ವ್ಯಾಗ್ನರ್ ಸಂಘಟನೆಯ ಮುಖ್ಯಸ್ಥ.
2014ರಲ್ಲಿ ಪ್ರಿಗೊಝಿನ್ ಅವರು ವ್ಯಾಗ್ನರ್ ಗ್ರೂಪ್ ಸ್ಥಾಪಿಸಿದರು ಎನ್ನಲಾಗಿದೆ. ಈ ಖಾಸಗಿ ಸೇನಾ ಗುತ್ತಿಗೆ ಸಂಸ್ಥೆಯು ಸಿರಿಯಾ, ಲಿಬಿಯಾ ಮತ್ತು ಉಕ್ರೇನ್ನ ಸಂಘರ್ಷಗಳಲ್ಲಿ ಭಾಗಿಯಾಗಿದೆ. ಚಿತ್ರಹಿಂಸೆ ಹಾಗೂ ಜನರಲ್ಲಿ ಭಯ ಹುಟ್ಟಿಸುವಂತಹ ಮರಣದಂಡನೆಗಳನ್ನು ವಿಧಿಸುವುದು ಸೇರಿದಂತೆ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳು ವ್ಯಾಗ್ನರ್ ಪಡೆ ಮೇಲಿದೆ.
ಯೆವ್ಗೆನಿ ಪ್ರಿಗೊಝಿನ್ ಯಾರು?
ಯೆವ್ಗೆನಿ ಪ್ರಿಗೊಝಿನ್ ಸಾಕಷ್ಟು ಪ್ರಭಾವ ಹೊಂದಿರುವ ರಷ್ಯಾದ ಶ್ರೀಮಂತ ಉದ್ಯಮಿ, ಮರ್ಸಿನರಿ ಮುಖ್ಯಸ್ಥ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆತ್ಮೀಯ ವಿಶ್ವಾಸಿ ಮಿತ್ರ. ಪ್ರಿಗೊಝಿನ್ ಅವರನ್ನು ‘ಪುಟಿನ್ ಅವರ ಬಾಣಸಿಗ’ ಎಂದೂ ಕರೆಯಲಾಗುತ್ತದೆ . ಕ್ರೆಮ್ಲಿನ್ಗೆ ಸೇವೆ ಒದಗಿಸುವ ರೆಸ್ಟೋರೆಂಟ್ಗಳು ಹಾಗೂ ಕ್ಯಾಟರಿಂಗ್ ಕಂಪೆನಿಗಳ ಮಾಲೀಕ. ರಷ್ಯಾ ವಿಭಜನೆಗೂ ಮುನ್ನ ಸೋವಿಯತ್ ಒಕ್ಕೂಟ ಇದ್ದ ಸಂದರ್ಭದಲ್ಲಿ ಒಮ್ಮೆ ಶಿಕ್ಷೆಗೆ ಗುರಿಯಾಗಿದ್ದ ಪ್ರಿಗೊಝಿನ್, ರಷ್ಯಾ ಸರ್ಕಾರ ಬೆಂಬಲವಿರುವ ಮರ್ಸಿನರಿ ಕಂಪೆನಿಯ ವ್ಯಾಗ್ನರ್ ಗ್ರೂಪ್ ಸೇರಿದಂತೆ ಸಾಕಷ್ಟು ಪ್ರಭಾವಶಾಲಿ ಕಂಪೆನಿಗಳನ್ನು ನಿಯಂತ್ರಿಸುತ್ತಿದ್ದಾರೆ.
ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟವು ನಿರ್ಬಂಧ ವಿಧಿಸಿರುವ ರಷ್ಯಾ ಪ್ರಜೆಗಳಲ್ಲಿ ಪ್ರಿಗೊಝಿನ್ ಸಹ ಸೇರಿದ್ದಾರೆ. ಕ್ರಿಮಿನಲ್ ಆರೋಪಗಳ ಅಡಿಯಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆಯು ಪ್ರಿಗೊಝಿನ್ ವಿರುದ್ಧ ತನಿಖೆಯನ್ನೂ ನಡೆಸುತ್ತಿದೆ. ಹೀಗೆ ಅಮೆರಿಕ, ಯುರೋಪಿಯನ್ ಒಕ್ಕೂಟ ಹಾಗೂ ಸೋವಿಯತ್ ಒಕ್ಕೂಟದ ಮಾಜಿ ಸದಸ್ಯ ದೇಶಗಳಿಗೆ ಬೇಕಾಗಿರುವ ಪ್ರಿಗೊಝಿನ್, ಈತ ತಮ್ಮದೇ ದೇಶಕ್ಕೆ ಕಂಟಕವಾಗಿ ಪರಿಣಮಿಸಿದ್ದಾರೆ.