ಮಂಗಳೂರು: ವೃದ್ಧ ಮಾವನನ್ನು ಮನೆಯಲ್ಲಿ ಕೂಡಿಹಾಕಿ ಸೊಸೆಯೇ ಹಲ್ಲೆ ನಡೆಸಿದ ಘಟನೆ ಮಂಗಳೂರು ನಗರದ ಕುಲಶೇಖರದಲ್ಲಿ ಬೆಳಕಿಗೆ ಬಂದಿದ್ದು, ಕಂಕನಾಡಿ ನಗರ ಠಾಣೆ ಪೊಲೀಸರು ಆರೋಪಿತ ಮಹಿಳೆಯನ್ನು ಬಂಧಿಸಿದ್ದಾರೆ.
ಕುಲಶೇಖರ ನಿವಾಸಿ ಪದ್ಮನಾಭ ಸುವರ್ಣ(76) ಹಲ್ಲೆಗೀಡಾದವರು. ಇವರ ಮಗ ಪ್ರೀತಂ ಸುವರ್ಣ ವಿದೇಶದಲ್ಲಿ ಕೆಲಸದಲ್ಲಿದ್ದು, ಮನೆಯ ಸಿಸಿಟಿವಿಯನ್ನು ತನ್ನ ಮೊಬೈಲಿಗೆ ಕನೆಕ್ಟ್ ಮಾಡಿಕೊಂಡಿದ್ದರು. ಎರಡು ದಿನಗಳ ಹಿಂದೆ ತನ್ನ ವೃದ್ಧ ತಂದೆಗೆ ಪತ್ನಿ ಉಮಾಶಂಕರಿ ವಾಕಿಂಗ್ ಸ್ಟಿಕ್ ನಲ್ಲಿ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಮಗನ ಗಮನಕ್ಕೆ ಬಂದಿತ್ತು. ಅದರಂತೆ, ಪ್ರೀತಂ ಸುವರ್ಣ ತನ್ನ ತಂಗಿ ಮೂಡುಬಿದ್ರೆಯಲ್ಲಿ ಗಂಡನ ಮನೆಯಲ್ಲಿ ನೆಲೆಸಿರುವ ಪ್ರಿಯಾಗೆ ವಿಷಯ ತಿಳಿಸಿದ್ದರು.
ಅಲ್ಲದೆ, ಸಿಸಿಟಿವಿ ದೃಶ್ಯ ಮುಂದಿಟ್ಟು ಪೊಲೀಸ್ ದೂರು ಕೊಡುವಂತೆ ಸೂಚಿಸಿದ್ದರು. ಮಗಳು ಪ್ರಿಯಾ ಸುವರ್ಣ ಕಂಕನಾಡಿ ನಗರ. ಠಾಣೆಯಲ್ಲಿ ದೂರು ನೀಡಿದ್ದಲ್ಲದೆ, ಹಲ್ಲೆಗೀಡಾದ ತಂದೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರೋಪಿತ ಮಹಿಳೆ ಉಮಾಶಂಕರಿ ಅತ್ತಾವರ ಕೆಇಬಿ ವಿಭಾಗದಲ್ಲಿ ಅಧಿಕಾರಿ ಹುದ್ದೆಯಲ್ಲಿದ್ದಾರೆ. ಸರಕಾರಿ ಅಧಿಕಾರಿ ಎನ್ನುವ ದರ್ಪದಿಂದಲೋ ಏನೋ ವೃದ್ಧ ವ್ಯಕ್ತಿಯನ್ನು ಮನೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿದ್ದು ಆರೋಪಿತ ಮಹಿಳೆಯನ್ನು ಬಂಧಿಸಿದ್ದಾರೆ.