ಸಾಮಾನ್ಯವಾಗಿ ಮನೆಯ ಹಿರಿಯವರು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ನೋಡಿದರೆ ಯಾಕಪ್ಪ ಇವರು ಹೀಗೆ ಅಂತ ಅನಿಸುತ್ತದೆ . ಆದರೆ ಅವರಿಗೆ ಆರೋಗ್ಯದ ಮೇಲೆ ಇರುವ ಅತಿಯಾದ ಕಾಳಜಿ ಅವರಿಂದ ಆ ರೀತಿ ಮಾಡಿಸುತ್ತದೆ. ಆಹಾರ ಕ್ರಮ, ದೈಹಿಕ ಚಟುವಟಿಕೆ, ಜೀವನಶೈಲಿ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಹಿರಿಯರು ತಮ್ಮ ಅನುಭವದ ಮಾತುಗಳನ್ನು ಸಲಹೆ ರೂಪದಲ್ಲಿ ಹೇಳುವುದಿದೆ.
ಊಟದ ಮೊದಲು, ನಂತರ ಅಥವಾ ಊಟದ ಜತೆಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವಂತೆ ಹೆಚ್ಚಾಗಿ ಸಲಹೆ ಮಾಡುತ್ತಾರೆ. ಅಷ್ಟೇ ಅಲ್ಲ, ಬಿಸಿಲ ಬೇಗೆಯಿಂದ ದೇಹ ನಿರ್ಜಲೀಕರಣವಾಗುವುದನ್ನು ತಡೆಯಲೂ ಮಣ್ಣಿನ ಪಾತ್ರೆಯಲ್ಲಿ ನೀರು ಕುಡಿಯುವಂತೆ ಸಲಹೆ ನೀಡಿತ್ತಾರೆ. ಆದರೆ ಎಂದೂ ಹಿರಿಯರು ಫ್ರಿಡ್ಜ್ನಲ್ಲಿಟ್ಟ ಕೋಲ್ಡ್ ನೀರು ಕುಡಿಯುವುದಕ್ಕೆ ಸಲಹೆ ನೀಡುವುದೇ ಇಲ್ಲ! ಇದಕ್ಕೆಲ್ಲವೂ ಒಂದು ವೈಜ್ಞಾನಿಕ ಕಾರಣವೆನೆಂದರೆ:
ಬಿಸಿ ಅಥವಾ ಉಗುರು ಬಿಸಿ ನೀರನ್ನು ಊಟದ ನಂತರ, ಮೊದಲು ಅಥವಾ ಊಟದ ಜತೆಗೆ ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ಚೆನ್ನಾಗಿ ನೀರು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗಲಾರದು.
ಅತ್ಯುತ್ತಮವಾದ ಜೀರ್ಣಕ್ರಿಯೆ ಹೊಂದಿದ್ದಲ್ಲಿ, ಇತರೆ ಆರೋಗ್ಯ ಸಮಸ್ಯೆಗಳು ಉಲ್ಬಣಿಸಲಾರವು ಎನ್ನಲಾಗುತ್ತದೆ. ಉದರದ ಸಾಮಾನ್ಯ ಸಮಸ್ಯೆಯಾದ ಗ್ಯಾಸ್ಟ್ರಿಕ್, ಎಸಿಡಿಟಿ, ಅಜೀರ್ಣಗಳಿಗೆ ಉಗುರು ಬಿಸಿ ನೀರು ಹಾಗೂ ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದು ಮುಖ್ಯ ಎಂದು ಹೇಳಬಹುದು.
ನಿಯಮಿತ ಪ್ರಮಾಣದಲ್ಲಿ ಬಿಸಿ ನೀರು ಸೇವಿಸುವುದು ನಿಮ್ಮ ಅತಿಯಾದ ಬೊಜ್ಜು ಕರಗಿಸಲೂ ಸಹಕಾರಿ ಕೂಡ. ಇದರಿಂದ ಅತಿಯಾದ ದೇಹದ ತೂಕ ಇಳಿಕೆಯಾಗುತ್ತದೆ.
ಅತಿಯಾದ ದೇಹದ ತೂಕ ಇಳಿಸುವ ಡಯಟ್ ಪ್ಲಾನ್ನಲ್ಲಿ ಜೀರ್ಣಕ್ರಿಯೆ ಸುಲಭವಾಗುವ ಆಹಾರಗಳನ್ನೇ ಸೇವಿಸಲು ಸಲಹೆ ನೀಡಲಾಗುತ್ತದೆ. ಬಿಸಿ ನೀರು ಜೀರ್ಣ ಕ್ರಿಯೆಯನ್ನು ಉತ್ತಮ ಪಡಿಸುತ್ತದೆ. ಅಷ್ಟೇ ಅಲ್ಲದೆ ದೇಹದ ಒಟ್ಟಾರೆ ತಾಪವನ್ನೂ ಬಿಸಿನೀರು ಅಗತ್ಯ ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಇದರಿಂದ ಚಯಾಪಚಯ ಕ್ರಿಯೆ ಸರಳವಾಗಿ ಆಗುತ್ತದೆ. ಇದರಿಂದ ದೇಹದಲ್ಲಿ ಹೆಚ್ಚು ಕ್ಯಾಲೋರಿ ಬರ್ನ್ ಆಗುತ್ತದೆ. ಅಷ್ಟೇ ಅಲ್ಲದೆ ಪಿತ್ತಕೋಶ ಹಾಗೂ ಮೂತ್ರಜನಕಾಂಗದ ಕಾರ್ಯಗಳನ್ನೂ ಉತ್ತಮಪಡಿಸುವಲ್ಲಿ ಸಹಕಾರಿ.
ಮೆಡಿಕಲ್ ಡೈಲಿ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯಲ್ಲಿ, ಬೆಳಗಿನ ಹೊತ್ತು ಬಿಸಿ ನೀರಿಗೆ ಲಿಂಬೆ ಅಥವಾ ಲೆಮೆನ್ ಟೀ ಕುಡಿಯುವುದು ದೇಹದಲ್ಲಿನ ಅನಾರೋಗ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕುತ್ತದೆ. ಅಲ್ಲದೆ ಬಿಸಿ ನೀರಿನ ಬಳಕೆಯಿಂದ ದೇಹದಲ್ಲಿರುವ ಕೆಟ್ಟ ಕೊಬ್ಬಿನಾಂಶವನ್ನು ದಹಿಸಲೂ ಸಾಧ್ಯ ಎನ್ನಲಾಗುತ್ತದೆ.
ತೂಕ ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಾಕಷ್ಟು ವಿಧಾನಗಳಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಯಾಗುತ್ತದೆ. ಹೀಗಾಗಿ ಡಯಟ್ ಪ್ಲಾನ್ ಬಗ್ಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆದುಕೊಳ್ಳುವುದು ಉತ್ತಮ.