ಒಳ ಅಂಗದ ಕುರವನ್ನು ಆಂತರಿಕ ವಿವರ್ಧಿ ಎನ್ನುತ್ತಾರೆ. ಅದು ಗುದ ಪ್ರದೇಶ, ಮೂತ್ರಕೋಶ, ಹೊಕ್ಕಳಿನ ಪ್ರದೇಶ, ತೊಡೆಸಂದು, ಮೂತ್ರಪಿಂಡ ಮೊದಲಾದ ಭಾಗಗಳಲ್ಲಿ ಕಾಡಬಹುದು.
ದೇಹದಲ್ಲಿ ನಂಜಿನ ಅಂಶ ಅಥವಾ ಕೆಟ್ಟ ರಕ್ತವಿದ್ದರೆ ಅದು ಈ ಕುರುವಿನ ಮೂಲಕ ಹೊರಹಾಕಲು ದೇಹ ಪ್ರಯತ್ನಿಸುತ್ತದೆ. ಸಾಮಾನ್ಯವಾಗಿ ಇದು ತೊಡೆ, ಪೃಷ್ಠದ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ನಡೆದಾಡಲು, ಕುಳಿತುಕೊಳ್ಳಲು ಕಷ್ವವಾಗುತ್ತದೆ. ಕೆಲವರಿಗಂತೂ ಅದರ ನೋವಿಗೆ ಜ್ವರವೂ ಬರಬಹುದು.
ಆಯುರ್ವೇದದ ಪ್ರಕಾರ ಪಿತ್ತ ಮತ್ತು ವಾತದೋಷದಿಂದ, ದೇಹದಲ್ಲಿ ಕಲ್ಮಶವಿದ್ದರೆ ಪದೇ ಪದೇ ಕುರು ಉಂಟಾಗುತ್ತದೆ.
ಆಗ ರಕ್ತಶುದ್ಧೀಕರಣ ಮಾಡುವುದು ಅಗತ್ಯವಾಗಿರುತ್ತದೆ. ಕೆಲವು ಕುರುಗಳು ಕೇವಲ ಚರ್ಮದ ಕೆಂಪು ಗುಳ್ಳೆಗಳಾಗುತ್ತವೆ. ಇನ್ನು ಕೆಲವು ಕೀವು ತುಂಬಿಕೊಂಡ ಕುರುಗಳಾಗುತ್ತವೆ. ಎರಡೂ ಕೂಡ ಅತೀವ ನೋವನ್ನು ನೀಡುತ್ತವೆ.
ಅದಕ್ಕೆ ಕೆಲವು ಮನೆಮದ್ದುಗಳು ಹೀಗಿವೆ
*ನುಗ್ಗೆಕಾಯಿ ಬೇರಿನ ರಸಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು.
*ಒಂದು ಹರಳಿನ ಎಲೆಯನ್ನು ಬಾಧಿತ ಪ್ರದೇಶದ ಮೇಲಿರಿಸಿ ಅದರ ಮೇಲೆ ಬಿಸಿ ಕಬ್ಬಿಣದ ತುಂಡನ್ನಿರಿಸಿ ಬಿಸಿ ಶಾಖ ಕೊಡುವುದು.
*ಬೇವಿನ ಎಲೆಗಳನ್ನು ತಂದು ಅದನ್ನ ಪೇಸ್ಟ್ ತಯಾರಿಸಿ ಕುರುವಾದ ಜಾಗದಲ್ಲಿ ಹಚ್ಚಿದರೆ ಒಂದೆರಡು ದಿನದಲ್ಲಿ ನೋವು, ಗುಳ್ಳೆ ಎರಡೂ ಕೂಡ ಶಮನವಾಗುತ್ತದೆ. ಅಥವಾ ನೀವು ಬೇವಿನ ಎಲೆಗಳ ಜ್ಯೂಸ್ ತಯಾರಿಸಿ ಕೂಡ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 5 ಎಂಎಲ್ ಸೇವನೆ ಮಾಡಿದರೂ ಕೂಡ ದೇಹದಲ್ಲಿ ಕಲ್ಮಶ ನಾಶವಾಗುತ್ತದೆ.
ನಮ್ಮ ದೇಹ ತಾನಾಗಿಯೇ ಶುದ್ಧೀಕರಿಸಿಕೊಳ್ಳುವ ಅದ್ಭುತ ರಚನೆಯನ್ನು ಹೊಂದಿದೆ. ದೇಹದಲ್ಲಿನ ಕಲ್ಮಶಗಳನ್ನು ಶೋಧಿಸಿ ಮೂತ್ರದ ಮೂಲಕ ಹೊರಹಾಕುವ ಕೆಲಸವನ್ನು ಮೂತ್ರಪಿಂಡಗಳು ಮಾಡುತ್ತವೆ.
ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ನೀರಿನ ಅಗತ್ಯವಿರುತ್ತದೆ. ಹೀಗಾಗಿ ನೀರನ್ನು ಚೆನ್ನಾಗಿ ಸೇವನೆ ಮಾಡುವುದು ಮುಖ್ಯವಾಗುತ್ತದೆ. ಇದರಿಂದ ರಕ್ತವೂ ಶುದ್ಧಿಯಾಗುತ್ತದೆ, ಕುರು ಅಥವಾ ಇನ್ನಿತರ ಸಮಸ್ಯೆಗಳೂ ಕೂಡ ಪದೇ ಪದೇ ಬಾಧಿಸುವುದಿಲ್ಲ.